ಮೀನುಗಾರಿಕೆ ಇಲಾಖೆ ಎಲ್ಲಿದೆ?
-ಸು.ನಾ.ನಂದಕುಮಾರ್
ಚನ್ನಪಟ್ಟಣ: ಈ ಇಲಾಖೆ ಎಲ್ಲಿದೆ ಎಂಬುದು ತಾಲೂಕಿನ ಬಹುಪಾಲು ಜನತೆಗೆ ಗೊತ್ತಿಲ್ಲ, ಶ್ರೀಸಾಮಾನ್ಯನ ಮಧ್ಯೆ ಕೆಲಸ ಮಾಡಲು ಇಲಾಖೆ ಸಿಬ್ಬಂದಿಗೆ ಮನಸ್ಸಿಲ್ಲ.
ಇದು ತಾಲೂಕು ಮೀನುಗಾರಿಕೆ ಇಲಾಖೆ ಕಾರ್ಯವೈಖರಿ. ಸರ್ಕಾರಿ ಕೆಲಸಗಳನ್ನು ಪಾರದರ್ಶಕವಾಗಿಸಲು ಸರ್ಕಾರ ಮತ್ತು ಆಡಳಿತ ಸುಧಾರಣಾ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆಯಾದರೂ ಇದ್ಯಾವುವು ಮೀನುಗಾರಿಕೆ ಇಲಾಖೆಯಲ್ಲಿ ಫಲ ಕಾಣುತ್ತಿಲ್ಲ. ಕಳೆದೊಂದು ದಶಕದಿಂದ ತಾಲೂಕನ್ನು ಕಾಡಿರುವ ಬರದಿಂದಾಗಿ ಕೆರೆಕಟ್ಟೆಗಳು ಬರಿದಾಗಿರುವುದನ್ನೇ ಇಲಾಖೆ ಸಿಬ್ಬಂದಿ ಕೆಲಸಗಳ್ಳತನಕ್ಕೆ ಬಂಡವಾಳ ಮಾಡಿಕೊಂಡಿದ್ದು ತಾಲೂಕಿನಲ್ಲಿ ಮತ್ಸೋದ್ಯಮ ಅಭಿವೃದ್ಧಿಗೆ ಹೊಡೆತ ನೀಡಿದ್ದಾರೆ.
ಮಳೆ ಇಲ್ಲದೆ ತಾಲೂಕಿನ ಯಾವುದೇ ಕೆರಗಳು ತುಂಬದ ಹಿನ್ನೆಲೆಯಲ್ಲಿ ಮತ್ಸೋದ್ಯಮಕ್ಕೆ ಕುಂದಾಗಿದೆ ಎಂಬ ಹೇಳಿಕೆಯನ್ನು ತಾ.ಪಂ ಸಭೆ, ಕೆಡಿಪಿ ಸಭೆಯಲ್ಲಿ ನೀಡುತ್ತಾ ಜಾರಿಕೊಳ್ಳುತ್ತಾ ಬಂದಿರುವ ಮೀನುಗಾರಿಕಾ ಇಲಾಖೆ ಅಧಿಕಾರಿಗಳು, ಗರಕಹಳ್ಳಿ ಏತನೀರಾವರಿ ಯೋಜನೆಯ ಮೂಲಕ ತಾಲೂಕಿನ 14 ಕೆರೆಗಳು ತುಂಬಿದ್ದು ಈ ಕೆರೆಗಳಲ್ಲಿ ಮತ್ಸಪಾಲನೆಯನ್ನು ಅಭಿವೃದ್ಧಿ ಪಡಿಸಬಹುದಾಗಿದೆಯಾದರೂ ಈ ಕೆಲಸ ಮಾಡುವ ಮನಸ್ಸು ಮಾಡುತ್ತಿಲ್ಲ.
ಕೆರೆತುಂಬಿದರೂ ಗಮನ ಇಲ್ಲ: ತಾಲೂಕಿನ 28 ಕೆರೆಗಳು ಮೀನುಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳ ಪಡಲಿದ್ದು ಈ ಪೈಕಿ ಸುಳ್ಳೇರಿ, ಹಾರೋಕೊಪ್ಪ, ಸೋಗಾಲ, ನೇರಲೂರು ಕೆರೆಗಳು ಗರಕಹಳ್ಳಿ ಏತ ನೀರಾವರಿ ಯೋಜನೆಯಿಂದ
ತುಂಬಿವೆ. ಈಕೆರೆಗಳಲ್ಲಿ ಮತ್ಸಪಾಲನೆಯ ಕಾರ್ಯಕ್ಕೆ ಮುಂದಾಗಿದ್ದೇ ಆದಲ್ಲಿ ಸರ್ಕಾರಕ್ಕೆ ಲಕ್ಷಾಂತರ ರು. ಲಾಭ ದೊರಕುವ ಜತೆಗೆ ಈ ಭಾಗದ ಹತ್ತಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿದಂತಾಗುತ್ತದೆ.
