ನಾಮಪತ್ರ ಸಲ್ಲಿಕೆ ಹಂತದಿಂದಲ್ಲೇ ರಂಗೇರಿದ ಕಣ
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಆ. 3
ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಅಖಾಡ ನಾಮಪತ್ರ ಸಲ್ಲಿಕೆ ಹಂತದಿಂದಲೇ ರಂಗೇರಿದೆ.
ಉಮೇದುವಾರಿಕೆ ಸಲ್ಲಿಕೆಗೆ ಕಡೆಯ ದಿನವಾದ ಶನಿವಾರ ಘಟಾನುಘಟಿ ನಾಯಕರ ದಂಡು ರಾಮನಗರಕ್ಕೆ ಆಗಮಿಸಿ, ಮತ ಸಮರದ ತಾಲೀಮು ಪ್ರಾರಂಭಿಸಿದೆ.
ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹಿತ ದೊಡ್ಡ ದಂಡು ಸಾಕ್ಷಿಯಾಯಿತು. ಕಾಂಗ್ರೆಸ್ ಹುರಿಯಾಳು ಡಿ.ಕೆ.ಸುರೇಶ್ ಅವರನ್ನು ಹುರಿದುಂಬಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್, ಸಚಿವರು ಮತ್ತು ಶಾಸಕರ ದಂಡು ಆಗಮಿಸಿತ್ತು.
ಕಾಂಗ್ರೆಸ್, ಜೆಡಿಎಸ್ಗಿಂತ ತಾನೇನೂ ಕಮ್ಮಿಯಿಲ್ಲ ಎನ್ನುವಂತೆ ಬಿಜೆಪಿಯಲ್ಲೂ ದಿಗ್ಗಜರ ತಂಡವೇ ಬಂದಿಳಿದಿತ್ತು. ಆ ಪಕ್ಷದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಉಮೇದುವಾರಿಕೆ ಸಲ್ಲಿಸಿದ್ದು, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯರೂ ಆದ ಚಿತ್ರನಟ ಜಗ್ಗೇಶ್ ಮತ್ತಿತರರು ಭಾಗವಹಿಸಿದ್ದರು.
ಮರು ಚುನಾವಣೆ ನಡೆಯುತ್ತಿರುವುದು ಅಲ್ಪಾವಧಿಗೇ ಆದರೂ ಕಾವೇರಿದ ವಾತಾವರಣವಂತೂ ಮೂಡಿದೆ. ಈ ಮರು ಚುನಾವಣೆಯು ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಅಗ್ನಿ ಪರೀಕ್ಷೆಯಾದರೆ, ತೃತೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸುವ ಕನಸು ಕಟ್ಟಿಕೊಂಡ ಜೆಡಿಎಸ್ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಬಿಜೆಪಿಯ ನಿಗೂಢ ನಡೆ: ಲೋಕಸಭೆ, ವಿಧಾನ ಪರಿಷತ್ ಮರು ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿಗೆ ಒಲವು ತೋರಿರುವ ಬಿಜೆಪಿಯು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಅಚ್ಚರಿ ಮೂಡಿಸಿದೆ. ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದಾಕ್ಷಣ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುರಿದು ಬಿದ್ದೇ ಹೋಯಿತು ಎನ್ನುವಂತಿಲ್ಲ.
ಈ ವಿಷಯದಲ್ಲಿ ಉಭಯ ಪಕ್ಷಗಳ ನಡೆ ಇನ್ನೂ ನಿಗೂಢವಾಗಿದೆ. ಚುನಾವಣೆಯಲ್ಲಿ ಬಹಿರಂಗವಾಗಿ ಮೈತ್ರಿ ಮಾಡಿಕೊಳ್ಳದಿದ್ದರೂ ಒಳ ಒಪ್ಪಂದದ ರಾಜಕಾರಣವಂತೂ ಇದ್ದೇ ಇದೆ. ಲೋಕಸಭೆ ಮತ್ತು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಪರಸ್ಪರ ಅನುಕೂಲಸಿಂಧು ರಾಜಕಾರಣಕ್ಕೆ ಎರಡೂ ಪಕ್ಷಗಳು ಸೂಕ್ತ ರಣತಂತ್ರವನ್ನು ರೂಪಿಸುತ್ತಿವೆ ಎನ್ನುವ ಮಾತು ದಟ್ಟವಾಗಿದೆ.
ಶುರುವಾಯ್ತು ವಾಕ್ಸಮರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಗೌಡರ ಗದ್ದಲವೇರ್ಪಟ್ಟಿದೆ. ನಾಮಪತ್ರ ಸಲ್ಲಿಕೆ ವೇಳೆ ಬಲಾಬಲ ಪ್ರದರ್ಶನ, ಪರಸ್ಪರ ವಾಕ್ಸಮರ ಪ್ರಾರಂಭವಾಗಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ, ಚುನಾವಣೆಯು ರಾಜಕೀಯ ರಣಾಂಗಣವಾಗಿ ಮಾರ್ಪಡುವ ಎಲ್ಲ ಲಕ್ಷಣಗಳು ಗೋಚರಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬವೇ ಟಾರ್ಗೆಟ್ ಆಗಿದೆ. ಅಂತೆಯೇ ಮರು ಚುನಾವಣೆ ಗೆದ್ದು ಸಿದ್ದರಾಮಯ್ಯ ಅವರಿಗೆ ಜನಪ್ರಿಯತೆ, ಶಕ್ತಿಯನ್ನು ಕುಗ್ಗಿಸಬೇಕೆನ್ನುವುದು ದಳಪತಿಗಳ ಗುರಿಯಾಗಿದೆ. ಬಿಜೆಪಿ ಕೂಡ ಇಲ್ಲಿ ಕಾಂಗ್ರೆಸ್ ಸೋಲನ್ನು ಎದಿರುನೋಡುತ್ತಿದೆ.
