ಬೆಂಗಳೂರು ಗ್ರಾಮಾಂತರ

ಮಠಾಧೀಶರೇ ಜಾತಿವಾದ ಬಿಡಿ: ಸಮಾಜಕ್ಕೆ ಒಳಿತು ಮಾಡಿ

Published On :

ಕ.ಪ್ರ.ವಾರ್ತೆ ,  ದೊಡ್ಡಬಳ್ಳಾಪುರ ,  ಡಿ.9
ಇಲ್ಲಿನ ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ದೊಡ್ಡಬಳ್ಳಾಪುರ ತಾಲೂಕು ಘಟಕದ ನೇತೃತ್ವದಲ್ಲಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 57ನೇ ಪುಣ್ಯಸ್ಮರಣೆ ಅಂಗವಾಗಿ ಮುತ್ತೂರು ಮತ್ತು ಸಿದ್ದೇನಾಯಕನಹಳ್ಳಿ ಗ್ರಾಮ ಶಾಖೆಗಳ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಮಧ್ಯಾಹ್ನ ನಡೆಯಿತು.
ಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಗ್ರಾಮ ಶಾಖೆಗಳನ್ನು ಉದ್ಘಾಟಿಸಿದರು. ಅವರು ಮಾತನಾಡಿ, ಅಂಬೇಡ್ಕರ್ ಚಿಂತನೆಗಳ ಅನುಷ್ಠಾನದ ಕುರಿತು ಈ ದೇಶದಲ್ಲಿ ಇಂದಿನವರೆಗೂ ಗಂಭೀರ ಪ್ರಯತ್ನಗಳು ನಡೆದಿಲ್ಲ. ಅಂಬೇಡ್ಕರ್ ಅವರ ಆಲೋಚನೆಗಳನ್ನು ಹೇಳುತ್ತಲೇ ಅಧಿಕಾರವನ್ನು ಅನುಭವಿಸುವ ಜನ ಅವರ ಆಶಯಗಳನ್ನು ಮಾತ್ರ ಕಾರ್ಯರೂಪಕ್ಕೆ ತಂದಿಲ್ಲ. ಭಾಷಣಕ್ಕಷ್ಟೇ ಚಿಂತನೆಗಳು ಸೀಮಿತವಾಗಿರುವುದೇ ದಲಿತರ ಸ್ಥಿತಿ ಸುಧಾರಿಸದಿರಲು ಕಾರಣ ಎಂದರು.
ಮಠಾಧೀಶರೇ ಜಾತಿವಾದಿಗಳಾಗಬೇಡಿ: ಸಮಾಜದ ಎಲ್ಲ ವರ್ಗಗಳ ಮಾರ್ಗದರ್ಶಿಗಳಾಗಬೇಕಾದ ಮಠಾಧೀಶರು ಇಂದು ಕೇವಲ ಜಾತಿ ಪ್ರಜ್‌ಞೆಯನ್ನು ಮೆರೆಯುವ, ಕಂದಾಚಾರಗಳ ಹೆಸರಿನಲ್ಲಿ ಅಸಮಾನತೆ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಶೋಷಿತ ವರ್ಗವನ್ನು ದೂರವೇ ಇಟ್ಟಿರುವ ಇಂತಹ ಸ್ವಾಮೀಜಿಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ಸ್ವಾಮೀಜಿಗಳು ರಾಜಕಾರಣ ಮಾಡುವುದು ದುರಂತ. ಅಂಬೇಡ್ಕರ್‌ರ ವಿಚಾರಧಾರೆಗಳು ಕಾರ್ಯರೂಪಕ್ಕೆ ಬಾರದ ಹೊರತು ಸಮೃದ್ಧ ಸ್ವಾಭಿಮಾನಿ ಬಹುಜನ ಭಾರತದ ಕನಸು ನನಸಾಗುವುದಿಲ್ಲ ಎಂದರು.
ಸಭೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿಆಂಜಿನಪ್ಪ ಮಾತನಾಡಿದರು.
ಬೆಂಗಳೂರು ವಿಭಾಗೀಯ ಅಧ್ಯಕ್ಷ ಇಂಡ್ಲವಾಡಿ ಬಸವರಾಜು, ಉಪಾಧ್ಯಕ್ಷ ಚಿಕ್ಕನರಸಯ್ಯ, ತಾಲೂಕು ಅಧ್ಯಕ್ಷ ಸುತ್ತಳ್ಳಿ ಚಂದ್ರು, ಜಿಲ್ಲಾ ಕಾರ್ಮಿಕ ಘಟಕದ ಮುನಿರಾಜು, ಪ್ರಚಾರ ಸಮಿತಿಯ ಚನ್ನಮರಿಯಪ್ಪ, ಜಿಲ್ಲಾಧ್ಯಕ್ಷ ಮುನಿಕೃಷ್ಣ, ಮಹಿಳಾ ಘಟಕದ ಮಧು ಪ್ರಕಾಶ್, ಶ್ಯಾಮಲ, ನಗರಸಭಾ ಸದಸ್ಯ ಎಂ.ಮಲ್ಲೇಶ್, ಕರವೇ ಜಿಲ್ಲಾ ಮುಖಂಡ ಟಿ.ಜಿ.ಮಂಜುನಾಥ್, ಓಬಳೇಶ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.