ಗೆಲವಿಗಾಗಿ ಅಭ್ಯರ್ಥಿಗಳಿಂದ ಕಸರತ್ತು
ಕ.ಪ್ರ. ವಾರ್ತೆ , ನೆಲಮಂಗಲ , ಏ. 21
ಚುನಾವಣೆ ಕಣದಲ್ಲಿ ಉಳಿದುಕೊಂಡಿರುವ ಅಭ್ಯರ್ಥಿಗಳು ತಮ್ಮ ಗೆಲವಿಗಾಗಿ ಹಲವಾರು ಕಸರತ್ತುಗಳನ್ನು ನಡೆಸಿ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚನೆಯಲ್ಲಿ ತೊಡಗುತ್ತಿರುವುದರಿಂದ ರಾಜಕೀಯ ಬಿಸಿ ಏರತೊಡಗಿದೆ.
ಕಾಂಗ್ರೆಸ್ ಅಭ್ಯರ್ಥಿ ಅಂಜನಮೂರ್ತಿ ಸ್ಥಳೀಯ ಚುನಾಯಿತ ಸದಸ್ಯರೊಂದಿಗೆ ಕ್ಷೇತ್ರದ 243 ಮತ ಕ್ಷೇತ್ರಗಳಿಗೂ ವೇಳಾಪಟ್ಟಿ ಸಿದ್ಧಪಡಿಸಿಕೊಂಡಿದ್ದು, ವೇಳಾಪಟ್ಟಿಯಂತೆ ಪೂರ್ವ ತಯಾರಿಯಲ್ಲಿ ಪಕ್ಷದ ಕಾರ್ಯಕರ್ತರು ಆಯಾ ಗ್ರಾಮಗಳಲ್ಲಿ ಸಿದ್ಧತೆ ಮಾಡುತ್ತಿದ್ದು, ಅಭ್ಯರ್ಥಿಯ ಭೇಟಿಗೂ ಮುನ್ನ ಜನರನ್ನು ಒಟ್ಟು ಗೂಡಿಸಿ ಮತಯಾಚಿಸಲು ಸುಲಭ ಮಾಡುತ್ತಿದ್ದಾರೆ. ಈಗಾಗಲೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ವಿವಿಧ ಪಕ್ಷಗಳ ನಾಯಕರ ಸೇರ್ಪಡೆ ಮಾಡಿಕೊಂಡು ಒಂದು ಸುತ್ತು ಪ್ರಚಾರ ನಡೆಸಿದ್ದಾರೆ.
ಜೆಡಿಎಸ್ನ ಡಾ.ಶ್ರೀನಿವಾಸಮೂರ್ತಿ ಅವರು ಸ್ಥಳೀಯ ಚುನಾಯಿತರು ಮತ್ತು ನಾಯಕರೊಂದಿಗೆ ಗುಂಪು ಗುಂಪಾಗಿ ತೆರಳಿ ಮತ ಭೇಟೆಯಲ್ಲಿ ತೊಡಗಿದ್ದಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ನಾಯಕರು ಇವರ ಪ್ರಚಾರಕ್ಕೆ ಸಾಥ್ ನೀಡುತ್ತಿದ್ದಾರೆ.
ಸ್ಪಂದಿಸುವೆ: ಕೆಜೆಪಿ ಪಕ್ಷದ ಅಭ್ಯರ್ಥಿ ಎಚ್.ಪಿ.ಚಲುವರಾಜು ತಮ್ಮ ಬೆಂಬಲಿಗರು ಮತ್ತು ಕೆಲವು ಪ್ರಮುಖ ಜನಾಂಗದ ನಾಯಕರೊಂದಿಗೆ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಪಕ್ಷದ ಬಗ್ಗೆ ಹಾಗೂ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸುತ್ತ ಪ್ರತಿ ದಿನ ವಿವಿಧ ಪಕ್ಷಗಳಿಂದ ಬರುತ್ತಿರುವ ನಾಯಕರು ಕಾರ್ಯಕರ್ತರನ್ನು ಸೇರಿಸಿಕೊಂಡು ಪ್ರಚಾರ ಕೈಗೊಳ್ಳುತ್ತಿದ್ದಾರೆ.
ಚುನಾವಣಾ ತಂತ್ರ: ಬಿಜೆಪಿಯ ಶಾಸಕ ನಾಗರಾಜು ಅವರ ಪ್ರಚಾರ ಶೈಲಿಯಂತು ವಿಶೇಷವಾಗಿದೆ. ಕೆಲವು ಕಡೆ ಬೆಳಗ್ಗೆಯೇ ಏಕಾಂಗಿಯಾಗಿ ಕಾರು ಚಲಿಸಿಕೊಂಡು ನಾಯಕರ ಮನೆಗೆ ಭೇಟಿ ನೀಡುವ ಮೂಲಕ ಚುನಾವಣಾ ತಂತ್ರ ರೂಪಿಸುತ್ತಿದ್ದಾರೆ.
ಆದರೆ ಪ್ರತಿ ದಿನ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಕರಗುತ್ತಿರುವುದು ನಾಗ ರಾಜು ಅವರಿಗೆ ತುಂಬಾ ಸಮಸ್ಯೆಯಾಗಿದೆ. ಪಕ್ಷದ ಬೆನ್ನೆಲುಬಾಗಿದ್ದ ಸಂಘ ಪರಿವಾರದವರು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೆ ದೂರವಿದ್ದರೂ ಅವರನ್ನು ಓಲೈಸಿಕೊಳ್ಳಲು ಮುಂದಾಗಿಲ್ಲ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಬರುವ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಇಲ್ಲ.
ಮೆರವಣಿಗೆ ಮೂಲಕ: ಪಕ್ಷೇತರ ಅಭ್ಯರ್ಥಿಗಳ ಪೈಕಿ ಸರ್ಕಾರಿ ನೌಕರರಾಗಿದ್ದು ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿಯಾಗಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಸ್ವಯಂ ನಿವೃತ್ತಿ ಪಡೆದು ಕೆಜೆಪಿ ಪಕ್ಷದಿಂದ ಟಿಕೆಟ್ ವಂಚಿತರಾದ ಮೇಲೆ ಬಂಡಾಯ ಅಭ್ಯರ್ಥಿಯಾಗಿರುವ ಚೌಡಯ್ಯ ತಮ್ಮ ಕುಟುಂಬ ಸದಸ್ಯರು ಹಾಗೂ ಬೆಂಬಲಿಗ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಮತದಾರರನ್ನು ಒಲಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳ ಪೈಕಿ ಕೆಲವರು ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ ತಮ್ಮ ವೈಯಕ್ತಿಯ ಪರಿಚಯ ಮಾಡಿಕೊಂಡು ಮತ ಯಾಚಿಸುತ್ತಿದ್ದರೆ ಇನ್ನೂ ಕೆಲವು ಪಕ್ಷೇತರರು ನಾಮ ಪತ್ರ ಸಲ್ಲಿಸಿದ್ದು ಬಿಟ್ಟರೆ ಎಲ್ಲಿಯೂ ಪ್ರಚಾರಕ್ಕೆ ತೆರಳುತ್ತಿಲ್ಲ. ಕಾರಣ ತಿಳಿಸುತ್ತಲೂ ಇಲ್ಲ. ಮುಂದೆ ನಾವು ಅಪಾರ ಬೆಂಬಲಿಗರೊಂದಿಗೆ ಕ್ಷೇತ್ರದ ಉದ್ದಕ್ಕೂ ಪ್ರಚಾರ ಕಾರ್ಯ ಮಾಡುತ್ತೇವೆ ಎನ್ನುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

