ದೊಡ್ಡಬಳ್ಳಾಪುರದಲ್ಲಿ ಜಾತಿ ಎಂದೂ ಗೆದ್ದಿಲ್ಲ...
ಕೆ.ಆರ್.ರವಿಕಿರಣ್
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಏ.7
ರಾಜ್ಯದೆಲ್ಲೆಡೆ ವಿಧಾನಸಭೆ ಚುನಾವಣೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಈ ಚುನಾವಣೆಯಲ್ಲಿ ಹಣ, ಜಾತಿ, ಹೆಂಡ, ಪ್ರತಿಷ್ಠೆಗಳು ವಹಿಸುವ ನಿರ್ಣಾಯಕ ಪಾತ್ರದ ಕುರಿತೂ ವಿಶ್ಲೇಷಣೆಗಳು ಬರುತ್ತಿವೆ. ದೊಡ್ಡಬಳ್ಳಾಪುರ ಈ ಬಾರಿ ಘಟನಾನುಘಟಿ ರಾಜಕಾರಣಿಗಳ ಸ್ಪರ್ಧೆಯಿಂದ ಗಮನ ಸಳೆಯುತ್ತಿದೆ. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಗೆಲ್ಲುವ ನಿರೀಕ್ಷೆಗಳೂ ನಡೆದಿವೆಯಾದರೂ ಈವರೆಗೆ ಕ್ಷೇತ್ರದಲ್ಲಿ ಜಾತಿ ಗೆದ್ದೇ ಇಲ್ಲ ಎಂಬುದು ವಿಶೇಷ.
ಕ್ಷೇತ್ರದ ಮೊದಲ ಶಾಸಕರಾದ ಟಿ.ಸಿದ್ಧಲಿಂಗಯ್ಯ ಅವರಿಂದ ಹಿಡಿದು ಜಿ.ರಾಮೇಗೌಡ, ಆರ್.ಎಲ್.ಜಾಲಪ್ಪ, ಆರ್.ಜಿ.ವೆಂಕಟಾಚಲಯ್ಯ, ವಿ.ಕೃಷ್ಣಪ್ಪ ಮತ್ತು ಹಾಲಿ ಶಾಸಕ ಜೆ.ನರಸಿಂಹಸ್ವಾಮಿ ಅವರವರೆಗೆ ಕ್ಷೇತ್ರದ ಜನ ವ್ಯಕ್ತಿ ಪ್ರತಿಷ್ಠೆ ಮತ್ತು ಜನಪ್ರಿಯತೆಗೆ ಮಣೆ ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಶಾಸನಸಭೆ ಜಾರಿಗೆ ಬಂದ 1952ರಿಂದ ಇಲ್ಲಿಯವರೆಗೆ ಸಾಮಾನ್ಯ ಕ್ಷೇತ್ರವೇ ಆಗಿರುವ ದೊಡ್ಡಬಳ್ಳಾಪುರ ಕಳೆದ 3 ದಶಕಗಳಿಂದ ಅಕ್ಷರಶಃ ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಅವರ ಭದ್ರಕೋಟೆಯಾಗಿಯೇ ಉಳಿದುಕೊಂಡಿದೆ. ಒಕ್ಕಲಿಗರ ಮತ್ತು ಪರಿಶಿಷ್ಟ ಜಾತಿ-ಪಂಗಡದ ಪ್ರಾಬಲ್ಯವಿರುವ ಈ ಕ್ಷೇತ್ರದ 61 ವರ್ಷಗಳ ಇತಿಹಾಸದಲ್ಲಿ ಬರೋಬ್ಬರಿ 25ವರ್ಷ ಈಡಿಗ ಸಮುದಾಯದ ಶಾಸಕರು, 24ವರ್ಷ ಒಕ್ಕಲಿಗ ಸಮುದಾಯದ ಶಾಸಕರು, 10 ವರ್ಷ ಲಿಂಗಾಯತ ಸಮುದಾಯದ ಶಾಸಕರು ಮತ್ತು 3 ವರ್ಷ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶಾಸಕರು ಆಡಳಿತ ನಡೆಸಿದ್ದಾರೆ. ಕ್ಷೇತ್ರದಲ್ಲಿ ಈಡಿಗ ಸಮುದಾಯದ ಮತಗಳು ಕೇವಲ 2 ಸಾವಿರ ಮಾತ್ರ. ಒಕ್ಕಲಿಗರು ಸುಮಾರು 43 ಸಾವಿರ ಮತದಾರರಿದ್ದಾರೆ. ಈ ಅಂಕಿ ಅಂಶಗಳು ಜಾತಿ ಇಲ್ಲಿ ಸಲ್ಲದು ಎಂಬುದನ್ನು ಹೇಳುತ್ತಿವೆ.
