ತಾ. ಸರ್ಕಾರಿ ನೌಕರರ ಕ್ರೀಡಾಕೂಟ ಇಂದು
ನೆಲಮಂಗಲ: ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯ್ತಿ ಮತ್ತು ಪುರಸಭೆಯ ಸಹಯೋಗದೊಂದಿಗೆ 2012-2013ನೇ ಸಾಲಿನ ನೆಲಮಂಗಲ ತಾಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟನಾ ಸಮಾರಂಭವನ್ನು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗುರುವಾರ ಬೆಳಗ್ಗೆ 9-00 ಗಂಟೆಗೆ ಏರ್ಪಡಿಸಲಾಗಿದೆ. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕೇಂದ್ರ ಸಚಿವ ಎಂ.ವೀರಪ್ಪಮೊಯ್ಲಿ, ಅತಿಥಿಗಳಾಗಿ ತಾಪಂ ಅಧ್ಯಕ್ಷ ಎನ್.ಶ್ರೀನಿವಾಸಮೂರ್ತಿ, ಜಿ.ಪಂ. ಸದಸ್ಯರಾದ ಬಿ.ಎಂ.ಎಲ್.ಕಾಂತರಾಜು, ವೇಣುಗೋಪಾಲ್, ಎಂ.ಎನ್.ರಾಮ್, ಸುನಂದಮ್ಮ ಶಿವಕುಮಾರ್ ಮತ್ತಿತರರು ಆಗಮಿಸಲಿದ್ದಾರೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಾಸುದೇವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ನೇತ್ರ ಚಿಕಿತ್ಸಾ ಶಿಬಿರ
ದೇವನಹಳ್ಳಿ: ಇಲ್ಲಿನ ಲಯನ್ಸ್ ಮತ್ತು ಲಯನೆಸ್ ಸಂಸ್ಥೆ, ಲಯನ್ ಸೇವಾ ಪ್ರತಿಷ್ಠಾನ ಹಾಗೂ ಬೆಂಗಳೂರು ಪಶ್ಚಿಮ ಲಯನ್ ಕಣ್ಣಾಸ್ಪತ್ರೆ ಮತ್ತು ಹುಣಸಮಾರನಹಳ್ಳಿಯ ಕೃಷ್ಣದೇವರಾಯ ದಂತ ವೈದ್ಯಕೀಯ ಸಂಸ್ಥೆ ಸಂಯುಕ್ತಾಶ್ರಯದಲ್ಲಿ 141 ನೆಯ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರ ಗುರುವಾರ ಬೆಳಗ್ಗೆ ಹತ್ತು ಗಂಟೆಗೆ ಲಯನ್ಸ್ ಸೇವಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಆರ್.ನಾಗರಾಜಯ್ಯ ತಿಳಿಸಿ ಕಣ್ಣಿನ ಮತ್ತು ಹಲ್ಲುಗಳ ತೊಂದರೆ ಇರತಕ್ಕವರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಕೋರಿದ್ದಾರೆ.
ಚಿತ್ರನಟ ಮದನ್ ಪಟೇಲ್ ಶಿಬಿರ ಉದ್ಘಾಟಿಸಲಿದ್ದು ವಿಜಯನಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಕೃಷ್ಣದಾಸ್, ಭಾರತಿ ಏರ್ಟೆಲ್ ಸಂಸ್ಥೆಯ ಪ್ರಮೋದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ರಮೇಶ್ಬಾಬು ತಿಳಿಸಿದ್ದಾರೆ.
ಮಾಗಡಿ: ಶಾಂತಿಯುತ ಮತದಾನ
ಮಾಗಡಿ: ಬೆಂಗಳೂರು ಲೋಕಸಭಾ ಉಪ ಚುನಾವಣೆಯ ಮತದಾನ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ನಡೆದಿದೆ. ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನ ಮಂದಗತಿಯಲ್ಲಿಯೇ ನಡೆದಿದ್ದು, ಸಂಜೆವರೆಗೂ ಮತದಾನ ಬಿರುಸುಗೊಳ್ಳಲಿಲ್ಲ, ಮತದಾರರಲ್ಲಿ ಮತದಾನದ ಬಗ್ಗೆ ನಿರಾಶಕ್ತಿ ಕಂಡು ಬಂತು. ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 3 ಸಾವಿರ ಮತದಾರರಿದ್ದು, 288 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಕೆಲ ಕಡೆ ಸಣ್ಣಪುಟ್ಟ ಘಟನೆಗಳು ಬಿಟ್ಟರೆ, ಒಟ್ಟಾರೆ ಮತದಾನ ಶಾಂತಿಯುತವಾಗಿ ನಡೆದಿದೆ. ಶಾಸಕ ಎಚ್.ಸಿ. ಬಾಲಕೃಷ್ಣ ಹಾಗು ಕುಟುಂಬದ ಸದಸ್ಯರುಗಳು ತವರೂರು ಹುಲೀಕಟ್ಟೆ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಜಿ ಸಚಿವ ಎಚ್.ಎಂ. ರೇವಣ್ಣ ಹೊಸಪೇಟೆಯಲ್ಲಿ ಮತದಾನ ಮಾಡಿದರೆ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹುಚ್ಚಹನುಮೇಗೌಡನಪಾಳ್ಯದಲ್ಲಿ ಮತದಾನ ಮಾಡಿದರು.
