ಬೆಂಗಳೂರು ಗ್ರಾಮಾಂತರ

16ರಿಂದ ಹುಲಿ ಗಣತಿ ಕಾರ್ಯಕ್ರಮ ಆರಂಭ

Published On :

ಕ.ಪ್ರ.ವಾರ್ತೆ  ರಾಮನಗರ  ಡಿ.5
ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಹುಲಿ ಗಣತಿ ಕಾರ್ಯಕ್ರಮ ಡಿ.16 ರಿಂದ 23ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೂರ್ವ ತಯಾರಿ ನೀಡಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತಾಕತ್‌ಸಿಂಗ್ ರಣಾವತ್ ತಿಳಿಸಿದರು.
ರಾಮನಗರ ಜಿಲ್ಲೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿರುವ ಹುಲಿ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಇಲಾಖೆಯ ಗಾರ್ಡ್‌ಗಳು, ಅರಣ್ಯ ವೀಕ್ಷಕರು ಮತ್ತು ಸಿಬ್ಬಂದಿಗೆ ನಗರದ ಹೊರ ವಲಯದಲ್ಲಿರುವ ಸಿಟಿ ಗ್ರೀನ್ ರೆಸಾರ್ಟ್ ಬಳಿ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಹುಲಿಗಳ ಜತೆಗೆ ಅರಣ್ಯದಲ್ಲಿರುವ ಇತರೆ ಪ್ರಾಣಿ ಮತ್ತು ಪಕ್ಷಿ ಸಂಕುಲದ ಗಣತಿಯನ್ನೂ ನಡೆಸಬೇಕಿದೆ. ಯಾವ ರೀತಿ ಗಣತಿ ನಡೆಸಬೇಕು, ಗಣತಿ ವೇಳೆ ಪತ್ತೆಯಾದ ಮಾಹಿತಿಯನ್ನು ದಾಖಲಿಸುವ ವಿಧಾನ ಇತ್ಯಾದಿಗಳ ಬಗ್ಗೆ ಸಿಬ್ಬಂದಿಗೆ  ತರಬೇತಿ ನೀಡಲಾಗುತ್ತಿದೆ ಎಂದರು.
ಹುಲಿ ಗಣತಿ ಕಾರ್ಯವು ದೇಶಾದ್ಯಂತ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಜಿಲ್ಲೆಯಲ್ಲಿ ಹುಲಿಗಳು ವಾಸಿಸುತ್ತಿಲ್ಲ. ಆದರೆ ಚಿರತೆ, ಆನೆ, ಕರಡಿ, ಜಿಂಕೆ ಸೇರಿದಂತೆ ಇನ್ನಿತರೆ ಕಾಡು ಪ್ರಾಣಿಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಗಣತಿಯಲ್ಲಿ ಇದೇ ಮೊದಲ ಬಾರಿಗೆ ಜಿಪಿಎಸ್ ತಂತ್ರಜ್ಞಾನ ಬಳಸಲಾಗುತ್ತಿದೆ. ಮಾಹಿತಿ ಸಂಗ್ರಹಿಸುವ ವೇಳೆ ಆಯ ಕಟ್ಟಿನ ಸ್ಥಳಗಳನ್ನು ಜಿಪಿಎಸ್ ಮೂಲಕ ಗುರುತಿಸಲಾಗುತ್ತದೆ ಎಂದು ತಾಕತ್ ಸಿಂಗ್ ರಾಣಾವತ ವಿವರಿಸಿದರು.
ಪ್ರಾಣಿಗಳು ತಿಂದು ಬಿಟ್ಟ ಆಹಾರದ ಕುರುಹುಗಳು, ಪ್ರಾಣಿಗಳ ಲದ್ದಿ, ಹೆಜ್ಜೆ ಗುರುತುಗಳನ್ನು ಆಧರಿಸಿ ಆಯಾ ಪ್ರಾಣಿಗಳು ವಾಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಕಾಡು ಪ್ರಾಣಿಗಳು ತುಂಬಾ ಸುರಕ್ಷಿತ ಪ್ರದೇಶದಲ್ಲಿರುವಾಗ ಮಾತ್ರ ಮರಿ ಹಾಕುತ್ತವೆ. ಜಿಲ್ಲೆಯ ಕಾಡುಗಳಲ್ಲಿ ಕೆಲವು ಪ್ರಾಣಿಗಳು ಮರಿಹಾಕಿವೆ ಎಂದಾದರೆ ಈ ಕಾಡುಗಳು ಸುರಕ್ಷಿತವಲಯದಲ್ಲಿವೆ ಎಂದು ಅರ್ಥೈಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ರಣಹದ್ದುಗಳ ವಾಸಸ್ಥಾನ: ರಾಮನಗರದ ಹೊರ ವಲಯದಲ್ಲಿರುವ ರಾಮದೇವರ ಬೆಟ್ಟ ಸುತ್ತಮುತ್ತಲ ಪ್ರದೇಶವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದ್ದು, ಇಲ್ಲಿ ರಣಹದ್ದುಗಳು ವಾಸ ಮಾಡುತ್ತಿವೆ. ಗಣತಿ ಕಾರ್ಯದ ವೇಳೆ ರಣಹದ್ದುಗಳ ಸಂಖ್ಯೆಯನ್ನು ಗುರುತಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು. ತರಬೇತಿ ವೇಳೆ ಅರಣ್ಯ ಅಧಿಕಾರಿಗಳಾದ ಲಿಂಗಯ್ಯ, ಜಗನ್ನಾಥ್, ಲಿಂಗರಾಜ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.