ಬೆಂಗಳೂರು ಗ್ರಾಮಾಂತರ

ಭೂ ಒತ್ತುವರಿ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿ

Published On :

ದೊಡ್ಡಬಳ್ಳಾಪುರ: ರಾಜ್ಯ ಉಪಲೋಕಾಯುಕ್ತ ನ್ಯಾ.ಸುಭಾಷ್ ಬಿ. ಅಡಿ ನೇತೃತ್ವದಲ್ಲಿ ಲೋಕಾಯುಕ್ತರ ಜನಸಂಪರ್ಕ ಸಭೆ ಇಲ್ಲಿನ ಒಕ್ಕಲಿಗರ ಭವನದಲ್ಲಿ ಸೋಮವಾರ ನಡೆಯಿತು.
ದೊಡ್ಡಬಳ್ಳಾಪುರ ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳ ವಿಲೇವಾರಿ ಮತ್ತು ಸಾರ್ವಜನಿಕರ ಕುಂದುಕೊರತೆಗಳನ್ನು ಕುರಿತು ಕಾರ್ಯಕ್ರಮದಲ್ಲಿ ನೇರ ಸಂವಾದ ನಡೆಸಲಾಯಿತು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ವಿವಿಧ ವಿಚಾರಗಳ ಕುರಿತು ಉಪಲೋಕಾಯುಕ್ತರ ಗಮನ ಸೆಳೆದರು. ಹಲವು ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂತು.
ಅಕ್ರಮ ಭೂ ಒತ್ತುವರಿ ವಿರುದ್ಧ ಆಕ್ರೋಶ: ಸಭೆಯಲ್ಲಿ ಮುಖ್ಯವಾಗಿ ಅಕ್ರಮ ಭೂ ಒತ್ತುವರಿ ವಿಚಾರ ಪ್ರಸ್ತಾಪವಾಯಿತು. ನಗರದ ನಾಗರಕೆರೆ ಸೇರಿದಂತೆ ನಗರ ಮತ್ತು ತಾಲೂಕು ಹಂತದಲ್ಲಿರುವರ ಸರ್ಕಾರಿ ಸ್ವಾಮ್ಯದ ಅನೇಕ ಗುಂಡುತೋಪು, ಸರ್ಕಾರಿ ತೋಪು, ಧರ್ಮದ ತೋಪು, ರಾಜಕಾಲುವೆ, ಕೆರೆ-ಕುಂಟೆ, ಸ್ಮಶಾನಗಳ ಒತ್ತುವರಿ ಅವ್ಯಾಹತವಾಗಿ ನಡೆದಿದೆ. ಆದರೆ ಈ ಬಗ್ಗೆ ಅಧಿಕಾರಿಗಳು ಯಾವುದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಇಲ್ಲಿನ ಹಲವು ಅಕ್ರಮ ಬಡಾವಣೆಗಳು, ನಗರಸಭೆಯಲ್ಲಿ ಆಗಿವೆ ಎನ್ನಲಾಗುತ್ತಿರುವ ಅಕ್ರಮ ಖಾತೆಗಳ ಸಮಗ್ರ ತನಿಖೆಗೆ ಒತ್ತಾಯಿಸಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂತು.
ಜನಪರ ಲೋಕಾಯುಕ್ತ: ನಾಗರಿಕರ ಎಲ್ಲ ಅಹವಾಲು-ದೂರುಗಳನ್ನು ಸಮಗ್ರವಾಗಿ ಆಲಿಸಿದ ಉಪಲೋಕಾಯುಕ್ತರು ಎಲ್ಲ ವಿಚಾರಗಳ ಬಗ್ಗೆ ಜನಪರವಾದ ಕಾಳಜಿ ಹೊಂದಿರುವ ಗಂಭೀರ ಕ್ರಮಗಳನ್ನು ಕೈಗೊಳ್ಳಲಾಗುವುದು. ಭೂ ಒತ್ತುವರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಒತ್ತುವರಿದಾರ ಎಷ್ಟೇ ಪ್ರಭಾವಿಯಾಗಿದ್ದರೂ ಕೂಡ ಯಾವುದೇ ಒತ್ತಡಗಳಿಗೂ ಮಣಿಯದೇ ಅಕ್ರಮ ಒತ್ತುವರಿ ತೆರವು ಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ ಲೋಕಾಯುಕ್ತಕ್ಕೆ ಬಂದಿರುವ ದೂರುಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗಸೂಚಿ ನೀಡಲಾಗುವುದು. ಜನರ ಆಶೋತ್ತರಗಳಿಗೆ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಂಕರ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಡಾ.ಮಂಜುನಾಥ್, ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥರೆಡ್ಡಿ, ನಗರಸಭೆ ಆಯುಕ್ತ ಡಾ.ಬಿಳಿಕೆಂಚಪ್ಪ, ಡಿವೈಎಸ್ಪಿ ಶ್ರೀಧರ್ ಸೇರಿದಂತೆ ಅನೇಕ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಲೋಕಾಯುಕ್ತರಿಗೆ ದೂರುಗಳು, ಮನವಿಗಳನ್ನು ಸಲ್ಲಿಸಿದರು.


ಭ್ರಷ್ಟಾಚಾರ ತಡೆಗಟ್ಟಿ
ಅದೇ ರೀತಿ ತಾಲೂಕಿನ ವ್ಯಾಪ್ತಿಯ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟಾಚಾರ ನಿಗ್ರಹಿಸುವಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಕೆಲ ಆರೋಪಗಳೂ ಕೇಳಿಬಂದವು. ಅದೇ ರೀತಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಚರ್ಚೆಯ ವಿಷಯವಾಯಿತು. ಹಲವು ಇಲಾಖೆಗಳಲ್ಲಿ ನಡೆದಿವೆ ಎನ್ನಲಾಗಿರುವ ಅಕ್ರಮಗಳ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.