ಬೆಂಗಳೂರು ಗ್ರಾಮಾಂತರ

ದೇವೇಗೌಡ, ಡಿಕೆಶಿ ಕುಟುಂಬ ಕದನಕ್ಕೆ ವೇದಿಕೆ ಸಜ್ಜು

Published On :

ಕ.ಪ್ರ.ವಾರ್ತೆ ರಾಮನಗರ ಆ.2
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಟ್ಟಾ ಎದುರಾಳಿ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳನ್ನು ಅಂತಿಮಪಡಿಸಿವೆ. ಜೆಡಿಎಸ್‌ನಿಂದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಕಣಕ್ಕೆ ಇಳಿಯಲಿದ್ದು, ಉಭಯತ್ರರು ಶನಿವಾರ(ಆ.3) ನಾಮಪತ್ರ ಸಲ್ಲಿಸಲಿದ್ದಾರೆ.  
ಪ್ರತಿಷ್ಠೆ ಕಣವಾಗಿರುವ ಈ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬದ ನಡುವಿನ ಕದನಕ್ಕೆ ಈ ಚುನಾವಣೆ ವೇದಿಕೆಯಾಗಲಿದೆ. ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಪ್ರಕಟವಾಗುತ್ತಿದ್ದಂತೆಯೇ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ನಾಮಪತ್ರ ಸಲ್ಲಿಕೆ ಹಂತದಿಂದಲೇ ಬಲಾಬಲ ಪ್ರದರ್ಶನಕ್ಕೆ ಪಕ್ಷಗಳು ಸಜ್ಜಾಗಿವೆ.
ಆ.21ಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶನಿವಾರವೇ ಕಡೆಯ ದಿನ. ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿತ್ತು. ಮುನ್ನಾ ದಿನವಾದ ಶುಕ್ರವಾರ ಎರಡೂ ಪಕ್ಷಗಳ ವರಿಷ್ಠರು ಅಭ್ಯರ್ಥಿ ಆಯ್ಕೆ ಮುಗಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಬಿಜೆಪಿಯಿಂದ ನಾಮಪತ್ರ: ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದಲ್ಲಿ ಜೆಡಿಎಸ್‌ಗೆ ಬಿಜೆಪಿ ಬೆಂಬಲ ಸೂಚಿಸುವ ಕುರಿತು ನಿರ್ಧಾರವಾಗಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ನಡುವೆಯೇ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ನಾಗರಾಜು ಅವರು ಶುಕ್ರವಾರ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಪಕ್ಷದ ಕಚೇರಿಯಿಂದ ಮುಖಂಡರ ಜತೆಗೂಡಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನಾಗರಾಜು ಅವರು ಚುನಾವಣಾಧಿಕಾರಿ ಶ್ರೀರಾಮರೆಡ್ಡಿಗೆ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಸಚ್ಚಿದಾನಂದಮೂರ್ತಿ, ಶಿವಮಾದು, ರವಿಕುಮಾರಗೌಡ, ಜಗದೀಶ್‌ಪ್ರಸಾದ್, ಗೋಪಿನಾಥರೆಡ್ಡಿ, ಪದ್ಮನಾಭ ಇತರರಿದ್ದರು.
ಮೂಲಗಳ ಪ್ರಕಾರ ನಾಗರಾಜು ಅವರಿಗಿನ್ನೂ ಬಿಜೆಪಿ ಬಿ ಫಾರಂ ಲಭಿಸಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ ಕೂಡ ಶನಿವಾರ ನಾಮಪತ್ರ ಸಲ್ಲಿಸುವ ಸಂಭವವಿದೆ ಎನ್ನಲಾಗಿದೆ.
ಕುಣಿಗಲ್ ಶಿವಣ್ಣ ಸ್ಪರ್ಧೆ: ಆರ್.ಪಿ.ಐ.(ಅ) ಪಕ್ಷದ ಅಭ್ಯರ್ಥಿ ಕುಣಿಗಲ್ ಶಿವಣ್ಣ ಅವರೂ ಶುಕ್ರವಾರ ಉಮೇದುವಾರಿಕೆ ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಗೋವಿಂದಯ್ಯ, ಮಂಟೇಸ್ವಾಮಿ, ಧನರಾಜ್, ಕೋಟೆ ಕುಮಾರ್, ಸೋಮಣ್ಣ, ಶಂಕರ್, ನಾಗೇಂದ್ರ, ಲೋಕೇಶ್, ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.
ಪಕ್ಷೇತರ ನಾಮಪತ್ರ: ಪಕ್ಷೇತರ ಅಭ್ಯರ್ಥಿಯಾಗಿ ಚನ್ನಪಟ್ಟಣ ತಾಲೂಕು ತೌಟನಹಳ್ಳಿ ಗ್ರಾಮದ ಟಿ.ಎಂ.ಮಂಚೇಗೌಡ ಕೂಡ ನಾಮಪತ್ರ ಸಲ್ಲಿಸಿದರು. ನಾಗರಾಜು, ಮಂಚೇಗೌಡ ಮತ್ತು ಕುಣಿಗಲ್ ಶಿವಣ್ಣ ಸಹಿತ ಇದುವರೆಗೆ ನಾಮಪತ್ರ ಸಲ್ಲಿಸಿದವರ ಸಂಖ್ಯೆ 7ಕ್ಕೇರಿದಂತಾಗಿದೆ.