ಕ್ಷೇತ್ರದಲ್ಲಿ ಗೆದ್ದವರಾರು:1952 ಮತ್ತು 1957ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ.ಸಿದ್ಧಲಿಂಗಯ್ಯ, 1962, 1967, 1972 ಮತ್ತು 1978ರಲ್ಲಿ ಜಿ.ರಾಮೇಗೌಡ,1983, 1985, 1989 ಮತ್ತು 1994ರಲ್ಲಿ ಆರ್.ಎಲ್.ಜಾಲಪ್ಪ, 1996ರಲ್ಲಿ ಆರ್.ಜಿ.ವೆಂಕಟಾಚಲಯ್ಯ, 1999ರಲ್ಲಿ ಗಂಟಿಗಾನಹಳ್ಳಿ ವಿ.ಕೃಷ್ಣಪ್ಪ, 2004, 2008ರಲ್ಲಿ ಜೆ.ನರಸಿಂಹಸ್ವಾಮಿ ಶಾಸಕರಾಗಿದ್ದಾರೆ. ಆಪರೇಷನ್ ಕಮಲ ಪರಿಣಾಮ 2008ರಲ್ಲೇ ನಡೆದ ಉಪಚುನಾವಣೆಯಲ್ಲೂ ನರಸಿಂಹಸ್ವಾಮಿ ಜಯಗಳಿಸಿದ್ದರು.
ಜಾತಿ ಆಟ ನಡೆಯಲ್ಲ: ಕ್ಷೇತ್ರದಲ್ಲಿ ಜಾತಿ ಪ್ರಾಬಲ್ಯ ಗೆದ್ದಿರುವುದು ತೀರಾ ಕಡಿಮೆ ಸಂದರ್ಭದಲ್ಲಿ. ಅಂದರೆ ಜಾತಿ ಇಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ನಿರ್ಧರಿಸುವುದಿಲ್ಲ ಎಂಬುದು ಕಳೆದ ಅರ್ಧ ಶತಮಾನದ 10ಕ್ಕೂ ಹೆಚ್ಚು ಚುನಾವಣೆಗಳು ಸಾಬೀತು ಮಾಡಿವೆ. ಮೇಲ್ನೋಟಕ್ಕೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ ಎಂದು ಕಂಡು ಬಂದರೂ ಅಷ್ಟೇ ಪ್ರಮಾಣದಲ್ಲಿರುವ ಪರಿಶಿಷ್ಟರ ಮತಗಳು, ದೇವಾಂಗ, ಲಿಂಗಾಯತ, ಕುರುಬ ಮತ್ತು ಮುಸ್ಲಿಂ ಸಮುದಾಯಗಳ ಮತಗಳೂ ಅಭ್ಯರ್ಥಿಯ ಸೋಲು-ಗೆಲವನ್ನು ನಿರ್ಧರಿಸುವ ಶಕ್ತಿ ಹೊಂದಿವೆ.
ಕ್ಷೇತ್ರದಲ್ಲಿ ಆಗಿರೋದೇನು: ಜಾತ್ಯತೀತ ಸಿದ್ಧಾಂತ ಎಲ್ಲಿ ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬಂದಿದೆಯೋ ಗೊತ್ತಿಲ್ಲ, ಆದರೆ ದೊಡ್ಡಬಳ್ಳಾಪುರದಲ್ಲಿ ಮಾತ್ರ ಜಾತಿ ಹೆಸರಿನಲ್ಲಿ ಈವರೆಗೆ ವ್ಯಕ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಸತತ 4 ಬಾರಿ ಶಾಸಕರಾಗಿರುವ ಜಿ.ರಾಮೇಗೌಡ ಮತ್ತು ಆರ್.ಎಲ್.ಜಾಲಪ್ಪ ಕ್ಷೇತ್ರದಲ್ಲಿ ಅನೇಕ ಪ್ರಗತಿಪರ ಕಾರ್ಯ ಯೋಜನೆಗಳನ್ನು ಜಾರಿಗೆ ತಂದಿದ್ದಾರಾದರೂ ಪ್ರಗತಿಗೆ ಪೂರಕವಾದ ವೇಗದಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಇನ್ನು 3
ಬಾರಿ ಶಾಸಕರಾಗಿರುವ ಹಾಲಿ ಶಾಸಕ ಜೆ.ನರಸಿಂಹಸ್ವಾಮಿ ಸಮಕಾಲೀನ ಸಂದರ್ಭಕ್ಕೆ ಬೇಕಾದ ರೀತಿಯ ರಾಜಕೀಯ ಚಾಣಾಕ್ಷ್ಯತೆ ಮತ್ತು ಅಭಿವೃದ್ಧಿ ರಾಜಕಾರಣದಲ್ಲಿ ಗಣನೀಯವಾಗಿ ಅಲ್ಲದಿದ್ದರೂ ಸಮಾಧಾನಕರವಾಗಿ ತೊಡಗಿಕೊಂಡಿದ್ದಾರೆ. 2 ಬಾರಿ ಶಾಸಕರಾಗಿದ್ದ ಟಿ.ಸಿದ್ದಲಿಂಗಯ್ಯ ಸ್ವಾತಂತ್ರ್ಯ ಹೋರಾಟದ ಕೊಂಡಿ. ತಲಾ ಒಂದು ಬಾರಿ ಶಾಸಕರಾಗಿರುವ ಆರ್.ಜಿ. ವೆಂಕಟಾಚಲಯ್ಯ ಮತ್ತು ಗಂಟಿಗಾನಹಳ್ಳಿ ಕೃಷ್ಣಪ್ಪ ತಮ್ಮ ಕಾರ್ಯಾವಧಿಯಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದಾರೆ.
