ನಾಚಿಕೆಯಾಗಬೇಕು ಈ ವ್ಯವಸ್ಥೆಗೆ...
ದೊಡ್ಡಬಳ್ಳಾಪುರ: ನಾಚಿಕೆಯಾಗಬೇಕು ಈ ವ್ಯವಸ್ಥೆಗೆ... ಗ್ರಾಮ ಗ್ರಾಮಗಳ ಪೆಟ್ಟಿಗೆ ಅಂಗಡಿ, ಮಿಠಾಯಿ ಅಂಗಡಿಗಳಲ್ಲೂ ಅವ್ಯಾಹತವಾಗಿ ಮದ್ಯ ಮಾರಾಟ ನಡೆಯುತ್ತಿದೆ. ಶಾಲೆಗಳು, ದೇವಾಲಯಗಳ ಸಮೀಪದಲ್ಲೇ ಕುಡುಕರ ಸ್ವರ್ಗ ನಿರ್ಮಾಣವಾಗುತ್ತಿದ್ದರೂ ಅಬಕಾರಿ ಇಲಾಖೆ ತಲೆಕೆಡಿಸಿಕೊಂಡಿಲ್ಲ. ಕುಡಿತದ ದಾಸ್ಯದಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ ಸ್ವಾಮೀ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ. ಗ್ರಾಮೀಣ ಜನರ ಬದುಕು ಉಳಿಸಿ...
-ಮಂಗಳವಾರ ಇಲ್ಲಿನ ಬಸವ ಭವನದಲ್ಲಿ ಬೆಂ.ಗ್ರಾ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಅವರ ಅಧ್ಯಕ್ಷತೆಯಲ್ಲಿ ವೃತ್ತ ಪೊಲೀಸರು ಕರೆದಿದ್ದ ಜನಸಂಪರ್ಕ ಸಭೆಯಲ್ಲಿ ನೂರಾರು ಜನ ಒಕ್ಕೊರಲಿನಿಂದ ಪೊಲೀಸರನ್ನು ಆಗ್ರಹಿಸಿದ್ದು ಹೀಗೆ.
ಸಭೆ ಆರಂಭವಾದಾಗಿನಿಂದ ಹಲವು ವಿಚಾರಗಳತ್ತ ಗಮನ ಸೆಳೆದ ನಾಗರೀಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನಗರಸಭೆ ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ತಾಲೂಕಿನಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದರು. ಜನ ಬಹುಮುಖ್ಯವಾಗಿ ಎತ್ತಿದ ವಿಚಾರ ಮದ್ಯದಂಗಡಿಗಳದ್ದು. ಇಡೀ ತಾಲೂಕು ಮದ್ಯಪ್ರಿಯರ ಸ್ವರ್ಗವಾಗಿದೆ. ಇಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಈ ದಂಧೆಯನ್ನು ತಡೆಯಲು ಸಂಪೂರ್ಣ ವಿಫಲರಾಗಿದ್ದಾರೆ. ನಗರದಲ್ಲಿ ಬೆಳಗ್ಗೆ 5 ಗಂಟೆಗೇ ಮದ್ಯದಂಗಡಿಗಳು ತೆರೆದಿರುತ್ತವೆ. ರಾತ್ರಿ 11ಗಂಟೆ ಕಳೆದ ಮೇಲೆ ವಹಿವಾಟು ನಡೆಸುತ್ತವೆ. ಜನನಿಬಿಡ ಪ್ರದೇಶಗಳಲ್ಲೇ ಅವು ಕಾರ್ಯನಿರ್ವಹಿಸಲು ಪರವಾನಗಿ ಕೊಡಲಾಗಿದೆ ಎಂದು ಆರೋಪಿಸಿದರು.
