ಉಚಿತ ಪುಸ್ತಕ ವಿತರಣೆ ನಾಳೆ
ಚಿಕ್ಕನಾಯಕನಹಳ್ಳಿ: ಬೆಂಗಳೂರಿನ ಗಂಗಮ್ಮ ತಬಲದ ಸಿ.ಎಸ್ಮಲ್ಲಪ್ಪ ಸೇವಾ ಸಂಸ್ಥೆಯ ವತಿಯಿಂದ ಪ್ರತಿಭಾಪುಸಕ್ರಾ ಮತ್ತು ಉಚಿತ ಪುಸ್ತಕ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಎಂ.ಚಂದ್ರಶೇಖರಯ್ಯ ತಿಳಿಸಿದ್ದಾರೆ. ಆಗಸ್ಟ್4ರಂದು ಬೆ. 11.00ಗಂಟೆಗೆ ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾಸಂಸ್ಥೆ ಅಧ್ಯಕ್ಷರಾದ ಲತಾಚಂದ್ರಶೇಖರ್ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ದೇವಾಂಗ ಸಂಘದ ಅಧ್ಯಕ್ಷರಾದ ಕೋದಂಡರಾಮಯ್ಯನವರು ನೆರವೇರಿಸಲಿದ್ದು, ಮುಖ್ಯಅತಿಥಿಗಳಾಗಿ ಸಂಘದ ಕಾರ್ಯದರ್ಶಿಯಾದ ಸಿ.ಎ.ಕುಮಾರಸ್ವಾಮಿ, ಉಪಾಧ್ಯಕ್ಷರಾದ ಬನಶಂಕರಯ್ಯ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಜನಾಂಗದ ನಿವೃತ್ತ ಶಿಕ್ಷಕರಾದ ಜಿ.ರಂಗಯ್ಯ,ಬಿ.ಕೆ.ಕಾಡಬಸವಯ್ಯ,ಬಟ್ಲೇರಿಶಂಕರಪ್ಪ, ಸಿ.ಎನ್.ಪುಟ್ಟನರಸಿಂಹಯ್ಯ,ಸಿ.ಎಸ್.ರಂಗಸ್ವಾಮಯ್ಯ, ಎಂ.ಲಿಂಗದೇವರು ಇವರುಗಳನ್ನು ಸನ್ಮಾನಿಸಲಾಗುವುದು. ಜನಾಂಗದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಅವರು ಕೋರಿದ್ದಾರೆ.
ತಾ.ಕಚೇರಿಗೆ ಮುತ್ತಿಗೆ
ಕುಣಿಗಲ್: ಪುರಸಭೆಯ 20ನೇ ವಾರ್ಡ್ನ ಭೈರಪ್ಪ ಮನೆ ರಸ್ತೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದ ನಾಗರಿಕರು, ಶುಕ್ರವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಮುಖ್ಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಗ್ಗೆ ಮುಖಂಡರಾದ ಬೈರಪ್ಪ, ಗಣೇಶ್, ರಾಮಣ್ಣ, ಸದಸ್ಯೆ ನಳಿನಾ ನೇತೃತ್ವದಲ್ಲಿ ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೂ ಸೇರಿದಂತೆ 20 ನೇ ವಾರ್ಡ್ನ ಭೈರಪ್ಪ ರಸ್ತೆಯಲ್ಲಿರುವ ನೂರಾರು ನಾಗರಿಕರು ತಾಲೂಕು ಕಚೇರಿಗೆ ಆಗಮಿಸಿ, ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮನವಿ ಸ್ವೀಕರಿಸಿ, ಸಮಸ್ಯೆಗೆ ಪರಿಹಾರ ಸೂಚಿಸಲು ತಹಶೀಲ್ದಾರ್ ಬರುವಂತೆ ಹಲವು ಬಾರಿ ಪ್ರತಿಭಟನಾಕಾರರರು ತೆರಳಿ ಮನವಿ ಮಾಡಿದರೂ, ತಹಶೀಲ್ದಾರ್ ತಮ್ಮ ಕೊಠಡಿಯಲ್ಲಿ ಕುಳಿತಿದ್ದರು.
