ಜಿಲ್ಲೆಯಲ್ಲಿ ಮರಳು ದಂಧೆ ಅವ್ಯಾಹತ
-ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಡಿ. 12
ತಲಕಾಡು ಪಂಚಲಿಂಗ ದರ್ಶನದ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದಲ್ಲಿ ಕಳದೆರಡು ವಾರದಿಂದ ಮರಳುಗಾರಿಕೆ ಸ್ಥಗಿತಗೊಂಡಿದೆ. ಈ ಪರಿಣಾಮ ರಾಮನಗರ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿದ್ದು, ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.
ತಲಕಾಡು ಪಂಚಲಿಂಗ ದರ್ಶನದ ಪ್ರಯುಕ್ತ ಟಿ.ನರಸೀಪುರ, ಮಳವಳ್ಳಿ, ಕೊಳ್ಳೇಗಾಲ ತಾಲೂಕುಗಳ ವ್ಯಾಪ್ತಿಯ ಕಾವೇರಿ ನದಿ ಪಾತ್ರದಲ್ಲಿ ಮರಳುಗಾರಿಕೆ, ಸಾಗಣೆಗೆ ನಿಯಂತ್ರಣ ಹೇರಲಾಗಿದೆ. ಇದರಿಂದ ಬೆಂಗಳೂರು ಸಹಿತ ನಾನಾ ಕಡೆ ಮರಳು ಬೇಡಿಕೆ ಜತೆಗೆ ಧಾರಣೆಯೂ ಹೆಚ್ಚಿದೆ.
ವರದಾನ: ಇದು ಸಹಜವಾಗಿಯೇ ರಾಮನಗರ ಜಿಲ್ಲೆಯ ಮರಳು ಮಾಫಿಯಾಕ್ಕೆ ವರದಾನವಾಗಿದೆ. ಇಲ್ಲಿನ ಕಣ್ವ ಮತ್ತು ಅರ್ಕಾವತಿ ನದಿಯ ಒಡಲು ಬಗೆಯುತ್ತಿರುವ ದಂಧೆಕೋರರು ರಾತ್ರೋರಾತ್ರಿ ಭಾರಿ ಪ್ರಮಾಣದ ಮರಳು ಸಾಗಣೆ ಮಾಡುತ್ತಿದ್ದಾರಾದರೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸಿದ್ದಾರೆ.
ಡಿಸಿ ಮಾತಿಗಿಲ್ಲ ಕಿಮ್ಮತ್ತು: ನೂತನ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಜಿಲ್ಲೆಯಲ್ಲಿ ಮರಳುಗಾರಿಕೆಗೆ ನಿಯಂತ್ರಣ ಹೇರುವುದೇ ತಮ್ಮ ಮೊದಲ ಅಜೆಂಡಾ ಎಂದಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಸಿಕ್ಕಿಬಿದ್ದ ದಂಧೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.
ಪ್ರತಿಯೊಬ್ಬ ತಹಸೀಲ್ದಾರ್ ವಾರದಲ್ಲಿ ಕನಿಷ್ಠ 2 ದಿನ ರಾತ್ರಿ ಗಸ್ತು ನಡೆಸಬೇಕೆನ್ನುವ ಜಿಲ್ಲಾಧಿಕಾರಿ ಆದೇಶ ಜಾರಿಗೆ ಬಂದಿಲ್ಲ. ಅಕ್ರಮ ತಡೆಗೆ ನಿಯೋಜಿಲ್ಪಟ್ಟ ಅಧೀನ ಅಧಿಕಾರಿಗಳು ದಂಧೆಕೋರರ ಜತೆ ಶಾಮೀಲಾಗಿದ್ದು, ಮರಳು ಸಾಗಣೆಗೆ ರಹದಾರಿ ಮಾಡಿಕೊಟ್ಟು ಕಿಸೆ ತುಂಬಿಸಿಕೊಳ್ಳುತ್ತಿದ್ದಾರೆ.
ನಂಬರ್ ಪ್ಲೇಟ್ ಇಲ್ಲ: ರಾತ್ರಿ ವೇಳೆ ಮರಳು ಸಾಗಣೆ ಮಾಡುತ್ತಿರುವ ಟ್ರ್ಯಾಕ್ಟರ್ ಮತ್ತು ಲಾರಿಗಳಲ್ಲಿ ನಂಬರ್ ಪ್ಲೇಟ್ ಕಾಣಿಸದಂತೆ ಮಾಡಲಾಗಿದೆ. ದಾಳಿಗೆ ಇಳಿಯುವ ಅಧಿಕಾರಿಗಳು ಮೊಬೈಲ್ ಮೂಲಕ ವೀಡಿಯೋ ಮಾಡಿಕೊಂಡು ಹೋಗುತ್ತಾರೆ. ಕೈ ಬೆಚ್ಚಗೆ ಮಾಡಿದ ತಕ್ಷಣ ವೀಡಿಯೋ ಡಿಲಿಟ್ ಆಗಿಬಿಡುತ್ತಿದೆ.
