ಬಯಸಿದ್ದರೆ 4 ವರ್ಷ ಹಿಂದೆಯೇ ಪ್ರಧಾನಿಯಾಗಿರುತ್ತಿದ್ದ ರಾಹುಲ್
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಆ.10
ಮುಂಬರುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಚನೆ ಖಚಿತವಾಗಿದ್ದು, ಯುವ ನೇತಾರ ರಾಹುಲ್ ಗಾಂಧಿ ಅವರೇ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು.
ನಗರದಲ್ಲಿ ಶನಿವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮರು ಚುನಾವಣೆಯ ಪಕ್ಷದ ಪ್ರಚಾರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಬಯಸಿದ್ದರೆ 4 ವರ್ಷದ ಹಿಂದೆಯೇ ಪ್ರಧಾನಿ ಆಗಬಹುದಿತ್ತು ಎಂದರು.
ದೇಶದ ಸಮಸ್ತ ಶ್ರೀಸಾಮಾನ್ಯರ ಸಮಸ್ಯೆಗಳನ್ನು ಅರಿತು, ಜನಪರ ಆಡಳಿತ ನೀಡುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರೂ ಸಾಮಾನ್ಯನಂತೆ ದೇಶ ಪ್ರವಾಸ ನಡೆಸುತ್ತಿದ್ದಾರೆ. ಈ ಅನುಭವವನ್ನು ಮುಂದಿನ ತಮ್ಮ ಆಡಳಿತದಲ್ಲಿ ಬಳಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಕಟಿಬದ್ಧ: ಮಹಾತ್ಮ ಗಾಂಧೀಜಿ ಆಶಯದಂತೆ ಸಾಮಾಜಿಕ ನ್ಯಾಯ ಒದಗಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಮುಖ್ಯ ವಾಹಿನಿಗೆ ತರಬೇಕೆನ್ನುವುದು ಕಾಂಗ್ರೆಸ್ ಆಶಯವಾಗಿದೆ ಎಂದು ಪಕ್ಷದ ಪ್ರಚಾರ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಸಾಮಾಜಿಕ ನ್ಯಾಯದೊಂದಿಗೆ ಸಮ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಕಾಯ್ದೆ ಜಾರಿಗೆ ತರಲಾಗಿದೆ. ಉದ್ಯೋಗ ಹಕ್ಕು ಕಾಯ್ದೆ ಜಾರಿ ನಿಟ್ಟಿನಲ್ಲೂ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಬಗ್ಗೆ ಟೀಕೆ: ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೋರಾಟ ನಡೆಸುವ ಸಾಮರ್ಥ್ಯ ಇಲ್ಲದ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವೇ ಎಂದು ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ಕುಮಾರ್ ಟೀಕಿಸಿದರು.
ಪ್ರಚಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಮೈತ್ರಿ ಇಲ್ಲವೆಂದು ಹೇಳಿಕೊಂಡೇ ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ ಮರು ಚುನಾವಣೆ ಎದುರಿಸುತ್ತಿವೆ. ಇದರೊಂದಿಗೆ ಜಾತ್ಯತೀತ ನಿಲುವನ್ನು ಪ್ರತಿಪಾದಿಸುವ ಜೆಡಿಎಸ್ ಮುಖವಾಡ ಕಳಚಿ ಬಿದ್ದಿದೆ ಎಂದರು.
ದೇವೇಗೌಡರಿಗೆ ಆಗ್ರಹ: ಜೆಡಿಎಸ್, ಬಿಜೆಪಿ ಜತೆಗೂಡಿಯೇ ಈ ಚುನಾವಣೆ ಎದುರಿಸುತ್ತದೋ ಅಥವಾ ಪ್ರತ್ಯೇಕವಾಗಿ ಹೋರಾಟ ನಡೆಸುವುದೋ ಎನ್ನುವುದನ್ನು ಜಾತ್ಯತೀತ ನಿಲುವಿಗೆ ಅಂಟಿಕೊಂಡಿರುವುದಾಗಿ ಹೇಳಿಕೊಳ್ಳುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಕೋಮುವಾದಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಚುನಾವಣೆಯಲ್ಲಿ ಸೆಣೆಸುತ್ತಿದೆ. ಪರೋಕ್ಷವಾಗಿ ಜೆಡಿಎಸ್ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಆಡಳಿತಕ್ಕೆ ಬೆಂಬಲ ನೀಡುವ ತನ್ನ ನಿಲುವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದರು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ, ಬ್ಲೋಸಂ ಫರ್ನಾಂಡಿಸ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ರಾಜ್ಯಸಭೆ ಮಾಜಿ ಸದಸ್ಯ ಸತ್ಯನಾರಾಯಣಸ್ವಾಮಿ, ಮುಖಂಡರಾದ ಹನುಮಂತರಾಯಪ್ಪ, ಕೃಷ್ಣಾನಂದಸ್ವಾಮಿ, ಕೆ.ರಮೇಶ್, ಕೆ.ಶೇಷಾದ್ರಿ, ವೆಂಕಟೇಶ್, ಪಾರ್ವತಮ್ಮ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

