ಸಂಭ್ರಮದ ವರಮಹಾಲಕ್ಷ್ಮಿ ವ್ರತಾಚರಣೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ಸಂಭ್ರಮದ ವರಮಹಾಲಕ್ಷ್ಮಿ ವ್ರತಾಚರಣೆ ನಡೆದಿದೆ. ವಿವಿಧ ದೇವಾಲಯಗಳಲ್ಲಿ ಮತ್ತು ಮನೆಮನೆಗಳಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಮಹಿಳೆಯರು ವಿಶೇಷವಾಗಿ ಅಲಂಕರಿಸಿ ಪೂಜೆ ನೆರವೇರಿಸುವ ದೃಶ್ಯ ಎಲ್ಲೆಡೆ ಕಂಡು ಬಂತು.
ಇಲ್ಲಿನ ಶ್ರೀರಾಮಲಿಂಗಚಂದ್ರ ಚೌಡೇಶ್ವರಿ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ಶ್ರೀಮಾತೆಗೆ ಚಿನ್ನಾಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದಿನವಿಡೀ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಹಸ್ರಾರು ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಿ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದರು. ಅದೇ ರೀತಿ ಚೈತನ್ಯನಗರದಲ್ಲಿರುವ ಶ್ರೀಮಹಾಲಕ್ಷ್ಮಿ ದೇವಾಲಯದಲ್ಲಿ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಶ್ರೀಲಕ್ಷ್ಮೀದೇವಿಗೆ ಸುವರ್ಣ ಕೈಲಾಸ ಅಲಂಕಾರ ಮಾಡಲಾಗಿತ್ತು. ಗೋಲ್ಡನ್ ಅಲಂಕಾರ ಜನರ ಕಣ್ಮನ ಸೆಳೆಯಿತು. ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ದೊಡ್ಡಬಳ್ಳಾಪುರ ನಗರದಲ್ಲಿ ಮಹಿಳೆಯರು ತಮ್ಮ ಮನೆಗಳಲ್ಲಿ ವಿಶೇಷ ಕಳಶ, ಲಕ್ಷ್ಮೀ ವಿಗ್ರಹ ಪ್ರತಿಷ್ಠಾಪಿಸಿ, ಸೀರೆ, ಚಿನ್ನ-ಬೆಳ್ಳಿಯ ಆಭರಣಗಳಿಂದ ಅಲಂಕರಿಸಿ ಸಂಭ್ರಮಿಸಿದರು. ಹಣ, ವಸ್ತು, ಒಡವೆ ಸೇರಿದಂತೆ ಐಶ್ವರ್ಯಸಿರಿಯನ್ನು ಪೂಜಿಸುವ ಸಡಗರ ಎಲ್ಲೆಡೆ ಕಂಡುಬಂತು. ಮನೆಮನೆಗಳಲ್ಲೂ ಭಿನ್ನ ಭಿನ್ನವಾಗಿ ಮಹಾಲಕ್ಷ್ಮಿಯನ್ನು ಅಲಂಕರಿಸಿ ಪೂಜಿಸಲಾಗಿತ್ತು.
ಬೆಲೆ ಏರಿಕೆಯ ಭರಾಟೆಯಲ್ಲಿಯೂ ಲಕ್ಷ್ಮೀಪೂಜೆಯ ಅಬ್ಬರಕ್ಕೆ ಕೊರತೆಯಾಗಿರಲಿಲ್ಲ. ಹೂ-ಹಣ್ಣುಗಳ ಬೆಲೆ ಗಗನಕ್ಕೇರಿದ್ದರೂ ಶ್ರಾವಣದ ಮೊದಲ ಹಬ್ಬವಾದ ಲಕ್ಷ್ಮೀಪೂಜೆಯನ್ನು ಜನ ಆದಷ್ಟೂ ಸಡಗರ ಮತ್ತು ಅದ್ಧೂರಿಯಿಂದಲೇ ಆಚರಿಸಿದ್ದು ವಿಶೇಷವಾಗಿತ್ತು. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಾಗಿ ಬೆಲೆ ಏರಿಕೆ ಬಿಸಿ ಗ್ರಾಹಕರನ್ನು ತಟ್ಟಿತ್ತು. ಒಂದೂವರೆ ಸಾವಿರ ರು ಮುಟ್ಟಿದ್ದ ಕನಕಾಂಬರ, ದುಪ್ಪಟ್ಟು ಬೆಲೆ ಹೆಚ್ಚಾಗಿದ್ದ ವಿವಿಧ ಬಗೆಯ ಹಣ್ಣು-ಹಂಪಲು ಖರೀದಿ ಭರಾಟೆ ಕೂಡ ಮಾರುಕಟ್ಟೆಯಲ್ಲಿತ್ತು.
ಪರಂಪರೆ ಮತ್ತು ಸಂಪ್ರದಾಯವನ್ನು ಬಿಡಲು ಸಾಧ್ಯವಿಲ್ಲ. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಉಳಿಸಬೇಕಾದರೆ ಈ ಬಗೆಯ ಹಬ್ಬಗಳ ಆಚರಣೆ ಮುಖ್ಯ. ಹಬ್ಬ ಭಾವನೆಗಳನ್ನು ಬೆಸೆಯುವ ಸಂದರ್ಭವಾಗಿಯೂ ಮಹತ್ವ ಪಡೆದಿರುತ್ತದೆ. ಮಹಾಲಕ್ಷ್ಮಿ ಪೂಜೆ ಎಂದರೆ ಅದು ಅಷ್ಟ ಲಕ್ಷ್ಮೀಯರ ಪೂಜೆ. ಬದುಕಿನಲ್ಲಿ ಎಲ್ಲವೂ ಒಳಿತಾಗಲಿ ಎಂಬ ನಿರೀಕ್ಷೆಯೊಂದಿಗೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಂಪ್ರದಾಯ ದಿನೇದಿನೇ ಬೆಳೆಯಬೇಕು ಎಂಬುದು ಹಬ್ಬದ ಸಡಗರದಲ್ಲಿದ್ದ ಮಹಿಳೆಯರ ಮಾತು.
ದೇವಾಯಗಳಲ್ಲೂ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಇಲ್ಲಿನ ಕನಕದಾಸ ರಸ್ತೆಯಲ್ಲಿರುವ ಮಹಾಲಕ್ಷ್ಮೀ ದೇವಾಲಯ, ನೇಯ್ಗೆಬೀದಿಯಲ್ಲಿರುವ ರಾಮಲಿಂಗಚೌಡೇಶ್ವರಿ ದೇವಾಲಯ, ಬೆಸ್ತರಪೇಟೆಯಲ್ಲಿರುವ ಗಂಗಾ ಪರಮೇಶ್ವರಿ ದೇವಾಲಯ, ಅಭಯ ಚೌಡೇಶ್ವರಿ ದೇಗುಲ, ಮುತ್ಯಾಲಮ್ಮ ದೇವಾಲಯ, ಕಾಳಿಕಾ ಕಮಟೇಶ್ವರ ದೇವಾಲಯ ಸೇರಿದಂತೆ ಪ್ರಮುಖ ಆದಿಶಕ್ತಿ ದೇವಾಲಯಗಳಲ್ಲಿ ಪೂಜಾ ಸಂಭ್ರಮ ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

