ಉತ್ತಮ ಆಡಳಿತಕ್ಕೆ 'ಕೈ' ಹಿಡಿಯಿರಿ: ಕೇಂದ್ರ ಸಚಿವ ಖರ್ಗೆ
ಆನೇಕಲ್ಲು: ರಾಜ್ಯದಲ್ಲಿನ ಅರಾಜಕತೆ ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಜನತೆ ಕಾಂಗ್ರೆಸ್ಗೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯ ಬಹುತೇಕ ಘೋಷಣೆಗಳನ್ನು ಈಡೇರಿಸಿದ್ದು, ಇನ್ನು ಮುಂದೆ ರಾಜ್ಯಕ್ಕೆ ಉತ್ತಮ ಹಾಗೂ ಉಜ್ವಲ ಭವಿಷ್ಯವಿದೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಮತಯಾಚಿಸಿ ಬಳಿಕ ಮಾತನಾಡಿ, ಉಪ ಚುನಾವಣೆ ಅನಪೇಕ್ಷಿತವಾಗಿದ್ದು, ಯಾರದೋ ಸ್ವಾರ್ಥದಿಂದ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತನಾದ ಡಿ.ಕೆ. ಸುರೇಶ್ ಎಲ್ಲ ಮುಖಂಡರು ಒಪ್ಪಿರುವ ಅಭ್ಯರ್ಥಿ. ಹಾಗಾಗಿ ರಾಜ್ಯದ ಬಹುತೇಕ ಹಾಗೂ ಕೇಂದ್ರದ ಮುಖಂಡರು ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷದ ಅಭ್ಯರ್ಥಿಯ ಗೆಲವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯೂ ಅಲ್ಲ. ಫಲಿತಾಂಶದಿಂದ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂದರು.
ಪ್ರಗತಿ ಸಾಧ್ಯವಿಲ್ಲ: ಗುಜರಾತ್ ಮುಖ್ಯಮಂತ್ರಿಯು ತಾನೇ ದೇಶದ ಪ್ರಧಾನಿ ಎಂಬ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಅವರು ಹಿರಿಯ ಕಿರಿಯ ಎನ್ನುವ ಪರದೆ ದಾಟಿ ಲಗಾಮಿಲ್ಲದ ಕುದುರೆಯಾಗಿದ್ದಾರೆ. ದೇಶದ ಪ್ರಧಾನಿಯ ಬಗ್ಗೆ ಅವಹೇಳನಕಾರಿಯಾಗಿ ವರ್ತಿಸಿದ್ದು, ದೇಶದ ಹಾಗೂ ಜನತೆಯ ಕ್ಷಮೆ ಕೇಳಬೇಕೆಂದರು.
ದೇಶದ ಇತರ ರಾಜ್ಯಗಳಲ್ಲೂ ಉತ್ತಮ ಮುಖ್ಯಮಂತ್ರಿಗಳಿದ್ದು, ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರಿಗೂ ಪ್ರಶಂಸೆ ದೊರಕಿದೆ. ಕಾಂಗ್ರೆಸ್ ಪಕ್ಷದಲ್ಲೂ ದೇಶದ ಉಜ್ವಲ ಭವಿಷ್ಯ ರೂಪಿಸುವ ವ್ಯಕ್ತಿಗಳಿದ್ದು, ತಮ್ಮ ಪ್ರಧಾನಿ ಯಾರೆಂಬುದನ್ನು ನಿರ್ಧರಿಸುತ್ತಾರೆ. ದೇಶ ಮುನ್ನಡೆಸುವುದು ಎಂದರೆ ಪ್ರಚೋದನಕಾರಿ ಭಾಷಣ ಹಾಗೂ ದಮನಕಾರಿ ನೀತಿಯಿಂದಲ್ಲ. ಶೌರ್ಯ ಹಾಗೂ ಪರಾಕ್ರಮ ಮೆರೆಯಲು ಸಂಯಮ ಮತ್ತು ತಾಳ್ಮೆಯ ಅಂಕುಶ ಬೇಕಿದೆ ಎಂದರು.
ಸಚಿವರಾದ ಆರ್. ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್, ಅಭ್ಯರ್ಥಿ ಡಿ. ಕೆ. ಸುರೇಶ್, ಶಾಸಕರಾದ ಬಿ. ಶಿವಣ್ಣ, ಬಿ.ಟಿ. ದಯಾನಂದರೆಡ್ಡಿ, ಎಸ್. ಟಿ. ಸೋಮಶೇಖರ್, ಮುಖಂಡರಾದ ಮೋಟಮ್ಮ, ಕೊಂಡಯ್ಯ, ಆರ್. ಕೆ. ರಮೇಶ್, ಡಾ. ಮನೋಹರ್, ಚಿನ್ನಪ್ಪ, ಕೃಷ್ಣಮೂರ್ತಿ, ಸೀನಪ್ಪ, ಬಾಬೂರೆಡ್ಡಿ, ಗಿರಿಗೌಡ, ಪಟಾಪಟ್ ನಾಗರಾಜ್ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

