18 ವರ್ಷ ಕಳೆದರೂ ಉದ್ಯಾನವನ ಕಂಡಿಲ್ಲ
ಟಿಸು.ನಾ.ನಂದಕುಮಾರ್
ಕ.ಪ್ರ.ವಾರ್ತೆ ಚನ್ನಪಟ್ಟಣ ಡಿ.6
ನಾಗರಿಕರಿಗೆ ಸುಸಜ್ಜಿತ ಬಡಾವಣೆ ನಿರ್ಮಿಸುವ ಉದ್ದೇಶದಿಂದ 18 ವರ್ಷಗಳ ಹಿಂದೆ ಬಡಾವಣೆ ನಿರ್ಮಿಸಿದ ಕರ್ನಾಟಕ ಗೃಹ ಮಂಡಲಿ, ತನ್ನ ಬಡಾವಣೆಯಲ್ಲಿ ಇದುವರೆಗೆ ಉದ್ಯಾನವನ ನಿರ್ಮಿಸದೇ ಇರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಪಟ್ಟಣದ ಸಾತನೂರು ರಸ್ತೆಯಲ್ಲಿ 1995 ರಲ್ಲಿ ಪಟ್ಟಣದ ಸಾತನೂರು ರಸ್ತೆಯಲ್ಲಿ 90 ಎಕರೆ ವಿಸ್ತೀರ್ಣದಲ್ಲಿ 1285 ನಿವೇಶನಗಳನ್ನು ನಿರ್ಮಿಸಿತು. ಇದರೊಂದಿಗೆ ಬಡಾವಣೆಯಲ್ಲಿ ಕೆಲ ಸಿಎ ನಿವೇಶನಗಳು, ಎರಡು ಕಡೆ ಉದ್ಯಾನವನ ನಿರ್ಮಾಣಕ್ಕೆ ಸ್ಥಳ ಮೀಸಲಿರಿಸಲಾಗಿತ್ತಾದರೂ ಇಂದಿಗೂ ಉದ್ಯಾನ ವನ ನಿರ್ಮಾಣ ಮಾಡಲು ಕೆಎಚ್ಬಿ ಅಧಿಕಾರಿಗಳು ಮೀನಮೇಷ ಏಣಿಸುತ್ತಿದ್ದಾರೆ.
ಹಣ ಇದ್ದರೂ ಕೆಲಸ ಮಾಡೋಲ್ಲ: ಕೆಎಚ್ಬಿ ಬಡಾವಣೆಯ ನಿರ್ಮಾಣ ಕಾರ್ಯದ ಅಂದಾಜು ವೆಚ್ಚದಲ್ಲಿ 60 ಲಕ್ಷ ಹಣವನ್ನು ಉದ್ಯಾನವನ ನಿರ್ಮಾಣಕ್ಕಾಗಿ ಮೀಸಲಿಡಲಾಗಿದೆ. ಆದರೆ, ಉದ್ಯಾನವನ ನಿರ್ಮಾಣಕ್ಕೆ ಮಾತ್ರ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ.
ಈ ಹಣದೊಂದಿಗೆ ಕೆಎಚ್ಬಿ ಬಡಾವಣೆಯಲ್ಲಿ ಮನೆ ಕಟ್ಟಲು ಅನುಮತಿ ಪಡೆಯುವ ನಿವಾಸಿಗಳಿಂದ ಅಭಿವೃದ್ಧಿ ಶುಲ್ಕ ಎಂದು ಪ್ರತಿವರ್ಷ 6,975 ಹಣ ಪಡೆಯುತ್ತಿದ್ದು, ಉದ್ಯಾನವನದ ಅಭಿವೃದ್ಧಿಗೆ ಬಳಕೆ ಮಾಡಬಹುದಾಗಿದೆ ಆದರೂ ಇಲ್ಲೊಂದು ಉದ್ಯಾನವನ ನಿರ್ಮಿಸಬೇಕೆಂಬ ಪರಿಜ್ಞಾನ ಗೃಹಮಂಡಲಿ ಅಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ.
