ಕೆಜೆಪಿ, ಬಿಜೆಪಿಯವರ ಮನೆ ಬಾಗಿಲು ಕಾಯುತ್ತಿರುವುದೇಕೆ?
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಆ.10
ಜೆಡಿಎಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಆಗಿದೆ ಎಂದು ಹಾದಿ ಬೀದಿಯಲ್ಲೆಲ್ಲಾ ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರು ಕೆಜೆಪಿ, ಬಿಜೆಪಿ ಮುಖಂಡರ ಮನೆ ಬಾಗಿಲು ಕಾಯುತ್ತಿರುವುದು ಏಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಶನಿವಾರ ಮತಯಾಚನೆ ವೇಳೆ ಮಾತನಾಡಿದ ಅವರು, ನೂರಾರು ವರ್ಷ ಇತಿಹಾಸವಿರುವ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಈಗ ಅವರಿವರ ಕದ ತಟ್ಟುತ್ತಿದೆ ಎಂದು ಟೀಕಿಸಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಸುರೇಶ್ ಸಹೋದರ ಡಿ.ಕೆ.ಶಿವಕುಮಾರ್ ಅವರು ಕೆಜೆಪಿ ನಾಯಕ ಯಡಿಯೂರಪ್ಪ ಭೇಟಿಗಾಗಿ ಅವರ ಮನೆ ಕಾಂಪೌಂಡ್ನಲ್ಲಿ 1 ತಾಸು ಕಾದು ಕುಳಿತಿದ್ದಾರೆ. ಬಿಜೆಪಿ ನಾಯಕ ಎಂ.ಶ್ರೀನಿವಾಸ್ ಮನೆಗೂ ಭೇಟಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮರು ಚುನಾವಣೆಯಲ್ಲಿ ಕೆಜೆಪಿ ಬೆಂಬಲ ಪಡೆಯಲು ಸಿದ್ಧರಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕೂಡ ಹೇಳಿದ್ದಾರೆ. ತತ್ವ, ಸಿದ್ಧಾಂತ ಇಲ್ಲದ ಪಕ್ಷ ಕಾಂಗ್ರೆಸ್ ಹೊರತು, ಜೆಡಿಎಸ್ ಅಲ್ಲ ಎಂದು ಅವರು ಹೇಳಿದರು.
ಕುತಂತ್ರ, ಷಡ್ಯಂತ್ರ, ಒಳ ಒಪ್ಪಂದ, ಒಳೇಟಿನ ರಾಜಕಾರಣ ಕಾಂಗ್ರೆಸ್ ನಾಯಕರಿಗೆ ಕರಗತವಾಗಿರುವ ವಿದ್ಯೆಯಾಗಿದೆ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿರುವ ನೊಣ ತೋರಿಸಲು ಅವರು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ತಿಥಿ ಊಟ ಸವಿದವರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮದುವೆ ಮನೆ ಊಟಕ್ಕಿಂತ ತಿಥಿ ಊಟವೇ ಇಷ್ಟ. ಅವರು ಅದನ್ನೇ ಬಯಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಾಸ್ತವದಲ್ಲಿ ಕತ್ತು ಕುಯ್ಯುವುದು ಮತ್ತು ತಿಥಿ ಮಾಡಿಸುವುದರಲ್ಲಿ ಕಾಂಗ್ರೆಸ್ ನಾಯಕರು ನಿಸ್ಸೀಮರು ಎಂದು ಛೇಡಿಸಿದರು. ಯುಪಿಎ ನೇತೃತ್ವದ ಮೊದಲ ಅವಧಿ ಸರ್ಕಾರಕ್ಕೆ ಅಧಿಕಾರ ಹಂಚಿಕೊಳ್ಳದೇ ಬೆಂಬಲ ನೀಡಿದ ಕಮ್ಯುನಿಸ್ಟರನ್ನು ಮುಗಿಸಿ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ತಿಥಿ ಊಟ ಮಾಡುತ್ತಿದೆ. ಈಗ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕುತ್ತಿಗೆ ಕುಯ್ಯಲು ಕಾಂಗ್ರೆಸ್ ಹೊರಟಿದೆ ಎಂದರು.