ಸಿಬ್ಬಂದಿ ಕೊರತೆ: ಬಹುತೇಕ ಮತಗಟ್ಟೆಗಳಲ್ಲಿ ಸಿಬ್ಬಂದಿ ಕೊರತೆ ಕಂಡು ಬಂದಿದೆ.
ಕಾರ್ಮೆಲ್ ಶಾಲೆಯಲ್ಲಿ ರಾಖಿ ಹಬ್ಬ
ದೇವನಹಳ್ಳಿ: ಇಲ್ಲಿನ ಕಾರ್ಮೆಲ್ ಆಂಗ್ಲ ಶಾಲೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಮಕ್ಕಳಿಂದಲೇ ಮಂಗಳವಾರ ಶಾಲಾ ಆಡಳಿತ ಮಂಡಳಿ ವತಿಯಿಂದ ಆಯೋಜಿಸಲಾಗಿತ್ತು. ಶಾಲೆಯಲ್ಲಿ 500ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿದ್ದು, ಈ ಸಂದರ್ಭದಲ್ಲಿ ಬಾಲಕಿಯರು ಎಲ್ಲ ಬಾಲಕರಿಗೆ ರಾಖಿ ಕಟ್ಟಿ ಶುಭ ಕೋರಿದರು. ಶಾಲೆ ಮುಖ್ಯ ಶಿಕ್ಷಕ ಎನ್.ರವಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ರಕ್ಷ ಬಂಧನದ ಮಹತ್ವ ಸಹೋದರ ಸಹೋದರಿಯರ ಪ್ರೀತಿ ವಾತ್ಸಲ್ಯ ಹೆಚ್ಚಿಸುವುದೇ ಆಗಿರುತ್ತದೆ ಈ ಭಾವನೆ ಶಾಲೆಯ ಎಲ್ಲ ಮಕ್ಕಳಲ್ಲಿ ಬರಲಿ ಎಂದೇ ಕಳೆದ ಮೂರು ವರ್ಷಗಳಿಂದ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಶಿಕ್ಷಕಿ ಉಷಾ ಪೂರ್ಣಚಂದ್ರ ಮಾತನಾಡಿದರು.
ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ರಾಮನಗರ: ರುಂಡ, ಮುಂಡ ಬೇರೆಯಾದ ಸ್ಥಿತಿಯಲ್ಲಿರುವ ಸುಮಾರು 25 ವರ್ಷ ವಯಸ್ಸಿನ ಮಹಿಳೆಯ ಶವ ತಾಲೂಕಿನ ಎಸ್ಆರ್ಎಸ್ ಬೆಟ್ಟದ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬುಧವಾರ ಪತ್ತೆಯಾಗಿದೆ. ಶವ ಭಾಗಶಃ ಕೊಳೆತ ಸ್ಥಿತಿಯಲ್ಲಿದ್ದು, ದುರ್ವಾಸನೆ ಗ್ರಹಿಸಿದ ದನಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿ ಶವ ಪತ್ತೆ
ದೊಡ್ಡಬಳ್ಳಾಪುರ: ಇಲ್ಲಿನ ಮುತ್ತೂರು ಬಡಾವಣೆಯ ರೇಲ್ವೆ ಹಳಿ ಸಮೀಪ ಹಳ್ಳವೊಂದರಲ್ಲಿ 2 ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿರುವ ಶವ ದೊರೆತಿದೆ. ಮೃತ ಶರೀರವನ್ನು ತಾಲೂಕಿನ ಓಬದೇನಹಳ್ಳಿ ಗ್ರಾಮದ ನಾಗರಾಜು (60) ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಇಲ್ಲಿ ತಂದೆಸೆಯಲಾಗಿದೆ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಕುಡಿದ ಅಮಲಿನಲ್ಲಿ ಈತ ಬಹಿರ್ದೆಸೆಗೆ ಬಂದು ಆಕಸ್ಮಿಕ ಸಾವಿಗೀಡಾಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದೊಡ್ಡಬಳ್ಳಾಪುರ ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ವಾಹನ ಕೊಡುಗೆ
ಹೊಸಕೋಟೆ: ಪಟ್ಟಣದ ಜಿಇಎಫ್ ಕಣ್ಣಿನ ಆಸ್ಪತ್ರೆಗೆ ಬೆಂಗಳೂರಿನ ಜೀವನ್ಭಿಮಾನಗರದ ರೋಟರಿ ಸಂಸ್ಥೆ ಹಾಗೂ ಫಿನ್ಲ್ಯಾಂಡ್ ರೋಟರಿ ಸಂಸ್ಥೆ ಸಹಯೋಗದಲ್ಲಿ ಸಂಚಾರಿ ನೇತ್ರ ಚಿಕಿತ್ಸಾಲಯಕ್ಕೆ ವಾಹನ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ ಕೆ.ಎಸ್.ನಾಗೇಂದ್ರ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ನೇತ್ರ ತಪಾಸಣೆ ಕಾರ್ಯ ಕೈಗೊಳ್ಳಲು ಅನುವಾಗುವಂತೆ ವಾಹನ ನೀಡುತ್ತಿರುವುದು ಅತ್ಯುತ್ತಮ ಯೋಜನೆಯಾಗಿದ್ದು, ದೃಷ್ಟಿದೋಷ ನಿವಾರಣೆಯಲ್ಲಿ ಸಹಕಾರಿಯಾಗಲಿದೆ ಎಂದರು. ಸುಮಾರು 8 ಲಕ್ಷ ಮೌಲ್ಯದ ವಾಹನವನ್ನು ಹೊಸಕೋಟೆ ತಾ. ಒಳಗೊಂಡಂತೆ ಬೆಂಗಳೂರು ಗ್ರಾಮಾಂತರ, ನಗರ, ಚಿಕ್ಕಬಳ್ಳಾಪುರ, ವ್ಯಾಪ್ತಿಯಲ್ಲಿನ ದೃಷ್ಟಿದೋಷಕ್ಕೆ ಒಳಗಾಗಿರುವ ಬಡಜನರಿಗೆ ಬಳಸಿಕೊಳ್ಳಲು ನೀಡಲಾಗುತ್ತಿದೆ ಎಂದರು.