ಮಟ್ಕಾ-ಜೂಜು ನಿಷೇಧಿಸಿ: ದೊಡ್ಡಬಳ್ಳಾಪುರ ನಗರ, ಹೊರವಲಯ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಟ್ಕಾ ಮತ್ತು ಜೂಜು ದಂಧೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಪೊಲೀಸರ ಕೃಪಾಕಟಾಕ್ಷವೂ ಇದೆ ಎಂಬ ಗಂಭೀರ ಆರೋಪವಿದೆ. ಇಸ್ಪೀಟ್ ಕ್ಲಬ್ಗಳು, ಮೀಟರ್ ಬಡ್ಡಿ ದಂಧೆ ಎಲ್ಲವೂ ಕಣ್ಣಮುಂದೆ ನಡೆಯುತ್ತಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಾಗಿರುವುದು ಏಕೆ ಎಂದು ಅನೇಕರು ಪ್ರಶ್ನಿಸಿದರು.
ಟ್ರಾಫಿಕ್ ಕಿರಿಕಿರಿ: ಸಭೆಯಲ್ಲಿ ಪ್ರತಿಧ್ವನಿಸಿದ ಮತ್ತೊಂದು ಪ್ರಮುಖಾಂಶ ಎಂದರೆ ಟ್ರಾಫಿಕ್ ಕಿರಿಕಿರಿ. ಬೆಳೆಯುತ್ತಿರುವ ನಗರಕ್ಕೆ ಪೂರವಾಗಿ ಸವಲತ್ತುಗಳು ಬೆಳೆದಿಲ್ಲ. ರಸ್ತೆಗಳು ಅಗಲೀಕರಣವಾಗಿಲ್ಲ. ಕಿಷ್ಕಿಂದ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಬಿಗಡಾಯಿಸಿದೆ. ಡಿಕ್ರಾಸ್, ರೇಲ್ವೇ ಸ್ಟೇಷನ್ ವೃತ್ತ, ಪ್ರವಾಸಿ ಮಂದಿರ ವೃತ್ತ ಸೇರಿದಂತೆ ನಗರದ ಹಲವು ರಸ್ತೆಗಳಲ್ಲಿ ಕೂಡ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು. ಸಿಗ್ನಲ್ ಲೈಟ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಕೊಲೆ ಆರೋಪಿಗಳೆಲ್ಲಿ: ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಆದ ಹಲವು ಕೊಲೆ ಪ್ರಕರಣಗಳ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಕೆಲ ಪ್ರಕರಣಗಳ ಬಗ್ಗೆ ಸಾರ್ವಜನಿಕ ಮಾಹಿತಿಯೇ ಇಲ್ಲ. ಕಾನೂನು ಉಲ್ಲಂಘನೆ ಅವ್ಯಾಹತ ನಡೆಯುತ್ತಿದ್ದರೂ ಪೊಲೀಸರು ಸುಮ್ಮನಿದ್ದಾರೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ಕಾಲೇಜುಗಳ ಬಳಿ ಚುಡಾಯಿಸುವಿಕೆ ಪ್ರಕರಣಗಳು ಹೆಚ್ಚಿವೆ. ಸಲ್ಯೂಷನ್ ತೆಗೆದುಕೊಳ್ಳುವ ವಿದ್ಯಾರ್ಥಿಗಳ ಹತೋಟಿ, ಶಾಲಾ-ಕಾಲೇಜು ಸುತ್ತಮುತ್ತ ಗುಟ್ಕಾ-ತಂಬಾಕು ಮಾರಾಟ ನಿಷೇಧ ಕಡ್ಡಾಯವಾಗಿ ಜಾರಿಗೆ ಬರಬೇಕು. ಇಲ್ಲಿನ ಠಾಣೆಗೆ ಮಹಿಳಾ ಪೊಲೀಸ್ ಎಸೈ ಮತ್ತು ಸಿಬ್ಬಂದಿ ನಿಯೋಜನೆ ಆಗಬೇಕು ಎಂಬ ಆಗ್ರಹ ಕೇಳಿಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

