ಕಟ್ಟಡ ಕಾಮಗಾರಿಗೆ ಕಳಪೆ ಮರಳು: ಆರೋಪ
ಚನ್ನಪಟ್ಟಣ: ತಾಲೂಕಿನ ಮತ್ತೀಕೆರೆ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಕೇಂದ್ರೀಯ ಆದರ್ಶ ವಿದ್ಯಾಲಯದ ಕಟ್ಟಡ ಕಾಮಗಾರಿಗೆ ಕಳಪೆ ಗುಣಮಟ್ಟದ ಮರಳನ್ನು ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೇಂದ್ರ ಸರ್ಕಾರದ ಅನುದಾನದಲ್ಲಿ 3.5 ಕೋಟಿ ವೆಚ್ಚದಲ್ಲಿ 3 ಅಂತಸ್ತುಗಳ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಕಾಮಗಾರಿಯ ಗುತ್ತಿಗೆ ಪಡೆದಿರುವ ಆಎನ್ಆರ್ ಕನ್ಸ್ಟ್ರಕ್ಷನ್ ಕಂಪನಿ ನಿರ್ಮಾಣ ಕಾರ್ಯಕ್ಕೆ ಗುಣಮಟ್ಟದ ಮರಳನ್ನು ಬಳಸದೆ ಅಲ್ಲಿ- ಇಲ್ಲಿ ಸಿಗುವ ಕೆಳದರ್ಜೆಯ ಮರಳನ್ನು ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಲೂಕಿನ ಕಣ್ವ ನದಿ ಆಸುಪಾಸಿನಲ್ಲಿ ಸಿಗುವ ಮಣ್ಣುಮಿಶ್ರಿತ ಮರಳನ್ನು ಸ್ಥಳೀಯ ಮರಳು ದಳ್ಳಾಳಿಗಳ ಮೂಲಕ ಶಾಲಾ ಮೈದಾನದಲ್ಲಿ ಕೆಲಸ ಆರಂಭಿಸುವ ಮುಂಚೆಯೇ ಸಾಕಷ್ಟು ಮರಳನ್ನು ಸಂಗ್ರಹಿಸಿದ್ದು, ಇದರಿಂದ ಕಾಮಗಾರಿ ನಿರ್ಮಾಣ ಮಾಡಿದ್ದೇ ಆದಲ್ಲಿ ಕಟ್ಟಡ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎಂದಿದ್ದಾರೆ.
ಈ ಹಿಂದೆ ಇಂತಹುದೇ ಮರಳನ್ನು ಬಳಸಿ ನಿರ್ಮಿಸಿದ್ದರಿಂದ ಬೆಂಗಳೂರಿನಲ್ಲಿ ಕಟ್ಟಡಗಳು ಕುಸಿದು ಸಾವು- ನೋವು ಸಂಭವಿಸಿರುವ ಉದಾಹರಣೆಗಳಿವೆ.
ಶಾಲಾ ಮಕ್ಕಳಿಗಾಗಿ ಕಟ್ಟುತ್ತಿರುವ ಈ ಮೂರು ಅಂತಸ್ತಿನ ಕಟ್ಟಡಕ್ಕೆ ಇಂತಹ ಮರಳನ್ನು ಉಪಯೋಗಿಸಿದರೆ ಮುಂದೊಂದು ದಿನ ಕಟ್ಟಡ ಕುಸಿದ ಮಕ್ಕಳ ಪ್ರಾಣಕ್ಕೆ ಎರವಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಟ್ಟಡ ನಿರ್ಮಾಣದ ಬಗ್ಗೆ ಸಾರ್ವಜನಿಕರಿಗಾಗಲಿ, ಪೋಷಕರಿಗಾಗಲಿ ಯಾವುದೇ ಮಾಹಿತಿ ನೀಡದಿದ್ದು, ತಾಲೂಕಿನ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರೂ ನಮ್ಮ ಬಳಿ ಮಾಹಿತಿ ಇಲ್ಲ ಎಂದು ಹೇಳುತ್ತಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ.
ಕೂಡಲೇ ಸಂಬಂಧಿಸಿದ ಮಂದಿ ಸ್ಥಳಕ್ಕೆ ಭೇಟಿ ನೀಡಿ ಕಳಪೆ ಮರಳಿನಿಂದ ಕಟ್ಟಡ ನಿರ್ಮಾಣ ಮಾಡದಂತೆ ತಡೆದು, ಗುಣಮಟ್ಟದ ಮರಳು ಬಳಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಬೇಕು. ಇದೇ ರೀತಿ ಕ್ಷೇತ್ರದ ಶಾಸಕರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

