ಬೆಂಗಳೂರು ಗ್ರಾಮಾಂತರ

ಎಚ್ಡಿಕೆ ಜರಿಯುವವರಿಗೆ ನಾಚಿಕೆಯಾಗಬೇಕು

Published On :

ಕ.ಪ್ರಭ. ವಾರ್ತೆ   ರಾಮನಗರ   ಏ.10
ವಿದೇಶಿ ಮಹಿಳೆ ಸೋನಿಯಾಗಾಂಧಿ ಅವರನ್ನು ತಮ್ಮ ಅಧಿನಾಯಕಿ ಎಂದು ಪೂಜಿಸುವ ಕಾಂಗ್ರೆಸಿಗರಿಗೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೊರಗಿನವರು ಎದು ಜರಿಯಲು ನಾಚಿಕೆ ಆಗುವುದಿಲ್ಲವೇ ಎಂದು ಶಾಸಕ ಕೆ.ರಾಜು ಪ್ರಶ್ನಿಸಿದರು.  
ಕುಮಾರಸ್ವಾಮಿ 20 ವರ್ಷದಿಂದ ರಾಮನಗರದ ಜನತೆಯೊಂದಿಗೆ ಬೆರೆತು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರು ಮೂಡಿಸಿರುವ ಸಾಕ್ಷಿ ಗುಡ್ಡೆಗಳು ಇಲ್ಲಿ ಸಾಕಷ್ಟಿವೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸಿಗರಿಗೆ ಎದಿರೇಟು ನೀಡಿದರು. ಜೆ.ಎಚ್.ಪಟೇಲ್ ಸರ್ಕಾರದಲ್ಲಿ ರಚನೆಯಾದ ಜಿಲ್ಲೆಗಳ ಸ್ಥಿತಿ ಇಂದಿಗೂ ಬದಲಾಗಿಲ್ಲ. ಆದರೆ, ರಾಮನಗರ ಜಿಲ್ಲೆಯಾಗಿ 6 ವರ್ಷ ತುಂಬುವಷ್ಟರಲ್ಲಿ ಸಾಕಷ್ಟು ಬದಲಾಗಿದೆ. ಹಳ್ಳಿ, ಗಲ್ಲಿಯ ರಸ್ತೆಗಳೂ ಅಭಿವೃದ್ಧಿಯಾಗಿವೆ ಎಂದು ಅವರು ತಿಳಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವ ಸಾಕಷ್ಟು ಜನರು ರಾಮನಗರದ ಅಭಿವೃದ್ಧಿ ಕಂಡು ನಿಬ್ಬೆರಗಾಗಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ನಡೆದೇ ಇಲ್ಲ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ತಾವು ಏನೆಲ್ಲಾ ಮಾಡಿದ್ದೇವೆ ಎನ್ನುವುದನ್ನು ಜನತೆ ಮುಂದೆ ಹೇಳಲಿ ಎಂದು ರಾಜು ಸವಾಲು ಹಾಕಿದರು.
ತಾಳೆ ಹಾಕಲಾಗದು: ನಗರಸಭೆ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸಿಗರು ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಆ ಫಲಿತಾಂಶಕ್ಕೂ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೂ ತಾಳೆ ಹಾಕಲಾಗದು. ಕುಮಾರಸ್ವಾಮಿ ಅವರು ಕಳೆದ ಬಾರಿಗಿಂತಲೂ ಅಧಿಕ ಮತಗಳ ಅಂತರದ ಗೆಲವು ಸಾಧಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ಮಂಜೂರಾತಿಗೆ ಕಮೀಷನ್ ನೀಡಬೇಕಿದೆ. ಇಂತಹ ಸ್ಥಿತಿಯಲ್ಲೂ ಶಾಸಕರಾಗಿ ತಾವು 380 ಕೋಟಿ ವೆಚ್ಚದ ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿರುವುದಾಗಿ ರಾಜು ವಿವಿಧ ದಾಖಲೆಗಳೊಂದಿಗೆ ವಿವರಿಸಿದರು.
ನಿವೇಶನ ಹಂಚಿಕೆ ವಿಷಯದಲ್ಲಿ ಕಾನೂನು ಸಹಿತ ವಿವಿಧ ತೊಡಕುಗಳಿಂದ ವಿಳಂಬವಾಗಿದೆ. ಯೋಜನೆ ಅಂತಿಮ ಹಂತಕ್ಕೆ ತಲುಪಿದ್ದು, ಚುನಾವಣೆ ಬಳಿಕ ಮೊದಲ ಹಂತದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಮನೆ ನಿರ್ಮಾಣ ಕಾಮಗಾರಿಯೂ ಮುಂದುವರೆದಿದೆ ಎಂದರು.
ಯಾರು ಕಟ್ಟುತ್ತಾರೆ: ರಾಮನಗರದಲ್ಲಿ ಕೆಲ ಮುಖಂಡರ ಪಕ್ಷಾಂತರ ನಿರಂತರ ಪ್ರಕ್ರಿಯೆ. ಪ್ರತಿ ಚುನಾವಣೆ ಬಂದಾಗಲೂ ಪಕ್ಷದಿಂದ ಪಕ್ಷಕ್ಕೆ ಹಾರುವುದೇ ಅವರ ಕೆಲಸವಾಗಿದೆ ಎಂದು ಕೆ.ಶೇಷಾದ್ರಿ, ಪಿ.ನಾಗರಾಜು ಅವರ ಹೆಸರು ಪ್ರಸ್ತಾಪಿಸದೆ ರಾಜು ಟೀಕಿಸಿದರು.
ರಾಮನಗರದಿಂದ ಕುಮಾರಸ್ವಾಮಿ ಅವರನ್ನು ಗಂಟು-ಮೂಟೆ ಕಟ್ಟುವಂತೆ ಮಾಡುತ್ತೇವೆಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆ ಬಳಿಕ ಯಾರು ಗಂಟು-ಮೂಟೆ ಕಟ್ಟುತ್ತಾರೆ ಎನ್ನುವುದು ತಿಳಿಯುತ್ತದೆ. ನನ್ನ ವಿರುದ್ಧದ ಲೋಕಾಯುಕ್ತ ಪ್ರಕರಣದಲ್ಲಿ ನಿರ್ದೋಷಿಯಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಣ ಇದ್ದವರೆಲ್ಲಾ ಗೆಲ್ಲುವುದಾಗಿದ್ದರೆ ದೇಶ, ರಾಜ್ಯದ ಆಡಳಿತವು ಉದ್ಯಮಿಗಳ ಮುಷ್ಠಿಯಲ್ಲಿರುತ್ತಿತ್ತು. ಇನ್ನು ಮುಂದಾದರೂ ಕಾಂಗ್ರೆಸ್ ನಾಯಕರು ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಬೇಕು ಎಂದರು. ಜೆಡಿಎಸ್ ಮುಖಂಡರಾದ ರಾಜಶೇಖರ್, ಕೆ.ದೇವೇಗೌಡ, ಪರ್ವೇಜ್ಪಾಷ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.