ಈಗ ನಡೆದಿದೆ ಜಾತಿ ಲೆಕ್ಕಾಚಾರ: ಆದರೆ ಕ್ಷೇತ್ರದಲ್ಲಿ ಈಗ ಜಾತಿ ಲೆಕ್ಕಾಚಾರ ಭರದಿಂದ ಸಾಗಿದೆ. ಒಂದು ವಿಶ್ಲೇಷಣೆ ಪ್ರಕಾರ ಒಕ್ಕಲಿಗ ಮತಬ್ಯಾಂಕ್ಗೆ ಜೆಡಿಎಸ್ನ ಚನ್ನಿಗಪ್ಪ ಮತ್ತು ಪಕ್ಷೇತರ ಬಿ.ಮುನೇಗೌಡ ಲಗ್ಗೆ ಇಡುತ್ತಾರೆ ಎಂಬ ಮಾತು ಕೇಳಿ ಬರುತ್ತಿವೆ. ಆದರೂ ಈ ಇಬ್ಬರೂ ಇತರ ಸಮುದಾಯಗಳ ಮತದಾರರನ್ನು ಓಲೈಕೆ ಮಾಡಿಕೊಳ್ಳುವ ಆಧಾರದಲ್ಲಿ ಗೆಲವಿನ ಲೆಕ್ಕಾಚಾರ ಮಾಡಬಹುದಷ್ಟೇ. ಒಂದು ವೇಳೆ ಕಾಂಗ್ರೆಸ್ ಕೂಡ ಇದೇ ಸಮುದಾಯದವರಿಗೆ ಟಿಕೆಟ್ ಕೊಟ್ಟರೆ ಲೆಕ್ಕಾಚಾರ ಕ್ಷಿಷ್ಟಕರವಾಗಲಿದೆ. ಈ ರೀತಿಯಾಗಿ ಶೇ.23ರಷ್ಟಿರುವ ಪ್ರಬಲ ಸಮುದಾಯದ ಬಗ್ಗೆಯೇ ತಲೆ ಕೆಡಿಸಿಕೊಳ್ಳುವ ಮುನ್ನ ಶೇ.77ರಷ್ಟಿರುವ ಇತರ ಸಮುದಾಯಗಳ ಕಡೆಗೂ ಗಮನ ಹರಿಸಬೇಕಿದೆ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮತದಾರರ ವಿವರ
ಒಟ್ಟು ಮತದಾರರು - 1,84,498, ಪುರುಷರು - 94532, ಮಹಿಳೆಯರು - 89961.
ಜಾತಿವಾರು ಅಂದಾಜು ಮತದಾರರು
ಒಕ್ಕಲಿಗರು-43000, ಮಾದಾರ-22000, ಛಲವಾದಿ-18000, ಕುರುಬ-12000, ದೇವಾಂಗ-12000, ಲಿಂಗಾಯತ-11000, ಭೋವಿ-9000, ಮುಸ್ಲಿಂ-8000, ಗೊಲ್ಲ-6000, ಬಣಜಿಗ-6000, ಲಂಬಾಣಿ-3000, ಬ್ರಾಹ್ಮಣ-3000, ಕ್ರಿಶ್ಚಿಯನ್-3000, ವಿಶ್ವಕರ್ಮ-3000, ಮಡಿವಾಳ-3000, ವೈಶ್ಯ-3000, ವಹ್ನಿಕುಲ-3000, ಕುಂಬಾರ-3000, ಈಡಿಗ-2000, ಬೆಸ್ತ-2000, ಹೂವಾಡಿಗ-2000 ಮತ್ತು ಇತರೆ-7 ಸಾವಿರದಷ್ಟು ಮತದಾರರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

