ಏತನೀರಾವರಿ ಯೋಜನೆಗೆ ತಾಂತ್ರಿಕ ಅಡಚಣೆ
ಚನ್ನಪಟ್ಟಣ: ಸಂಕಲಗೆರೆ ಏತನೀರಾವರಿ ಯೋಜನೆಗೆ ಕೆಲ ತಾಂತ್ರಿಕ ಅಡಚಣೆಗಳು ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಲು ವಿಳಂಬವಾಗಿದ್ದು, ಈ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದೆಂದು ಶಾಸಕ ಸಿ.ಪಿ. ಯೋಗೇಶ್ವರ್ ತಿಳಿಸಿದರು.
ಗರಕಹಳ್ಳಿ ಏತನೀರಾವರಿ ಯೋಜನೆಯಿಂದ ತುಂಬಿರುವ ಸುಳ್ಳೇರಿ ಕೆರೆಗೆ ಪೂಜೆ ಸಲ್ಲಿಸಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಗಿದೆ ಮುಂದಿನ ಮೂರು ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದೆಂದು ಅವರು ತಿಳಿಸಿದರು.
ಈ ಯೋಜನೆಯಿಂದಾಗಿ ಸಂಕಲಗೆರೆ, ಚಕ್ಕೆರೆ, ಅಕ್ಕೂರು, ಮಳೂರು ಪಟ್ಟಣ ಸೇರಿದಂತೆ ಸಾಕಷ್ಟು ಕೆರೆಗಳು ತುಂಬಲಿದ್ದು, ಬಹುದಿನಗಳಿಂದ ನೀರಾವರಿಯ ಕನಸು ಕಾಣುತ್ತಿರುವ ಈ ಭಾಗದ ಜನತೆಯ ಅದೃಷ್ಟದ ಬಾಗಿಲು ತೆರೆಯಲಿದೆ ಎಂದರು.
ಬಗೆಹರಿದ ತಕರಾರು: ವ್ಯಾಟ್ಗೆ ಸಂಬಂಧಿಸಿದಂತೆ ಕೆಲ ತಕರಾರು ಇದ್ದ ಕಾರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಸ್ವಲ್ಪ ಹಿನ್ನಡೆಯಾಗಿತ್ತು ಇದೀಗ ಎಲ್ಲಾ ಸಮಸ್ಯೆಗಳಬಗ್ಗೆ ತಾಂತ್ರಿಕ ಸಮಿತಿಯೊಂದಿಗೆ ಮಾತುಕತೆ ನಡೆಸಿ ಎಲ್ಲಾ ತಕರಾರುಗಳನ್ನು ಬಗೆಹರಿಸಿರುವುದಾಗಿ ತಿಳಿಸಿದರು.
ಕಾಮಗಾರಿ ಪ್ರಾರಂಭಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ತಾಂತ್ರಿಕ ಉನ್ನತ ಸಮಿತಿ ಆದೇಶ ನೀಡಿ ಕಾಮಗಾರಿಯ ಜವಾಬ್ದಾರಿಯನ್ನು ವಹಿಸಿದೆ. ಈಗಾಗಲೇ ಯೋಜನೆಗೆ ಬೇಕಾದ ಪೈಪು, ಮೋಟಾರ್ಗಳು ಬಂದು ಬಿದ್ದಿವೆ. ಗುತ್ತಿಗೆದಾರರು ಕಾಮಗಾರಿಯನ್ನು ಕೈಗೆತ್ತಿಗೊಂಡು, ತ್ವರಿತವಾಗಿ ಪೂರ್ಣಗೊಳಿಸಲಿದ್ದಾರೆ ಎಂದರು.
ಗರಕಹಳ್ಳಿ ಏತನೀರಾವರಿ ಯೋಜನೆಯಷ್ಟೇ ಪ್ರಮುಖವಾದ ಯೋಜನೆ ಇದಾಗಿದ್ದು, ಈಗಾಗಲೇ ಗರಕಹಳ್ಳಿ ಏತನೀರಾವರಿ ಯೋಜನೆಯಿಂದ ತಾಲೂಕಿನ 14-15 ಕೆರೆಗಳಿಗೆ ನೀರು ಹರಿಸಿ ಕೆರೆಗಳನ್ನು ತುಂಬಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ಅನಾವಶ್ಯಕವಾಗಿ ಹರಿದು ಹೋಗುತ್ತಿದ್ದ ನೀರನ್ನು ತಡೆದು ಜನತೆಯ ಸದ್ಬಳಕೆಗೆ ಸಮರ್ಪಿಸಿ ಅಂತರಜಲ ವೃದ್ಧಿಸಿದಂತೆ ಮಾಡಿದ ಆತ್ಮತೃಪ್ತಿ ಸಿಗುತ್ತದೆ ಎಂದರು.
ಬರ ಪ್ರಸ್ಥಾವನೆ ಕಳುಹಿಸಿದ್ದೇವೆ: ಚನ್ನಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟಿದೆ. ಜಿಲ್ಲೆಯ 3 ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಚನ್ನಪಟ್ಟಣ ಕೈಬಿಟ್ಟಿರುವುದು ಅವೈಜ್ಞಾನಿಕವಾಗಿದೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಕಂದಾಯ ಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಚನ್ನಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಿದ್ದೇನೆ. ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸರ್ಕಾರ ಘೋಷಿಸಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮರಿಗೌಡ, ಡೈರಿ ಕೃಷ್ಣ, ಹರೂರು ರಾಜಣ್ಣ, ಅಕ್ಕೂರು ಶೇಖರ್, ಶಾಸಕರ ಆಪ್ತ ಸಹಾಯಕ ತಿಮ್ಮೇಶ್ ಪ್ರಭು ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