ಉದ್ಯಾನವನ ನಿರ್ಮಿಸಲಿ: ಪಟ್ಟಣದಲ್ಲೆಲ್ಲೂ ಉದ್ಯಾನವನ ಇಲ್ಲವಾಗಿದ್ದು ಕೆಎಚ್ಬಿ ಬಡಾವಣೆಯಲ್ಲಿ ಉದ್ಯಾನವನ ನಿರ್ಮಾಣ ಮಾಡಿದ್ದೇ ಆದಲ್ಲಿ ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳುವ ಮಂದಿಗೆ, ಮಕ್ಕಳ ಆಟಕ್ಕೆ ಇದು ಅನುಕೂಲ ವಾಗಲಿದ್ದು ಬಡಾವಣೆಯಲ್ಲಿ ಉದ್ಯಾನವನ ನಿರ್ಮಾಣ ಮಾಡಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಆದರೆ, ದಪ್ಪ ಚರ್ಮದ ಅಧಿಕಾರಿಗಳು ಜಪ್ಪಯ್ಯ ಎನ್ನದೆ ತೆಪ್ಪಗೆ ಕುಳಿತ್ತಿದ್ದಾರೆ.
ಬೇಜವಾಬ್ದಾರಿ ಪ್ರದರ್ಶನ: ಕೆಎಚ್ಬಿ ಬಡಾವಣೆಯ ಎರಡು ಕಡೆ ಉದ್ಯಾನವನ ನಿರ್ಮಾಣ ಮಾಡಲು ನೀಲನಕ್ಷೆಯಲ್ಲಿ ಉದ್ದೇಶಿಸಲಾಗಿತ್ತಾದರೂ ಕಳೆದ 18ವರ್ಷಗಳಿಂದ ಒಂದೇ ಒಂದು ಕಡೆ ಉದ್ಯಾನವನ ನಿರ್ಮಾಣ ಮಾಡದೆ ಅಧಿಕಾರಿಗಳು ಬೇಜವಾಬ್ದಾರಿ ತನ ಪ್ರದರ್ಶಿಸುತ್ತಿದ್ದು, ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ತೆರಳುವ ಮಂದಿ ಉದ್ಯಾನವನ ಇಲ್ಲದೆ ಬಡಾವಣೆಯ ಹಾದಿ ಬೀದಿಯಲ್ಲಿ ತಿರುಗಾಡುವಂತಾಗಿದೆ.
ಅಪಾಯದ ಕರೆಗಂಟೆಯಾದ ಖಾಲಿ ಜಾಗ: ಉದ್ಯಾನ ವನ ನಿರ್ಮಾಣಕ್ಕೆ ಮೀಸಲಿರುವ ಜಾಗವನ್ನು ಹಾಗೇ ಬಿಟ್ಟಿರುವ ಪರಿಣಾಮ ಗಿಡಗಂಟೆಬೆಳೆದು ಹಾವು-ಚೇಳು ಮೊದಲಾದ ವಿಷ ಜಂತುಗಳು ವಾಸಿಸಲು ಅನುವು ಮಾಡಿಕೊಟ್ಟಿದೆ. ಇದರಿಂದಾಗಿ ಸುತ್ತ ಮುತ್ತಲ ನಿವಾಸಿಗಳು ಆತಂಕದಲ್ಲಿ ದಿನದೂಡುವಾಂತಾಗಿದ್ದು ಉದ್ಯಾನವನ ನಿರ್ಮಾಣ ಮಾಡಿದ್ದೇ ಆದಲ್ಲಿ ಈ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಜಾರಿ ಕೊಳ್ಳುತ್ತಿರುವ ಅಧಿಕಾರಿಗಳು: ಉದ್ಯಾನವನ ನಿರ್ಮಾಣ ಮಾಡುವಂತೆ ಸ್ಥಳೀಯರು ಅಧಿಕಾರಿಗಳನ್ನು ಆಗ್ರಹಿಸಿದಾಗ ಇಂದು ನಾಳೆ ಎಂದು ಇಲ್ಲ ಸಲ್ಲದ ಸಬೂಬು ಹೇಳಿ ಜಾರಿ ಕೊಳ್ಳುತ್ತಿರುವ ಕೆಎಚ್ಬಿ ಅಧಿಕಾರಿಗಳು ಉದ್ಯಾನವನ ನಿರ್ಮಾಣಕ್ಕೆ ಮಾತ್ರ ಮುಂದಾಗುತ್ತಿಲ್ಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

