ಬೆಂಗಳೂರು ಗ್ರಾಮಾಂತರ

ಬಿಜೆಪಿ ಸೇರಿದ ಶಿಲ್ಪಾ ಗಣೇಶ್ (ಸುದ್ದಿ ಸಂಕ್ಷೇಪ)

Published On :

ಬೆಂಗಳೂರು: ಚಿತ್ರನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಸೋಮವಾರ ಬಿಜೆಪಿ ಸೇರಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಆರ್. ಅಶೋಕ ಅವರು ಪಕ್ಷದ ಧ್ವಜ ನೀಡುವ ಮೂಲಕ ಶಿಲ್ಪಾ ಗಣೇಶ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಜತೆಗಿದ್ದ ನಟ ಗಣೇಶ್ ಮಾತನಾಡಿ, ನನಗೆ ಚಿತ್ರರಂಗದ ಮೇಲೆ ಆಸಕ್ತಿ ಇರುವಂತೆ ಪತ್ನಿಗೆ ರಾಜಕೀಯದಲ್ಲಿ ಹೆಚ್ಚು ಆಸಕ್ತಿ. ಹೀಗಾಗಿ ಆಕೆ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಅವಳಿಗೆ ಎಲ್ಲಾ ರೀತಿಯ ನೈತಿಕ ಬೆಂಬಲ ನೀಡುತ್ತಾ ನಾನು ಮಾತ್ರ ಚಿತ್ರರಂಗದಲ್ಲೇ ಮುಂದುವರಿಯುತ್ತೇನೆ ಎಂದರು. ಮಲ್ಲೇಶ್ವರ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚುನಾವಣೆಯಲ್ಲಿ ಆರ್‌ಪಿಐನ 20 ಅಭ್ಯರ್ಥಿಗಳು
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಹಣವಿಲ್ಲದೆ ಚುನಾವಣೆ ಎದುರಿಸುತ್ತಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್ ಅಠವಳೆ ಹೇಳಿದ್ದಾರೆ. ಆರ್‌ಪಿಐ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಬದಲಾಗಿ ದಲಿತರು, ಹಿಂದುಳಿದರ ಏಳಿಗೆ ಕುರಿತ ಪ್ರಣಾಣಿಕೆಯನ್ನು ಜನರ ಮುಂದಿಟ್ಟು ಮತಯಾಚಿಸುತ್ತಿದ್ದೇವೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಂದ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಾಧ್ಯವಿಲ್ಲ. ಇದು ಈಗಾಗಲೇ ಸಾಬೀತಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಅಪರಾಧಗಳು ಹೆಚ್ಚುತ್ತಿವೆ. ಆದ್ದರಿಂದ ಮತದಾರರು ಆರ್‌ಪಿಐ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ವಿನಂತಿಸಿದರು. ನರಸಿಂಗ್‌ಪಾಟೀಲ್ (ರಾಜರಾಜೇಶ್ವರಿನಗರ), ಎಂ. ಭಾಗ್ಯ (ಪುಲಿಕೇಶಿನಗರ), ಎಂ. ವಿನೋದ್ (ಹೆಬ್ಬಾಳ), ಎಂ.ವೆಂಕಟಸ್ವಾಮಿ (ಕೆಜಿಎಫ್), ಸಿ. ರಾಮಕೃಷ್ಣಯ್ಯ (ಮುಳಬಾಗಿಲು), ಈಶ್ವರ ತೊರೆಮಾವು (ವರುಣ), ಪಿ. ಸಂಗಸೇನಾ (ಗುಂಡ್ಲುಪೇಟೆ), ಧನರಾಜ್ (ಕುಣಿಗಲ್), ಎಜಾಜ್ ಅಹಮದ್ ಫರೂಕ್ (ಹಾಸನ), ಮಸ್ತಾನ್ ದಂಡೆ (ಗುಲ್ಬರ್ಗ ಗ್ರಾಮಾಂತರ), ಶಂಕರ್ ಫೈರೇಂಜ್ (ಬೀದರ್ ದಕ್ಷಿಣ), ಲಕ್ಷ್ಮಣ್ (ಹುಮ್ನಾಬಾದ್), ಮಿಲಿಂದ್  ಗುರಜಿ (ಬಸವಕಲ್ಯಾಣ), ಮಹಾದೇವ ಗಿಗ್ಗಿ (ಯಾದಗಿರಿ), ಕರೆಪ್ಪ ತಳವಾರ್ (ಬೆಳಗಾವಿ ಗ್ರಾಮಾಂತರ), ಪ್ರಮೋದ್ ಡಿ. ಚಿಕ್ಕುರ್ಡೆ (ಬೆಳಗಾವಿ ಉತ್ತರ), ವಿಲಾಸ್‌ರಾವ್ ತಳವಾರ್ (ಖಾನಾಪುರ), ಲೋಲಾಕ್ಷ (ಭಟ್ಕಳ), ಕೆ. ಪೃಥ್ವಿರಾಜ್(ಬಳ್ಳಾರಿ ನಗರ), ಚನ್ನು ಮುಳಿಗೆವಾಡ್(ಹುಬ್ಬಳ್ಳಿ- ಧಾರವಾಡ ಪೂರ್ವ) ಸ್ಪರ್ಧಿಸಿದ್ದಾರೆ. ಇವರು ಇತರ ಅಭ್ಯರ್ಥಿಗಳಂತೆ ಹಣದ ಹೊಳೆ ಹರಿಸಿ ಚುನಾವಣೆ ಎದುರಿಸುತ್ತಿಲ್ಲ. ಬದಲಾಗಿ ತಮ್ಮ ನೈಜ ಸ್ಥಿತಿ, ಪ್ರಣಾಳಿಕೆ ಅಂಶಗಳನ್ನು ಮತದಾರನ ಮುಂದಿಟ್ಟು ಹೋರಾಡುತ್ತಿದ್ದಾರೆ ಎಂದು ಅಠವಳೆ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.