ಲಾಲೂ ಪ್ರಸಾದ್ ಯಾದವ್, ಕರುಣಾನಿಧಿ ನೇತೃತ್ವದ ಡಿಎಂಕೆ ಕತೆ ಮುಗಿಸಿದ್ದಾಯಿತು. ಈಗ ನಿತೀಶ್ಕುಮಾರ್ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿಕೊಂಡಿದೆ. ಆಂಧ್ರದಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತಂದ ವೈ.ಎಸ್.ರಾಜಶೇಖರ ರೆಡ್ಡಿ ಕುಟುಂಬವನ್ನೇ ಹೊಸಕಿ ಹಾಕಿದೆ. ಕಾಂಗ್ರೆಸ್ ಮಾಡುತ್ತಿರುವ ತಿಥಿ ಕಾರ್ಯಕ್ರಮ ತಡೆಯಲು ರಾಜ್ಯದಲ್ಲಿ ಜೆಡಿಎಸ್ ಮುಂದಾಗಿದೆ ಎಂದು ತಿಳಿಸಿದರು.
ಸೋನಿಯಾ ಅಧ್ಯಕ್ಷರಾಗಲಿ: ಬಿಜೆಪಿಗೂ ದೇವೇಗೌಡರೇ ಅಧ್ಯಕ್ಷರಾಗಲಿ ಎಂದು ಪರಮೇಶ್ ನೀಡಿರುವ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಜಾರ್ಖಂಡ್ನಲ್ಲಿ ಬಿಜೆಪಿ ಜತೆಗಿದ್ದ ಜೆಎಂಎಂ ಜತೆ ಸೇರಿ ಕಾಂಗ್ರೆಸ್ ಸರ್ಕಾರ ರಚಿಸಿದೆ. ಹೀಗಾಗಿ ಜೆಎಂಎಂಗೂ ಸೋನಿಯಾಗಾಂಧಿಯೇ ಅಧ್ಯಕ್ಷರಾಗಲಿ ಎಂದು ಕುಮಾರಸ್ವಾಮಿ ಹೇಳಿದರು.
ನನ್ನನ್ನೇ ಪಕ್ಷದಿಂದ ಉಚ್ಚಾಟಿಸುವಂತೆ ದೇವೇಗೌಡರನ್ನು ಪರಮೇಶ್ವರ್ ಆಗ್ರಹಿಸಿದ್ದಾರೆ. ಅವರು ದೇವೇಗೌಡರಿಗೆ ಯಾವಾಗ ಹೈಕಮಾಂಡ್ ಆದರೋ ಗೊತ್ತಿಲ್ಲ. ನಾವು ನಮ್ಮ ಪಕ್ಷದ ತೀರ್ಮಾನ ಕೈಗೊಳ್ಳಲು ಸರ್ವತಂತ್ರ ಸ್ವತಂತ್ರರು. ಅವರಿಗೇಕೆ ನಮ್ಮ ಉಸಾಬರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಜೆಡಿಎಸ್ ಬಗ್ಗೆ ಟೀಕೆ ಮಾಡುವುದನ್ನೇ ಕೆಲಸ ಮಾಡಿಕೊಳ್ಳುವುದನ್ನು ಬಿಟ್ಟು, ಜನ ಸಾಮಾನ್ಯರ ಸಮಸ್ಯೆಗೆ ಹೇಗೆ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ನೀತಿಪಾಠ ಹೇಳಿಕೊಡಲಿ ಎಂದು ಅವರು ಸಲಹೆ ನೀಡಿದರು. ಪ್ರಚಾರ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ಕೆ.ದೇವೇಗೌಡ, ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಲ್.ಚಂದ್ರ, ಚಂದ್ರಣ್ಣ, ರಾಮಕೃಷ್ಣ, ಶಂಕರಪ್ಪ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

