ಇತಿಹಾಸ ಪ್ರಸಿದ್ಧ ಶ್ರೀಚಂದ್ರಮೌಳೇಶ್ವರ ಬ್ರಹ್ಮರಥೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಕಾರ್ತೀಕ ಮಾಸದ ಕಡೆಯ ಸೋಮವಾರಧ ಅಮಾವಾಸ್ಯೆಯಂದು ವಿಜೃಂಭಣೆಯಿಂದ ನಡೆಯಿತು.
ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಶ್ರೀಸ್ವಾಮಿಗೆ ಹಣ್ಣು-ಧವನ ಅರ್ಪಿಸುವ ಮೂಲಕ ಭಕ್ತಿ ಭಾವ ಮೆರೆದರು. 5 ಅಂತಸ್ತುಗಳೋಪಾದಿಯಲ್ಲಿ ಕಟ್ಟಲ್ಪಡುವ ಆಕರ್ಷಕ ಮತ್ತು ಬೃಹತ್ ರಥವನ್ನು ನೂರಾರು ಭಕ್ತರು ಎಳೆಯುವ ದೃಶ್ಯ ಚೇತೋಹಾರಿಯಾಗಿತ್ತು. ತೇರಿನಬೀದಿಯಲ್ಲಿರುವ ಅರುಣಾಚಲೇಶ್ವರ (ಚಂದ್ರಮೌಳೇಶ್ವರ) ದೇವಾಲಯದಲ್ಲಿ ವಿಶೇಷ ಪೂಜೆಯ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ಮುಜರಾಯಿ ಇಲಾಖೆಯ ದೇವಾಲಯವಾಗಿದ್ದು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸುಮಾರು 3 ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಬ್ರಹ್ಮರಥೋತ್ಸವ ನಡೆಯುತ್ತಾ ಬರುತ್ತಿದೆ. ಅರುಣಾಚಲಪಂತ ಎಂಬ ಭಕ್ತರಿಂದ ಸ್ಥಾಪಿಸಲ್ಪಟ್ಟ ದೇವಾಲಯ ತನ್ನ ವಿಶಿಷ್ಟ ಶೈಲಿಯಿಂದ ಆಕರ್ಷಣೆ ಪಡೆದುಕೊಂಡಿದೆ. ವಾಸ್ತು ವಿಶೇಷಗಳಿಂದ ಗಮನ ಸೆಳೆಯುತ್ತದೆ. ಇಲ್ಲಿರುವ ಶಿವಲಿಂಗ ಚಂದ್ರಮೌಳೇಶ್ವರನಾಗಿ ಪ್ರಖ್ಯಾತವಾಗಿದೆ. ದೇವಾಲಯ ಪ್ರಾಂಗಣದಲ್ಲಿ ಸೂರ್ಯನಾರಾಯಣ (ವೆಂಕಟರಮಣ)ನ ಮಂದಿರವೂ ಇದ್ದು, ದೇವಾಲಯ ಶಿವ ಮತ್ತು ವಿಷ್ಣು ಪಂಥಗಳ ಸಮನ್ವಯ ತಾಣವಾಗಿ ಪ್ರಖ್ಯಾತಿ ಪಡೆದಿದೆ.
ಕಳೆದ ದಶಕದಿಂದ ಬೃಹತ್ ರಥ ನಿರ್ಮಾಣ ಮಾಡಿ ರಥೋತ್ಸವ ನಡೆಸಲಾಗುತ್ತಿರುವುದು ವಿಶೇಷ. 5 ಅಂತಸ್ತುಗಳಲ್ಲೂ ಶಿವನ ವಿವಿಧ ಅವತಾರಗಳು ಮತ್ತು ಶೈವ ಪರಂಪರೆಯನ್ನು ಬಿಂಬಿಸುವ ಧಾರ್ಮಿಕ ಚಿತ್ರಪಟಗಳನ್ನು ಅಳವಡಿಸಿ ಬೃಹತ್ಭವ್ಯವಾಗಿ ರಥವನ್ನು ಸಿದ್ಧಪಡಿಸಲಾಗುತ್ತದೆ. ಅದಕ್ಕೆ ಆಳೆತ್ತರದ 4 ಕಲ್ಲಿನ ಚಕ್ರಗಳು ಮತ್ತಷ್ಟು ಮೆರಗು ಒದಗಿಸಿವೆ.
ದೊಡ್ಡಬಳ್ಳಾಪುರ ನಗರ ಸೇರಿದಂತೆ ಸುತ್ತಮುತ್ತಲ ಹಲವಾರು ಹಳ್ಳಿಗಳ ಜನರೂ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ಮುನ್ನಾದಿನ ಶ್ರೀಸ್ವಾಮಿಯ ಕಲ್ಯಾಣೋತ್ಸವ ಸಹ ವಿಜೃಂಭಣೆಯಿಂದ ನಡೆಯಿತು. ಮಂಗಳವಾರ ಸಂಜೆ ಚಂದ್ರಮೌಳೇಶ್ವರಸ್ವಾಮಿಯ ರಾಜಬೀದಿ ಉತ್ಸವ ನಡೆಯಲಿದೆ. ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಿರಂತರ ನಡೆಯುತ್ತಿವೆ. ರಥೋತ್ಸವ ಅಂಗವಾಗಿ ವಿವಿಧೆಡೆ ಅರವಂಟಿಕೆಗಳನ್ನು ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