ಜಿಇಎಫ್ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಂದರರಾಮಶೆಟ್ಟಿ ಮಾತನಾಡಿದರು. ಜಿಲ್ಲಾ ಸಹಾಯಕ ಗೌರ್ನರ್ ಪಿ.ಸಿ.ಪಿ.ಹರನ್, ಜೀವನ್ಭಿಮಾನಗರ ರೋಟರಿ ಸಂಸ್ಥೆ ಕಾರ್ಯದರ್ಶಿ ಆರ್. ಜೋತಿಶ್ ಮತ್ತಿತರರು ಉಪಸ್ಥಿತರಿದ್ದರು.
ಯಶಸ್ವಿನಿ ಯೋಜನೆ ನವೀಕರಣ
ರಾಮನಗರ: ಯಶಸ್ವಿನಿ ಯೋಜನೆಯಡಿ 2013-14ನೇ ಸಾಲಿಗೆ ಸದಸ್ಯತ್ವ ನೋಂದಾಯಿಸಲು ಜು.15 ರಿಂದ ಚಾಲನೆ ನೀಡಲಾಗಿದೆ. ಫಲಾನುಭವಿಗಳ ನವೀಕರಣ ಕಾರ್ಯವು ಆ.31ಕ್ಕೆ ಹಾಗೂ ಹೊಸ ಫಲಾನುಭವಿಗಳ ನೋಂದಣಿ ಕಾರ್ಯವು ಅ.15ಕ್ಕೆ ಮುಕ್ತಾಯಗೊಳ್ಳಲಿದೆ. ಜಿಲ್ಲಾ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅರ್ಹ ಸದಸ್ಯರು ರು.10 ಪಾವತಿಸಿ ಹಾಗೂ ವಿವಿಧ ಸಹಕಾರ ಸಂಘಗಳಲ್ಲಿನ ಇತರೆ ಅರ್ಹ ಸದಸ್ಯರು ನಿಯಮಾನುಸಾರ ನಿಗದಿತ ಅವಧಿಯೊಳಗೆ ನೊಂದಾಯಿಸಿಕೊಂಡು ಯಶಸ್ವಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವುದು.
ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಹಕಾರ ಸಂಘ ಅಥವಾ ತಾಲೂಕು ಸಹಾಯಕ ಅಭಿವೃದ್ಧಿ ಅಧಿಕಾರಿ ಕಚೇರಿ ಅಥವಾ ಜಿಲ್ಲಾ ಕೇಂದ್ರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ದೂ.080-27271256 ಅಥವಾ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ದೂ. 080-27274008 ಸಂಪರ್ಕಿಸಲು ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕ ಕೆ.ಎಲ್.ನಂಜುಂಡೇಗೌಡ ತಿಳಿಸಿದ್ದಾರೆ.
ಮಾನವ ಹಕ್ಕು ಜಾಗೃತಿ ಸಮಿತಿಗೆ ಆಯ್ಕೆ
ಹೊಸಕೋಟೆ: ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷರಾಗಿ ಎಂ.ವಿ.ಸೋಮಶೇಖರ್ ಆಯ್ಕೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎನ್.ನರಸಿಂಹಯ್ಯ ಸೂಚನೆ ಮೇರೆಗೆ ಪಟ್ಟಣದ ನಿವಾಸಿ ಎಂ.ವಿ.ಸೋಮಶೇಖರ್ ವರನ್ನು ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಪದಾಧಿಕಾರಿಗಳಾದ ಮುನಿರಾಜು, ಲೊಕೇಶ್, ಪರ್ತಕರ್ತ ವಡ್ನಳ್ಳಿರಾಜು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತಾಲೂಕು ಮಾನವ ಹಕ್ಕುಗಳ ಜಾಗೃತಿ ಸಮಿತಿ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