ಸಿಪಿವೈ ಮಹತ್ವದ ಸಭೆ
ಮರು ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಪಿ.ಯೋಗೇಶ್ವರ್ ನಡೆ ನಿಗೂಢವಾಗಿದ್ದು, ಅವರತ್ತ ರಾಜಕೀಯ ವಲಯದ ಗಮನ ಕೇಂದ್ರೀಕರಿಸಿದೆ. ಚುನಾವಣೆ ನಿಟ್ಟಿನಲ್ಲಿ ಅವರು ನಾಳೆ(ಆ.3) ಬೆಂಬಲಿಗರ ಮಹತ್ವದ ಸಭೆ ಕರೆದಿದ್ದಾರೆ. ಚುನಾವಣೆ ಸಂಬಂಧ ಡಿ.ಕೆ.ಶಿವಕುಮಾರ್ ಜತೆಗಿನ ಮಾತುಕತೆಯನ್ನು ಅಲ್ಲಗಳೆದಿರುವ ಯೋಗೇಶ್ವರ್, ಚುನಾವಣೆಯಲ್ಲಿ ಅನುಸರಿಸಬೇಕಾದ ನಡೆಯು ತಮ್ಮ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ತೀರ್ಮಾನ ಅವಲಂಬಿಸಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ವಿಫಲವಾದ ಸಂಧಾನ
ಜಾತಿ ರಾಜಕಾರಣವೂ ಸಹಿತ ನಾನಾ ಕಾರಣಕ್ಕೆ ಪ್ರಸಕ್ತ ಮರು ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬದ ನಡುವಿನ ಹೋರಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಒಕ್ಕಲಿಗ ಸಮುದಾಯದ ಕೆಲವರು ತೆರೆಮರೆಯಲ್ಲಿ ನಡೆಸಿದ ಸಂಧಾನ ವಿಫಲವಾಗಿದೆ. ದೇವೇಗೌಡ ಮತ್ತು ಶಿವಕುಮಾರ್ ಕುಟುಂಬದ ಪೈಕಿ ಯಾವುದಾದರೂ ಒಂದು ಕುಟುಂಬ ಸ್ಪರ್ಧೆಗೆ ಇಳಿದು, ಮತ್ತೊಂದು ಕುಟುಂಬ ಪರೋಕ್ಷವಾಗಿ ನೆರವಾಗಲಿ ಎಂದು ಬಯಸಿದ್ದವರು ಸಂಧಾನಕ್ಕೆ ಇಳಿದಿದ್ದರು. ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ಶಿವಕುಮಾರ್ ತಮ್ಮ ಸಹೋದರ ಸುರೇಶ್ ಸ್ಪರ್ಧೆಗೆ ಒಪ್ಪಿದರೆ, ಪ್ರತಿಷ್ಠೆಗಾಗಿ ದೇವೇಗೌಡ ಕುಟುಂಬವೂ ಚುನಾವಣೆ ಸೆಣೆಸಿಗೆ ಇಳಿದಿದೆ.

ಸಹೋದರರಿಂದ ವಿಶೇಷ ಪೂಜೆ
ಕಾಂಗ್ರೆಸ್ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ಅಭ್ಯರ್ಥಿ ಡಿ.ಕೆ.ಸುರೇಶ್ ಹಾಗೂ ಡಿ.ಕೆ.ಶಿವಕುಮಾರ್ ಸಹೋದರರು ಕನಕಪುರದಲ್ಲಿರುವ ತಮ್ಮ ಕುಲದೇವತೆ ಕೆಂಕೇರಮ್ಮ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪಕ್ಷದ ಅನೇಕ ಮುಖಂಡರು ಪಾಲ್ಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.