ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರದ ಧ್ವನಿ ಬೆಳಗಾವಿಯಲ್ಲಿ ಮೊಳಗಲಿ

Published On :

ಕನ್ನಡಪ್ರಭ ವಾರ್ತೆ, ದೊಡ್ಡಬಳ್ಳಾಪುರ,ಡಿ.1
ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೇಂದ್ರವಾಗಬೇಕು. 50 ವರ್ಷಗಳಷ್ಟು ಹಳೆಯದಾದ ದೊಡ್ಡಬಳ್ಳಾಪುರ ಉಪವಿಭಾಗದ ಕೇಂದ್ರ ಕಚೇರಿ ಬೆಂಗಳೂರಿನಿಂದ ಈ ಕೂಡಲೇ ವರ್ಗಾವಣೆಯಾಗಬೇಕು ಎಂಬ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಪ್ರತಿ ಹಂತದಲ್ಲೂ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಪ್ರಭುತ್ವದಿಂದಾಗುತ್ತಿದೆಯಾದರೂ ಚಿಂತನೆ ಜೀವಂತಿಕೆಯನ್ನು ಕಳೆದುಕೊಂಡಿಲ್ಲ.
ಈ ಬಗ್ಗೆ ಜನಪ್ರತಿನಿಧಿಗಳಿಂದ ಆಗಬೇಕಾದ ಕೆಲಸ ಪೂರ್ಣ ಮತ್ತು ನಿರೀಕ್ಷಿತ ಹಂತದಲ್ಲಿ ಆಗುತ್ತಿಲ್ಲ. ಕಳೆದ ಕೆಲ ವರ್ಷಗಳ ಹಿಂದೆಯೂ ಜನಪ್ರತಿನಿಧಿಗಳ ಜಾಣ್ಮೆ ಹೋರಾಟವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಹುನ್ನಾರ ಮಾಡಿತ್ತು. ಈಗ ಕೂಡ ಅದೇ ಪರಿಸ್ಥಿತಿ ಕಾಣುತ್ತಿರುವುದು ಆತಂಕದ ವಿಚಾರ. ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದ ಜನ ತಮ್ಮ ಜನಪ್ರತಿನಿಧಿಗಳ ಹೊಣೆಗಾರಿಕೆಯನ್ನು ಪದೇ ಪದೇ ಎಚ್ಚರಿಸುತ್ತಿದ್ದಾರೆ.
ಅಧಿವೇಶನದಲ್ಲಿ ದನಿಯೆತ್ತಿ ಶಾಸಕರೇ: ಈಗ ವಿಧಾನಮಂಡಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದೆ. ಹೋರಾಟ ತೀವ್ರಗತಿ ಪಡೆದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದು. ಈಗಾಗಲೇ ಇಲ್ಲಿನ ಜನ ಎಲ್ಲ ಹಂತಗಳಲ್ಲಿ ಮುಖ್ಯಮಂತ್ರಿಗಳಿಂದ ಹಿಡಿದು, ಕಂದಾಯ ಸಚಿವರು, ನಗರಾಭಿವೃದ್ಧಿ ಸಚಿವರು, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಂಬಂಧಿತ ಅಧಿಕಾರಗಳಿಗೆ ಮನವಿ ಕೊಟ್ಟಿದ್ದಾರೆ. ಆಗ್ರಹ ಮುಟ್ಟಿಸಿದ್ದಾರೆ. ಬೇಡಿಕೆ ಸಲ್ಲಿಸಿದ್ದಾರೆ. ವಿಚಾರ ಎಲ್ಲರಿಗೂ ತಿಳಿದಿರುವ ಸಂದರ್ಭದಲ್ಲಿ ಈ ಕುರಿತು ಕನಿಷ್ಠ ವಿಚಾರ ಪ್ರಸ್ತಾಪಿಸಿ ಚರ್ಚೆಗೆ ತರುವ ಹೊಣೆಗಾರಿಕೆಯನ್ನು ಸ್ಥಳೀಯ ಶಾಸಕರು ಮಾಡಬೇಕು.
ಬೆಳಗಾವಿ ಅಧಿವೇಶನದಲ್ಲಿ ಯಾವುದಾದರೊಂದು ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಜಿಲ್ಲೆಯ ಹೊರಗೆ ಜಿಲ್ಲಾ ಕೇಂದ್ರ ಹೊಂದಿರುವ ನತದೃಷ್ಟ ಜಿಲ್ಲೆಯಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ದೊಡ್ಡಬಳ್ಳಾಪುರ ಘೋಷಿಸುವ ಬಗ್ಗೆ ವಿಚಾರ ಪ್ರಸ್ತಾಪ ಮಾಡಿ. ಇಲ್ಲಿನ ಜನರ ಬಹುದಿನದ ಬೇಡಿಕೆಗೆ ಪೂರಕವಾಗಿ ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೇರಬೇಕಾದ ನೈಜ ಕಾಳಜಿಯನ್ನು ದೊಡ್ಡಬಳ್ಳಾಪುರದ ಶಾಸಕ ಟಿ.ವೆಂಕಟರಮಣಯ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮಂತ್ರಿ ಕೃಷ್ಣಬೈರೇಗೌಡ ಪ್ರದರ್ಶಿಸಬೇಕು ಎಂಬುದು ಇಲ್ಲಿನ ಜನರ ಸ್ಪಷ್ಟ ಆಗ್ರಹ.
ಪರಿಶ್ರಮ ವಹಿಸಿ: ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ಸರ್ಕಾರ ಮತ್ತು ಶಾಸಕರುಗಳ ವಿಶ್ವಾಸ ಪಡೆಯುವ, ಜಿಲ್ಲಾ ಕೇಂದ್ರವಾಗಲು ಇರುವ ಅರ್ಹತೆಗಳ ಅಂಕಿ-ಅಂಶಗಳನ್ನು ಸದನದಲ್ಲಿ ಮಂಡಿಸುವ ಪ್ರಜ್ಞಾವಂತಿಕೆ ತೋರಬೇಕು. 8 ವರ್ಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಇದಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಬೇಕಿದೆ. ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾದರೆ ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕುಗಳ ಎಲ್ಲರಿಗೂ ಅನುಕೂಲವಾಗುತ್ತದೆ.
ಈ ನಿಟ್ಟಿನಲ್ಲಿ ಭೌಗೋಳಿಕವಾಗಿ, ಉದ್ಯೋಗ, ಸಂಪನ್ಮೂಲ ಲಭ್ಯತೆ, ಅವಕಾಶ, ಕಂದಾಯ, ಸ್ಥಳಾವಕಾಶ ಎಲ್ಲ ರೀತಿಯಲ್ಲೂ ಪ್ರಶಸ್ತ ಎನಿಸಿರುವ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಲಿ ಎಂಬ ಧ್ವನಿ ಬೆಳಗಾವಿ ಅಧಿವೇಶನದಲ್ಲಿ ಮೊಳಗಲಿ.



