ಬೆಂಗಳೂರು ಗ್ರಾಮಾಂತರ

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

Published On :

ರಾಮನಗರ: ವಿಧಾನಸಭಾ ಚುನಾವಣೆಗೆ ನಿಯೋಜಿತರಾಗಿರುವ ರಾಮನಗರ ಮತ್ತು ಮಾಗಡಿ ಕ್ಷೇತ್ರಗಳ ಮತಗಟ್ಟೆ ಅಧಿಕಾರಿಗಳು, ಸಹಾಯಕ ಅಧಿಕಾರಿಗಳಿಗೆ ಆಯಾ ತಾಲೂಕು ಕೇಂದ್ರದಲ್ಲಿ ಸೋಮವಾರ ತರಬೇತಿ  ನಡೆಯಿತು.  ರಾಮನಗರದ ಶ್ರೀರಾಮ ಚಿತ್ರಮಂದಿರದಲ್ಲಿ ನಡೆದ  ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮನಗರ ಕ್ಷೇತ್ರ ಚುನಾವಣಾಧಿಕಾರಿ ಡಾ.ರಾಜೇಂದ್ರ ಪ್ರಸಾದ್, ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.  ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರು ತಮಗೆ ವಹಿಸಿದ ಕೆಲಸಗಳನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕು. ಯಾವುದೇ ಹಂತದಲ್ಲೂ ಲೋಪದೋಷಗಳಿಗೆ ಅವಕಾಶ ನೀಡಬಾರದು.  ಚುನಾವಣಾ ಕರ್ತವ್ಯಕ್ಕೆ ಯಾರಾದರೂ ಗೈರು ಹಾಜರಾದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.   ತಹಸೀಲ್ದಾರ್ ಹನುಮಂತರಾಯಪ್ಪ ಹಾಜರಿದ್ದರು. ತರಬೇತಿಯನ್ನು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ನವೀನ್‌ರಾಜ್ ಸಿಂಗ್ ವೀಕ್ಷಿಸಿದರು. ತಲಾ 263 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕರ ಅಧಿಕಾರಿಗಳು ಭಾಗವಹಿಸಿದ್ದರು.  ಮಾಗಡಿಯ ಬಾಲಾಜಿ ಚಿತ್ರಮಂದಿರದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ಭಾಗವಹಿಸಿದ್ದರು. ತಲಾ 288 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ಭಾಗವಹಿಸಿದ್ದರು. ಕ್ಷೇತ್ರದ ಚುನಾವಣಾಧಿಕಾರಿ ವೈಶಾಲಿ ಹಾಗೂ ತಹಸೀಲ್ದಾರ್ ಹರೀಶ್ ನಾಯಕ್ ಹಾಜರಿದ್ದರು.
ಅರ್ಕಾವತಿ ಚಿತ್ರಮಂದಿರದಲ್ಲಿ  ತರಬೇತಿ: ಕನಕಪುರ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ನೇಮಕಾತಿ ಆದೇಶದೊಂದಿಗೆ ನಮೂನೆ 12 ಅನ್ನು ಕಳುಹಿಸಲಾಗಿದೆ. ಚುನಾವಣಾ ಸಿಬ್ಬಂದಿ ನಮೂನೆಯಲ್ಲಿ ತಮ್ಮ ವಿಧಾನಸಭಾ ಕ್ಷೇತ್ರದ ಹೆಸರು, ಸಂಖ್ಯೆ, ತಮ್ಮ ಹೆಸರು, ಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ಭರ್ತಿ ಮಾಡಿ ಏ.23ರಂದು ಕನಕಪುರದ ಅರ್ಕಾವತಿ ಚಿತ್ರಮಂದಿರದಲ್ಲಿ ನಡೆಯುವ ತರಬೇತಿಗೆ ತಪ್ಪದೆ ಹಾಜರಾಗಬೇಕು.  ಭರ್ತಿ ಮಾಡಿದ ನಮೂನೆ 12ಅನ್ನು  ತರಬೇತಿ ಕೇಂದ್ರದ ಅಂಚೆ ಮತದಾನ ಫೆಸಿಲಿಟೇಷನ್ ಕೇಂದ್ರದಲ್ಲಿ ಸ್ವೀಕರಿಸಲಾಗುವುದು. ಮೂಲ ಮತದಾರರ ಗುರುತಿನ ಚೀಟಿಯನ್ನು ತರಬೇತಿಗೆ ತಪ್ಪದೆ ತರಬೇಕು ಎಂದು ಕನಕಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