ಆದರೆ ಮೀನುಗಾರಿಕೆ ಇಲಾಖೆ ಮಾತ್ರ ಇದುವರಗೆ ಈ ಕೆರೆಗಳ ಮೀನುಸಾಕಾಣಿಕೆಗೆ ಟೆಂಡರ್ ಕರೆಯುವ ಕಾರ್ಯವನ್ನು ಅಧಿಕೃತವಾಗಿ ಮಾಡದಿದ್ದು, ಈ ಕೆರೆಗಳು ತುಂಬಿರುವ ಸಂಗತಿ ಇಲಾಖೆಗೆ ಗೊತ್ತಿದೆಯೋ ಇಲ್ಲವೋ ಎಂಬ ಅನುಮಾನ ಜನತೆಯನ್ನು ಕಾಡುತ್ತಿದೆ. ಈ ಕೆರೆಗಳು ವರ್ಷ ಪೂರಾ ತುಂಬಿರುವುದರಿಂದ ಮೀನುಗಾರಿಕೆ ಮಾಡ ಬಯಸುವವರು ಇಲ್ಲಿ ಬಂಡವಾಳ ಹೂಡಲು ಹೆಚ್ಚಿನ ಉತ್ಸಾಹ ತೋರುತ್ತಾರೆ.
ತೆರೆಮರೆಯ ಹರಾಜು: ಸುಳ್ಳೇರಿ ಕೆರೆಯಲ್ಲಿ ಮೀನು ಸಾಕಣಿಕೆಯ ಗುತ್ತಿಗೆ ಅವಧಿ 2013 ಮೇ ತಿಂಗಳ ವೇಳೆಗೆ ಮುಗಿದಿದೆಯಾದರೂ ಈಕೆರೆಯ ಹರಾಜು ಪ್ರಕ್ರಿಯೆ ಬಗ್ಗೆ ಇದುವರೆಗೂ ಮೀನುಗಾರಿಕೆ ಇಲಾಖೆ ಯಾವ ಕ್ರಮ ಕೈಗೊಂಡಿದೆ ಎಂಬುದು ಯಾರಿಗೂ ತಿಳಿದಿಲ್ಲ. ಹರಾಜು ಪ್ರಕ್ರಿಯೆಯ ಬಗ್ಗೆ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಗೆ ಬಿತ್ತರಿಸದೆ ಒಳಗೊಳಗೇ ಹರಾಜು ನಡೆಸುವ ಪರಿಪಾಠವನ್ನು ಇಲಾಖೆ ಅಳವಡಿಸಿ ಕೊಂಡಿದ್ದು ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹಣ ನಷ್ಟವಾಗುತ್ತಿದೆ.
'ಕೃಷ್ಣನ ಲೆಕ್ಕ'ದಲ್ಲಿ ಇಲಾಖಾ ಯೋಜನೆಗಳು
ಯಾರಿಗೂ ಕಾಣದಂತಾಗಿರುವ ಮೀನುಗಾರಿಕಾ ಇಲಾಖೆ ಜನತೆಗೆ ಅಗತ್ಯವಿರುವ ಸೌಲಭ್ಯಗಳನ್ನು ಮಂಜೂರು ಮಾಡುವಲ್ಲಿ ಸಹ ಸಾಕಷ್ಟು ಲೋಪವೆಸಗುತ್ತಿದೆ. ಪ್ರತಿವರ್ಷ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳಬೇಕಾದ ಯೋಜನೆಗಳನ್ನು ಸಕಾಲದಲ್ಲಿ ಮಂಜೂರು ಮಾಡಲು ತಾರತಮ್ಯ ಎಸಗುತ್ತಿದೆ. ಇಲಾಖಾ ಯೋಜನೆಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡದೆ ಕೃಷ್ಣನ ಲೆಕ್ಕದಲ್ಲಿ ಹಂಚಿಕೆ ಮಾಡಿದಂತೆ ತೋರಿಸಿ ಸಾಕಷ್ಟು ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಳನಾಡು ಮೀನುಗಾರಿಕೆ ಅಭಿವೃದ್ಧಿ, ಮೀನುಮಾರುಕಟ್ಟೆ ನಿರ್ಮಾಣ, ಮೀನುಮರಿಗಳ ಅಭಿವೃದ್ಧಿ ಮತ್ತು ಬಿತ್ತನೆ, ಮೀನು ಮರಿ ಖರೀದಿಗೆ ಸಹಾಯಧನ, ಮೀನುಗಾರಿಕಾ ಸಲಕರಣೆಗಳಿಗೆ ಸಹಾಯಧನ ಸೇರಿದಂತೆ ಇಲಾಖೆಯಿಂದ ಲಕ್ಷಾಂತರ ರು. ಸೌಲಭ್ಯ ತಾಲೂಕಿನ ಜನತೆಗೆ ಸಲ್ಲಬೇಕಿದೆಯಾದರೂ ಇಲಾಖೆ ಸೂಕ್ತ ಮಾಹಿತಿ ನೀಡದೆ ಕೇವಲ ದಾಖಲೆಗಳಲ್ಲಿ ವಿತರಣೆ ಮಾಡುವ ಕಾರ್ಯ ಮಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

