ಬೆಂಗಳೂರು ಗ್ರಾಮಾಂತರ

ಚುನಾವಣೆ ಫಸ್ಟ್‌ಕ್ಲಾಸ್‌ನಲ್ಲಿ ಪಾಸ್

Published On :

ಬೆಂಗಳೂರು: ಬಿಜೆಪಿಯ ತಿಕ್ಕಾಟ, ಗೊಂದಲಗಳು ಇದೀಗ ಕಾಂಗ್ರೆಸ್‌ಗೆ ವರ್ಗಾವಣೆಯಾಗಿವೆ. ನಮ್ಮದು ಈಗ ಒಗ್ಗಟ್ಟಿನ ಪಕ್ಷವಾಗಿದೆ.
ರಾಜ್ಯದಲ್ಲಿ ಐದು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿಯನ್ನು ಪರಿಗಣಿಸಿ ಜನ ಚುನಾವಣೆಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಮಾಡಿ ಮತ್ತೆ ಅಧಿಕಾರಕ್ಕೆ ತರಲಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಬುಧವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಉಪಮುಖ್ಯಮಂತ್ರಿ ಆರ್. ಅಶೋಕ ಅವರ ವಿಶ್ವಾಸದ ನುಡಿ ಇದು.
ಬಿಜೆಪಿಯಲ್ಲಿದ್ದ ಕೊಳೆ ಹೋಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಡಿ.ವಿ. ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ಇದರ ಜತೆಗೆ ಪಕ್ಷದಲ್ಲಿ ಒಗ್ಗಟ್ಟು ಮೂಡಿದ್ದು, ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ಹೀಗಾಗಿ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.
'ಆಡಳಿತದಲ್ಲಿ ನಾನಿನ್ನೂ ವಿದ್ಯಾರ್ಥಿ. ವಿದ್ಯಾರ್ಥಿಯೇ ಪರೀಕ್ಷೆಯಲ್ಲಿ ತಾನು ಎಷ್ಟು ಅಂಕ ಗಳಿಸುತ್ತೇನೆ ಎಂದು ಹೇಳುವುದು ಸೂಕ್ತವಲ್ಲ. ನಮ್ಮ ಪರೀಕ್ಷೆಯ ಮೌಲ್ಯಮಾಪನ ಮಾಡಿ ಅಂಕ ಕೊಡಬೇಕಾದವರು ಮತದಾರರು. ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಪರಿಗಣಿಸಿ ಆತ ಪ್ರಥಮ ದರ್ಜೆಯ ಅಂಕ ಕೊಟ್ಟು ಬಿಜೆಪಿಯನ್ನು ತೇರ್ಗಡೆ ಮಾಡುತ್ತಾನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ವಿಚಾರದಲ್ಲಿ ರಾಜಿಯಾಗದೆ ಕೆಲಸ ಮಾಡಿದ್ದೇವೆ. ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪಕ್ಷದೊಳಗಿನ ಕೆಲ ಲೋಪಗಳ ನಡುವೆಯೂ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಸಾರಿಗೆ ಕ್ಷೇತ್ರದಲ್ಲಿ ಕರ್ನಾಟಕ ನಂ. 1 ಆಗಿದ್ದು, 53 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಕಾನೂನು ಸುವ್ಯವಸ್ಥೆ ಪಾಲನೆಯಲ್ಲೂ ಗಮನಾರ್ಹ ಸಾಧನೆ ಮಾಡಲಾಗಿದೆ. ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೆ ತಂದ ಏಕೈಕ ರಾಜ್ಯ ಎಂಬ ಕೀರ್ತಿ ಕರ್ನಾಟಕಕ್ಕೆ ಸಂದಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಬೆಂಗಳೂರು ಹಸಿರು ನಗರಿ, ಕಣ್ಗಾವಲು: ಮೆಟ್ರೋ ಯೋಜನೆ, ರಸ್ತೆ ವಿಸ್ತರಣೆ ಕಾರ್ಯಗಳು ಮುಕ್ತಾಯದ ಹಂತದಲ್ಲಿದ್ದು, ಈ ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲಾ ಕಡೆ ಗಿಡಗಳನ್ನು ನೆಟ್ಟು ಬೆಂಗಳೂರನ್ನು ಹಸಿರು ನಗರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಜತೆಗೆ ಬೆಂಗಳೂರಿನ ನಾಲ್ಕೂ ಕಡೆ ಕಬ್ಬನ್‌ಪಾರ್ಕ್ ಮಾದರಿ ಉದ್ಯಾನವನಗಳನ್ನು ಸ್ಥಾಪಿಸುವ ಉದ್ದೇಶವಿದೆ. ಇದರ ಜತೆಗೆ ಎಲ್ಲಾ ಸಿಗ್ನಲ್‌ಗಳು, ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿ ಇಡೀ ಬೆಂಗಳೂರಿಗೆ ಕಣ್ಗಾವಲು ಹಾಕಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಉದ್ದೇಶವನ್ನು ಪಕ್ಷ ಹೊಂದಿದೆ ಎಂದು ಹೇಳಿದರು.
ಕೇಂದ್ರ ನೀಡಿದ್ದು ಭಿಕ್ಷೆ ಮಾತ್ರ: ರಾಜ್ಯದಲ್ಲಿ ಕೈಗೊಂಡಿರುವ ಯೋಜನೆಗಳು ಕೇಂದ್ರ ಸರ್ಕಾರದ ಅನುದಾನದಿಂದ ಜಾರಿಗೆ ಬಂದವುಗಳು ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಅಶೋಕ ಅವರು,
ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೆ ಕೇಂದ್ರ ಬಿಡುಗಡೆ ಮಾಡಿರುವ ಅನುದಾನವನ್ನು ತುಲನೆ ಮಾಡಿದಾಗ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಭಿಕ್ಷೆಯ ರೀತಿಯಲ್ಲಿ ಅನುದಾನ ಕೊಟ್ಟಿದೆ. ಹೀಗಾಗಿ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿದ ವಿಚಾರದಲ್ಲಿ ಮಾತನಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ ಎಂದರು.
ನರ್ಮ್ ಯೋಜನೆಯಡಿ ಸಾರಿಗೆ ಇಲಾಖೆಗೆ ಬಂದ ಅನುದಾನದ ಕುರಿತು ಪ್ರತಿಕ್ರಿಯಿಸಿ, ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಗರ ಬೆಂಗಳೂರು. ಈ ತೆರಿಗೆಯ ಪೈಕಿ ಸ್ವಲ್ಪ ಭಾಗವನ್ನು ಮಾತ್ರ ಅದು ರಾಜ್ಯಕ್ಕೆ ನೀಡಿದೆ.  ನರ್ಮ್ ಯೋಜನೆಯಡಿ ಕೇಂದ್ರವೇ ಅನುದಾನ ನೀಡಿದೆ ಎನ್ನುವುದಾದರೆ ಉಳಿದ ರಾಜ್ಯಗಳು ಏಕೆ ಈ ಅನುದಾನ ಬಳಸಿಕೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ನರ್ಮ್ ಯೋಜನೆಯಡಿ ಸಾರಿಗೆ ಇಲಾಖೆಗೆ ಶೇ. 35ರಷ್ಟು ಅನುದಾನವನ್ನು ಮಾತ್ರ ಕೇಂದ್ರ ನೀಡಿದ್ದು, ಉಳಿದ ಹಣವನ್ನು ಸಾರಿಗೆ ಇಲಾಖೆಯೇ ಭರಿಸಿದೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.