ಕ್ಯಾರಿ ಓವರ್ ಪದ್ಧತಿಗೆ ಆಗ್ರಹ
ತುಮಕೂರು: ಡಿಪ್ಲೊಮಾ ಕ್ಯಾರಿ ಓವರ್ ಪದ್ಧತಿ ವಿಚಾರದಲ್ಲಿ ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿ ಕಠಿಣ ಧೋರಣೆ ತಾಳಿದೆ ಎಂದು ಆರೋಪಿಸಿ ಕರ್ನಾಟಕ ಸಂಸ್ಕೃತಿ ರಕ್ಷಣಾ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು. ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಡಿಪ್ಲೊಮಾ ತಾಂತ್ರಿಕ ವಿಷಯವನ್ನು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಶೇ. 100 ಕ್ಕೆ 80 ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಿದ್ದು, ಕನ್ನಡ ಮಾಧ್ಯಮದಿಂದ ಬರುವಂತಹ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇದ್ದು ಡಿಪ್ಲೊಮಾ ಶಿಕ್ಷಣ ಮಾಡಲು ನಗರ ಪ್ರದೇಶದಲ್ಲಿರುವ ಕಾಲೇಜುಗಳಿಗೆ ಸೇರುತ್ತಿದ್ದಾರೆ. ಹೀಗಾಗಿ ಅವರಿಗೆ ಕ್ಯಾರಿ ಓವರ್ ಪದ್ಧತಿ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ನೇತೃತ್ವ ಜಿಲ್ಲಾಧ್ಯಕ್ಷ ವೈ.ಎನ್. ಹೊಸಕೋಟೆ ನಟರಾಜ್, ಸದಾನಂದಗೌಡ, ಹನುಮಂತರಾಜು, ಪುನೀತ್ಕುಮಾರ್, ಸುರೇಶ್, ಭವ್ಯ ವಹಿಸಿದ್ದರು.
ನೋಟ್ಪುಸ್ತಕ ವಿತರಣೆ
ಚಿಕ್ಕನಾಯಕನಹಳ್ಳಿ: ಮಕ್ಕಳಿಗೆ ವಿದ್ಯೆ ಕಲಿಯಲು ಪ್ರಸಕ್ತ ಸಂದರ್ಭದಲ್ಲಿ ಸವಲತ್ತುಗಳ ಲಭ್ಯತೆ ಅಪಾರವಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ಸಿ.ಎಸ್.ಪ್ರದೀಪ್ ನುಡಿದರು. ಅವರು ಹಿಂದುಳಿದ ಗ್ರಾಮೀಣ ಭಾಗದ ದಿಬ್ಬದಹಳ್ಳಿ, ಜಾಣೇಹಾರ್, ಅಜ್ಜೀಗುಡ್ಡೆ, ಕೆಂಪರಾಯನಹಟ್ಟಿ ಗ್ರಾಮದ ಶಾಲೆಗಳ 180 ಬಡಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡುತ್ತಿದ್ದರು. ಇಂದು ಗ್ರಾಮೀಣ ಭಾಗದ ಮಕ್ಕಳಿಗೆ ಬಡತನದ ಕಾರಣದಿಂದ ಶಿಕ್ಷಣ ಕುಂಠಿತವಾಗುವ ಸಾಧ್ಯತೆಗಳು ಹೆಚ್ಚಿದೆ. ಈ ನಿಟ್ಟಿನಲ್ಲಿ ರೋಟರಿ ಅಂತಹ ಬಡಮಕ್ಕಳಿಗೆ ಸಹಾಯ ಹಸ್ತ ನೀಡಲು ಶಕ್ತಿಮೀರಿ ಯತ್ನಿಸುತ್ತಿದೆ. ಇದೊಂದು ಅಲ್ಪಸಹಾಯವನ್ನು ಮಾಡುವ ಧ್ಯೇಯವಿಟ್ಟುಕೊಂಡು 2000 ಸಾವಿರ ನೋಟ್ ಪುಸ್ತಕಗಳನ್ನು ಉಚಿತವಾಗಿ ಬರಿ ಗ್ರಾಮೀಣ ಮಕ್ಕಳಿಗೇ ವಿತರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ರೋಟರಿ ಸದಸ್ಯರಾದ ಮಿಲಿಟರಿ ಶಿವಣ್ಣ, ಸ್ವಾತಿ ಶ್ರೀನಿವಾಸ್, ಉಪನ್ಯಾಸಕ ಅಶ್ವತ್ಥನಾರಾಯಣ ಮುಂತಾದವರಿದ್ದರು.