ಭರವಸೆ ಬೇಡ ಸ್ವಾಮಿ
 ನಮಗೀಗ ಭರವಸೆ ಬೇಡ ಸ್ವಾಮಿ. ಸರ್ಕಾರ ಕೊಟ್ಟ ಭರವಸೆಗಳನ್ನು ಕೇಳಿ ಕೇಳಿ ಸಾಕಾಗಿದೆ. ಈಗ ನಮ್ಮ ಹೋರಾಟಕ್ಕೆ, ಬೇಡಿಕೆಗೆ ಸ್ಪಷ್ಟವಾದ ಪ್ರತಿಫಲ ಬೇಕಾಗಿದೆ ಅಷ್ಟೇ. ಎಲ್ಲವೂ ಸರಿಯಾಗಿ ನಡೆದಿದ್ದರೆ 2007-08ರಲ್ಲೇ ದೊಡ್ಡಬಳ್ಳಾಪುರ ಜಿಲ್ಲಾ ಕೇಂದ್ರವಾಗಬೇಕಿತ್ತು. ಆಗಿನ ಸರ್ಕಾರದ ಪಾರ್ಶ್ವದೃಷ್ಟಿಕೋನದ ಪರಿಣಾಮ ರಾಮನಗರ ಜಿಲ್ಲೆಯಾದರೂ ದೊಡ್ಡಬಳ್ಳಾಪುರ ಜಿಲ್ಲೆಯಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೂಡ ಕಳೆದ ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ನಡೆದಿದ್ದ ಗಂಭೀರ ಹೋರಾಟದ ಪರಿಣಾಮ ಚುರುಕುಗೊಂಡಿದ್ದ ಜಿಲ್ಲಾಡಳಿತ ದೊಡ್ಡಬಳ್ಳಾಪುರ ಉಪವಿಭಾಗ ಕಚೇರಿಯನ್ನು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ 30 ದಿನಗಳ ಒಳಗೆ ವರ್ಗಾಯಿಸುವ ಭರವಸೆ ಸಿಕ್ಕಿತ್ತು. ಆದರೆ ಈಡೇರಲಿಲ್ಲ. ಆಗ ನಡೆದ ಅಧಿವೇಶನದ ವೇಳೆ ಕೂಡ ಇಲ್ಲಿನ ಶಾಸಕರು ಉಪವಿಭಾಗ ಕಚೇರಿ ವರ್ಗಾವಣೆ ಕುರಿತು ಸದನದಲ್ಲಿ ಚರ್ಚಿಸುವ ಭರವಸೆ ಕೊಟ್ಟಿದ್ದರು. ಆದರೆ ಚರ್ಚಿಸಲು ಅವಕಾಶವನ್ನೇ ಮಾಡಿಕೊಳ್ಳಲಿಲ್ಲ. ಈಗ ಮತ್ತೊಂದು ಅಧಿವೇಶನ ಬಂದಿದೆ. ಈಗಲಾದರೂ ವಿಚಾರ ಗಂಭೀರ ಚರ್ಚೆಗೆ ಒಳಗಾಗಲಿ ಎನ್ನುವುದು ಹೋರಾಟಗಾರರ ಆಶಯ.

 ಕೆ.ಆರ್.ರವಿಕಿರಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.