ಕಣಕ್ಕಿಳಿಯದ ಪಕ್ಷಗಳು: ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಸಮಾಜವಾದಿ ಪಕ್ಷವನ್ನು ಸಜ್ಜುಗೊಳಿಸಲು ಹೊರಟಿರುವ ಆ ಪಕ್ಷದ ಅಧ್ಯಕ್ಷ ಸಿ.ಪಿ.ಯೋಗೇಶ್ವರ್, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಮತ್ತು ಶ್ರೀರಾಮುಲು ಸಾರಥ್ಯದ ಬಿಎಸ್ಸಾರ್ ಕಾಂಗ್ರೆಸ್ಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಗೋಜಿಗೆ ಹೋಗಿಲ್ಲ.
ಈ ಕ್ಷೇತ್ರದಲ್ಲಿ ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಇಲ್ಲ. ಯೋಗೇಶ್ವರ್ ಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಪ್ರಬಲ ಶಕ್ತಿಯಾಗಿದೆ. ಸಮಬಲದ ಸೆಣೆಸಾಟದಲ್ಲಿ ನಿರ್ಣಾಯಕ ಪಾತ್ರ ಯೋಗೇಶ್ವರ್ ಅವರದ್ದಾಗಿದೆ. ಕಲ್ಲು, ಮುಳ್ಳಿನ ಹಾದಿಯನ್ನೇ ಕ್ರಮಿಸಿ ಬಂದಿರುವ ಅವರ ನಿಲುವಿನ್ನೂ ಅಸ್ಪಷ್ಟವಾಗಿದೆ.
ಸಿಪಿವೈ ಬೆಂಬಲಿಗರ ಸಭೆ: ಚನ್ನಪಟ್ಟಣದ ತಮ್ಮ ನಿವಾಸದಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸಿರುವ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್, ಪ್ರಸಕ್ತ ಮರು ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಅಣತಿಯಂತೆ ನಡೆದುಕೊಳ್ಳುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.
ಶೀಘ್ರವೇ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ, ಆ.15ರ ವೇಳೆಗೆ ಮತ್ತೊಮ್ಮೆ ಸಭೆ ಕರೆದು ನಿಲವು ಪ್ರಕಟಿಸಲಾಗುವುದು. ಈ ಮಧ್ಯೆ, ಕಾರ್ಯಕರ್ತರು ಮತ್ತು ಮುಖಂಡರು ಆತುರದ ತೀರ್ಮಾನಕ್ಕೆ ಬರುವುದು ಬೇಡ ಎಂದು ಸಲಹೆ ನೀಡಿದ್ದಾರೆ.
ಬೆಂಬಲ ಕೋರಿ ಜೆಡಿಎಸ್, ಕಾಂಗ್ರೆಸ್ ಉಭಯ ಪಕ್ಷಗಳಿಂದಲೂ ಫೋನ್ ಕರೆ ಬಂದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಲು ಅಡ್ಡಿಯಾಗಿದ್ದೇ ಡಿ.ಕೆ.ಶಿವಕುಮಾರ್ ತಮ್ಮನ್ನು ಪ್ರತಿ ಹಂತದಲ್ಲೂ ವಿರೋಧಿಸಿಕೊಂಡೇ ಬಂದಿದ್ದಾರೆ ಎಂದು ಅವರು ಅಸಮಾಧಾನವನ್ನೂ ತೋಡಿಕೊಂಡಿದ್ದಾರೆ.
ಸೈಕಲ್ ಹತ್ತಿದವರೂ ಬರಲಿ: ಈಚೆಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ರಾಮನಗರಕ್ಕೆ ಚೊಚ್ಚಲ ಭೇಟಿ ನೀಡಿದ ವೇಳೆ ಈ ಜಿಲ್ಲೆಯಲ್ಲಿ ಸೈಕಲ್ ಏರಿದವರಿಗೆ (ಸಮಾಜವಾದಿ ಪಕ್ಷಕ್ಕೆ ಹೋದವರನ್ನು) ಯಾವ ಕಾರಣಕ್ಕೂ ಮನ್ನಣೆ ಕೂಡದು ಎಂದಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ತಮ್ಮ ಸಹೋದರನ ನಾಮಪತ್ರ ಸಲ್ಲಿಕೆ ಮುನ್ನ ನಡೆದ ಕಾಂಗ್ರೆಸ್ ಸಭೆಯಲ್ಲಿ ಸೈಕಲ್ ಏರಿದವರೂ ಸಹಿತ ಯಾರನ್ನೇ ಆಗಲಿ ಪಕ್ಷಕ್ಕೆ ಬರ ಮಾಡಿಕೊಳ್ಳೋಣವೆನ್ನುವ ಸಂದೇಶ ರವಾನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