ಎಸ್ಬಿಎಂ ಕೃಷಿ ಸಾಲ ಮೇಳ
ಮಧುಗಿರಿ: ಎಸ್ಬಿಎಂ ರೈತರ ಕೃಷಿ ಚಟುವಟಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದ್ದು ಕೃಷಿಕರು ಇದರ ಪ್ರಯೋಜನ ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವಂತೆ ಸಿಎಂಜಿಬಿ ಸಂಸ್ಥೆ ವ್ಯವಸ್ಥಾಪಕ ಸಿ.ಎನ್.ಶೆಂಕರ್ ಕರೆ ನೀಡಿದರು. ಮಧುಗಿರಿಯ ಮೈಸೂರು ಬ್ಯಾಂಕ್ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ ಸಾಲ ಉತ್ಸವ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಕಾಲದಲ್ಲಿ ಮಳೆ ಬೀಳದೇ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಮರುಪಾವತಿ ಆಗದಿದ್ದ ಪಕ್ಷದಲ್ಲಿ ಕಾಲ ಕಾಲಕ್ಕೆ ಬಡ್ಡಿ ಕಟ್ಟಿ ಸಾಲ ನವೀಕರಣ ಮಾಡಿಕೊಳ್ಳಿ ಎಂದರು. ಬ್ಯಾಂಕ್ ವ್ಯವಸ್ಥಾಪಕ ಎಂ.ಆರ್.ರವಿಕುಮಾರ್, ಉಪ ವ್ಯವಸ್ಥಾಪಕ ದಿಲೀಪ್, ನಾಗರಾಜು ಮತ್ತಿತರರು ಉಪಸ್ಥಿರಿದ್ದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 4 ನಾಮಪತ್ರ ಸಲ್ಲಿಕೆ
ರಾಮನಗರ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆ.12ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧೆ ಬಯಸಿ ಶುಕ್ರವಾರ 4 ಮಂದಿ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆರ್.ಕೆ. ಬೈರಲಿಂಗಯ್ಯ, ಎಂ.ಹೆಚ್. ಹೊನ್ನಗಿರಿಗೌಡ, ಎಚ್.ಪಿ. ಜಯರಾಂ ಹಾಗೂ ಹೆಚ್. ಹನುಮಯ್ಯ ಅವರುಗಳು ಸ್ಪರ್ಧಾಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ 5 ವರ್ಷಗಳ ಅವಧಿಗೆ ಚುನಾವಣೆ ನಡೆಯುತ್ತಿದ್ದು, ಇದೀಗ ಆಯ್ಕೆಯಾಗಿರುವ 3 ತಾಲೂಕು ಘಟಕಗಳ ಅಧ್ಯಕ್ಷರು ಸೇರಿದಂತೆ 65 ಮಂದಿ ನಿರ್ದೇಶಕರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಆ.5ರಂದು ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆ.6 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸ್ ಪಡೆಯಲು ಅಂದೇ ಕಡೇ ದಿನವಾಗಿದೆ. ಆ.12ರಂದು ಚುನಾವಣೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