ಕಾಲ ಕಾಲಕ್ಕೆ ಲಂಚ ಸಂದಾಯ ಮಾಡುವ ದಂಧೆಕೋರರ ವಾಹನಗಳ ಸಾಗಣೆ ಸುಗಮ. ಈ ಕಾರಣದಿಂದಲೇ ದಂಧೆಕೋರರು ಲೆಕ್ಕ ಚುಕ್ತಾ ಮಾಡಿ, ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಉನ್ನತ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೋ ಅಥವಾ ಇಲ್ಲವೋ ಆದರೆ, ಅವರ ಹೆಸರಿನಲ್ಲೂ ಲಂಚ ವಸೂಲಾತಿ ನಡೆಯುತ್ತಿದೆ.
ಮರಳುಗಾರಿಕೆ ಸ್ಥಳಗಳು: ರಾಮನಗರ ಜಿಲ್ಲಾದ್ಯಂತ ನದಿ ಪಾತ್ರ, ಕಂದಾಯ ಜಮೀನುಗಳಲ್ಲಿ ಮರಳುಗಾರಿಕೆ, ಮರಳು ಶೇಖರಣೆ ಮತ್ತು ಸಾಗಣೆಯನ್ನು ನಿಷೇಧಿಸಲಾಗಿದೆ. ಇಷ್ಟಾಗಿಯೂ ಕಣ್ವ ಮತ್ತು ಅರ್ಕಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ, ಫಿಲ್ಟರ್ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದೆ.
ರಾಮನಗರ ತಾಲೂಕಿನ ಸುಗ್ಗನಹಳ್ಳಿ, ಕೂಟಗಲ್, ಮೆಳೆಹಳ್ಳಿ ಆಸುಪಾಸಿನಲ್ಲಿ ಮರಳುಗಾರಿಕೆ, ಹುಲಿಕೆರೆ, ಗುನ್ನೂರು ಸಹಿತ ಹಲವೆಡೆ ಫಿಲ್ಟರ್ ಮರಳುಗಾರಿಕೆಗೆ ಕೊನೆಯಿಲ್ಲ. ಚನ್ನಪಟ್ಟಣ ತಾಲೂಕಿನಲ್ಲಿ ಕಣ್ವ ನದಿ ಪಾತ್ರದುದ್ದಕ್ಕೂ ಮರಳು ಲಾರಿ, ಟ್ರ್ಯಾಕ್ಟರ್, ಜೆಸಿಬಿಗಳದ್ದೇ ಸದ್ದು.
ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಬಳಿ ಶಿಂಷಾ ನದಿ ಪಾತ್ರ, ಕೊಂಡಾಪುರ, ಅಂಬಾಡಹಳ್ಳಿ, ಮಳೂರು ಪಟ್ಟಣ, ಬಾಣಗಹಳ್ಳಿ, ಕೋಡಂಬಳ್ಳಿ, ಹೊಟ್ಟಿಗನಹೊಸಳ್ಳಿ ಸಹಿತ ಹಲವೆಡೆ ಕಣ್ವ ನದಿ ಮತ್ತು ಕಂದಾಯ ಜಮೀನುಗಳಲ್ಲಿ ಮರಳು ತೆಗೆದು ಸಾಗಿಸಲಾಗುತ್ತಿದೆ.
ದಂಧೆಕೋರರಿಗೆ ಮಾಹಿತಿ
ತಹಸೀಲ್ದಾರ್ ಸೇರಿದಂತೆ ಮರಳುಗಾರಿಕೆ ತಡೆಗೆ ನಿಯೋಜಿಸಲ್ಪಟ್ಟ ಪ್ರಮುಖ ಅಧಿಕಾರಿಗ ಚಲನವಲನ, ಅವರ ಪಯಣ, ವಾಸ್ತವ್ಯ ಸಹಿತ ಪ್ರತಿಯೊಂದು ಮಾಹಿತಿ ದಂಧೆಕೋರರಿಗೆ ರವಾನೆ ಆಗುತ್ತಿರುವುದು ಜಿಲ್ಲೆಯಲ್ಲಿ ಸರ್ಕಾರಿ ವ್ಯವಸ್ಥೆ ಎಷ್ಟು ಪ್ರಾಮಾಣಿಕವಾಗಿದೆ ಎನ್ನುವುದಕ್ಕೆ ಕೈಗನ್ನಡಿಯಾಗಿದೆ. ಅಪ್ಪಿತಪ್ಪಿ ಅಲ್ಪಸ್ವಲ್ಪ ಮಟ್ಟಿಗೆ ಪ್ರಾಮಾಣಿಕರಾಗಿರುವ ಅಧಿಕಾರಿಯೇನಾದರೂ ದಾಳಿಗೆ ಬರುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕರೆ ದಂಧೆಕೋರರು ಆ ಜಾಡಿನಲ್ಲಿ ಯಾವುದಾದರೂ ಟ್ರ್ಯಾಕ್ಟರ್ ಇಲ್ಲವೇ ವಾಹನವನ್ನು ಅಡ್ಡ ನಿಲ್ಲಿಸಿ, ಆ ಅಧಿಕಾರಿ ಮುಂದೆ ಸಾಗದಂತೆ ಮಾಡುತ್ತಾರೆ. ಮರಳು ಲಾರಿಗಳ ದಾರಿ ಸುಗಮ ಮಾಡಿಕೊಳ್ಳಲು ದಂಧೆಕೋರರು ಎಸ್ಕಾರ್ಟ್ ವ್ಯವಸ್ಥೆ ಮಾಡಿರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

