ಬೆಂಗಳೂರು ಗ್ರಾಮಾಂತರ

ಕುಮಾರಸ್ವಾಮಿ ಆಶಯದಂತೆ ಸಚಿವನಾಗಲು ನನಗೆ ಅವಕಾಶ ಕಲ್ಪಿಸಿ

Published On :

ಕ.ಪ್ರ.ವಾರ್ತೆ    ರಾಮನಗರ    ಆ.13
ರಾಜ್ಯ ಸಂಪುಟದಲ್ಲಿ ನನಗೆ ಸ್ಥಾನವಿಲ್ಲದೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷಾದದ ಜತೆಗೆ ಅನುಕಂಪದ ಮಾತುಗಳನ್ನಾಡಿದ್ದರು. ಪ್ರಸಕ್ತ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ, ಕುಮಾರಸ್ವಾಮಿ ಆಶಯದಂತೆ ಸಚಿವನಾಗಲು ನನಗೆ ಅವಕಾಶ ಕಲ್ಪಿಸಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ಕ್ಷೇತ್ರದ ವಿವಿಧೆಡೆ ಮಂಗಳವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಸಚಿವನಾಗಬೇಕೆನ್ನುವುದು ಕುಮಾರಸ್ವಾಮಿ ಅವರಂತೆಯೇ ಕ್ಷೇತ್ರದ ಎಲ್ಲರ ಬಯಕೆಯಾಗಿದೆ. ಆ ಅವಕಾಶ ನನಗೆ ದಕ್ಕಬೇಕಾದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಅನಿವಾರ್ಯ ಎಂದು ತಿಳಿಸಿದರು.
ಬೆಂಬಲಿಸಿ: ಮಾತಿಗೆ ತಪ್ಪುವುದು ಜೆಡಿಎಸ್ ಚಾಳಿ. ಕುಮಾರಸ್ವಾಮಿ ವಚನಭ್ರಷ್ಟತೆಯೇ ಬಿಜೆಪಿಗೆ ಅಧಿಕಾರ ಸಿಗಲು ಕಾರಣವಾಗಿದೆ. ಬಿಜೆಪಿ ದುರಾಡಳಿತದ ಫಲವಾಗಿ ಕರ್ನಾಟಕ ರಾಜ್ಯವು ಅಭಿವೃದ್ಧಿ ವಿಷಯದಲ್ಲಿ 20 ವರ್ಷ ಹಿಂದಕ್ಕೆ ಹೋಗುವಂತಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ತನ್ನದೇ ಆದ ತತ್ವ, ಸಿದ್ಧಾಂತದ ಮೇಲೆ ಕೆಲಸ ಮಾಡುತ್ತದೆ. ಆದರೆ, ಜೆಡಿಎಸ್ ಮತ್ತು ಬಿಜೆಪಿಗೆ ಯಾವುದೇ ಸಿದ್ಧಾಂತ, ತತ್ವಗಳಿಲ್ಲ. ಅವಕಾಶವಾದಿತನ ಪ್ರದರ್ಶಿಸುತ್ತಿರುವ ಆ ಪಕ್ಷಗಳನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಶಿವಕುಮಾರ್ ತಿಳಿಸಿದರು.
ಈಗ ಕಿಚ್ಚು ಪ್ರದರ್ಶಿಸಿ: ನನಗೆ ಸಚಿವ ಸ್ಥಾನ ಸಿಗದಿದ್ದಾಗ ಪಕ್ಷದ ಪದಾಧಿಕಾರತ್ವಕ್ಕೆ ರಾಜಿನಾಮೆ ಸಲ್ಲಿಸಿ, ಬೀದಿಗಿಳಿದು ಹೋರಾಟ ನಡೆಸಿದ್ದೀರಿ. ಅಧಿಕಾರ ಸಿಗಬೇಕೆನ್ನುವ ನಿಮ್ಮೆಲ್ಲರ ಆಸೆ ಈಡೇರಬೇಕಾದರೆ ಈ ಚುನಾವಣೆಯಲ್ಲಿ ಕಿಚ್ಚಿನಿಂದ ಹೋರಾಟ ನಡೆಸಿ, ಕಾಂಗ್ರೆಸ್ ಗೆಲ್ಲಿಸಿ ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ಶಿವಕುಮಾರ್ ಮನವಿ ಮಾಡಿದರು.
ಕಾಂಗ್ರೆಸ್ಗೆ ಮಹತ್ವದ್ದು: ದೇಶದಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯ ಉಭಯ ಕ್ಷೇತ್ರಗಳ ಗೆಲುವು ನೈತಿಕ ಬೆಂಬಲವಾಗಲಿದೆ. ಮರು ಚುನಾವಣೆ ಫಲಿತಾಂಶ ಜೆಡಿಎಸ್ಪಾಲಿಗೆ ಮಹತ್ವದ್ದಲ್ಲ. ಹೀಗಾಗಿ ಮತದಾರರು ಪ್ರಜ್ಞಾವಂತಿಕೆ ಮೆರೆಯಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬಿಜೆಪಿ ಅಡ್ಡಗಾಲಾಗಿದೆ: ಕೇಂದ್ರದಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿಯು ಸಂಸತ್ ಅಧಿವೇಶನ ನಡೆಯುವುದಕ್ಕೇ ಬಿಡುತ್ತಿಲ್ಲ. ಆ ಮೂಲಕ ಸಂಸತ್ ಸದನದ ಪಾವಿತ್ರ್ಯತೆಯನ್ನು ಹಾಳುಗೆಡವುತ್ತಿದೆ. ಜನಪರ ಕಾರ್ಯಕ್ರಮಗಳಿಗೆ ಅಡ್ಡಗಾಲಾಗುವ ಮೂಲಕ ಬಿಜೆಪಿಯು ಬಡವರು, ರೈತರು, ದಲಿತರು ಮತ್ತು ಶೋಷಿತರ ದಮನಕ್ಕೆ ಹೊರಟಿದೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಟೀಕಿಸಿದರು.
ಜೆಡಿಎಸ್ ಪಕ್ಷಕ್ಕೆ ತನ್ನ ಗೆಲುವಾಗಲೀ, ಡಿ.ಕೆ.ಸುರೇಶ್ ಅವರ ಸೋಲಾಗಲೀ ಬೇಡ. ಅಪವಿತ್ರ ಮೈತ್ರಿಯೊಂದಿಗೆ ಉಭಯ ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಸಿದ್ದರಾಮಯ್ಯ ಅವರ ರಾಜಿನಾಮೆ ಕೇಳುವುದೊಂದೇ ಜೆಡಿಎಸ್  ನಾಯಕರ ಗುರಿಯಾಗಿದೆ. ಮತದಾರರು ಅದಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.