ಡಾ.ಪಿಬಿಎಸ್ ಗಾನ ನಮನ ಕಾರ್ಯಕ್ರಮ
ದೊಡ್ಡಬಳ್ಳಾಪುರ: ಸ್ವರಗಂಧರ್ವ ಡಾ.ಪಿ.ಬಿ.ಶ್ರೀನಿವಾಸ್ ಅವರಿಗೆ ಗಾನ ನಮನದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಸಂಸ್ಕೃತಿ ಟ್ರಸ್ಟ್ ನೇತೃತ್ವದಲ್ಲಿ ಶ್ರೀರಾಮಾಂಜನೇಯಸ್ವಾಮಿ ಕಲ್ಯಾಣ ಮಂದಿರದಲ್ಲಿ ಏ.24ರ ಬುಧವಾರ ಸಂಜೆ 5.30ಕ್ಕೆ ನಡೆಯಲಿದೆ. ಕನ್ನಡ ಚಿತ್ರರಂಗದ ಹೆಸರಾಂತ ಚಿತ್ರತಾರೆಯರು, ಪಿಬಿಎಸ್ ಒಡನಾಡಿಗಳು ಮತ್ತು ಅಭಿಮಾನಿಗಳ ಭಾಗವಹಿಸಲಿದ್ದು, ನಾಡಿನ ಖ್ಯಾತ ಗಾಯಕರು ಡಾ.ಪಿ.ಬಿ.ಶ್ರೀನಿವಾಸ್ ಅವರ ಎಂದೂ ಮರೆಯದ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಇಲ್ಲಿನ ಬೆಂ.ಗ್ರಾ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅನಿಕೇತನ ಟ್ರಸ್ಟ್, ಸರ್ಕಾರಿ ನೌಕರರ ಸಂಘ, ಶ್ರೀನೆಲದಾಂಜನೇಯಸ್ವಾಮಿ ಸೇವಾ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಕೃತಿ ಅಧ್ಯಕ್ಷ ಎಚ್.ಎಸ್.ನಾಗೇಶ್ ತಿಳಿಸಿದ್ದಾರೆ.

24ರಂದು ಕೆಜೆಪಿ ಸಭೆ
ನೆಲಮಂಗಲ: 2013ರ ವಿಧಾನಸಭಾ ಚುನಾವಣೆಯಲ್ಲಿ ನೆಲಮಂಗಲ ಕ್ಷೇತ್ರದಲ್ಲಿ ಕೆ.ಜೆ.ಪಿ ಪಕ್ಷದ ಅಭ್ಯರ್ಥಿ ಹೆಚ್.ಪಿ.ಚಲುವರಾಜು ಅವರು ಮತಯಾಚಿಸಲು ಏಪ್ರಿಲ್  24ರ ಬುಧವಾರ ಪಟ್ಟಣದ ಬಸವಣ್ಣ ದೇವರಮಠದಲ್ಲಿ ಸಾರ್ವತ್ರಿಕ ಹಾಗೂ ಪಕ್ಷದ ಕಾರ್ಯಕರ್ತರ ಸಭೆಯನ್ನು ಏರ್ಪಡಿಸಲಾಗಿದೆ. ಕೆ.ಜೆ.ಪಿ ಮುಖಂಡರಾದ ಮಾಜಿ ಸಚಿವೆ ಶೋಭಾಕರಂದ್ಲಾಜೆ ಮತ್ತು ಧನಂಜಯಕುಮಾರ್, ಪರಮಶಿವಯ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕೆ.ಜೆ.ಪಿ ಮುಖಂಡ ತೀರ್ಥೆಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.