ಪೋಷಕರು ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸುತ್ತಿದ್ದಾರೆ: ಶಾಸಕ
ಚನ್ನಪಟ್ಟಣ: ಅಂಕ ಎಂಬ ಮಾಯಾಮೃಗಕ್ಕೆ ಮರುಳಾಗಿರುವ ಪೋಷಕರು ತಮ್ಮ ಮಕ್ಕಳ ಅಭಿರುಚಿಗೆ ಬೆಲೆ ನೀಡದೆ ಅವರನ್ನು ಪುಸ್ತಕದ ಹುಳುಗಳನ್ನಾಗಿಸುತ್ತಿದ್ದು ಇದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಅಭಿಪ್ರಾಯಪಟ್ಟರು.
ಇಲ್ಲಿನ ಸೇಂಟ್ಜೋಸೆಫ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆ, ಸಂಸ್ಕೃತಿ, ಕಲೆ ಹೀಗೆ ಇತರ ಕ್ಷೇತ್ರಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಇದ್ದು ಕೆಲ ಪೋಷಕರು ಇದಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರೊಳಗಿನ ಸುಪ್ತಪ್ರತಿಭೆಗಳು ಹಾಗೇ ಕಮರಿ ಹೋಗುತ್ತಿವೆ ಎಂದು ವಿಷಾದಿಸಿದರು.
ತಮ್ಮ ಮಕ್ಕಳಿಗಿರುವ ಆಸಕ್ತಿ ಏನು ಎಂಬುದನ್ನು ಗುರುತಿಸಿ ಅದನ್ನು ಶಿಕ್ಷಕರ ಗಮನಕ್ಕೆ ತಂದಲ್ಲಿ ಮಕ್ಕಳನ್ನು ಬಹುಮುಖ ಪ್ರತಿಭೆಗಳನ್ನಾಗಿಸಲು ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಶಿಕ್ಷಕರ ಜತೆಗೆ ಪೋಷಕರು ಕೈ ಜೋಡಿಸ ಬೇಕೆಂದು ಕರೆನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ತಾಲೂಕಿನಾದ್ಯಂತ ಕ್ಲಸ್ಟರ್, ಹೋಬಳಿ ಹಾಗೂ ವಲಯ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ಆಯೋಜಿಸಿ ಇದೀಗ ತಾಲೂಕು ಮಟ್ಟದಲ್ಲಿ ಆಯೋಜಿಸಲಾಗಿದೆ. ಸುಮಾರು 1580 ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, 178 ಮಂದಿ ತೀರ್ಪುಗಾರರು ಕಾರ್ಯನಿರ್ವಹಿಸಿದ್ದಾರೆ ಎಂದು ವಿವರಿಸಿದರು.
ಈ ಕಾರ್ಯಕ್ರಮಕ್ಕಾಗಿ 53 ಸಾವಿರ ರೂ. ಅನುದಾನ ಬಿಡುಗಡೆಯಾಗಿದ್ದು, ಯಾವುದೇ ಕೊರತೆ ಎದುರಾಗದಂತೆ ನಿಭಾಯಿಸಲಾಗಿದೆ, ತಾಲೂಕು ಮಟ್ಟದಲ್ಲಿ ಪಾಲ್ಗೊಂಡಿರುವ ಮಕ್ಕಳು ಉತ್ತಮ ಪ್ರದರ್ಶನ ನೀಡಿ, ಜಿಲ್ಲಾ ಮಟ್ಟ, ರಾಜ್ಯಮಟ್ಟದಲ್ಲಿ ಕೀರ್ತಿ ಪಡೆಯುವಂತೆ ಶಿವಪ್ಪ ಕರೆ ನೀಡಿದರು.
ಸೇಂಟ್ ಜೋಸೆಫ್ ಶಾಲೆಯ ಫಾದರ್ ಬಾಲರಾಜು ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಸಾಮಾನ್ಯ ಪ್ರತಿಭೆಗಳಿವೆ. ಆದರೆ ಅವಕ್ಕೆ ಸಮರ್ಪಕವಾಗಿ ಪ್ರೋತ್ಸಾಹ ಸಿಗುತ್ತಿಲ್ಲ, ಪೋಷಕರು ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಿದರೆ ಎಲ್ಲಾ ಕ್ಷೇತ್ರಗಳಲ್ಲೂ ಮಕ್ಕಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಕೇವಲ ಶಿಕ್ಷಕರ ಹೆಗಲಿಗೆ ಮಕ್ಕಳ ಜವಾಬ್ದಾರಿಯನ್ನು ವಹಿಸದೆ ಪೋಷಕರೂ ಸಹ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಜವಾಬ್ದಾರಿ ಹೊರಬೇಕು, ಶಿಕ್ಷಕರುಗಳು ಮಕ್ಕಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿ ಅವರ ಮನೋವಿಕಾಸಕ್ಕೆ ಮುಂದಾಗಬೇಕೆಂದು ತಿಳಿಸಿದರು. ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ ಅಧ್ಯಕ್ಷ ಡಿ.ಆರ್.ಲಿಂಗಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದೇಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವ, ಡಯೆಟ್ನ ಕಾಂತರಾಜು, ಬಾಲಕಿಯರ ಪ್ರೌಢಶಾಲೆಯ ಉಪಪ್ರಾಂಶುಪಾಲ ದಶರಥಸಿಂಗ್, ಅಕ್ಷರ ದಾಸೋಹದ ವೀರಭದ್ರಯ್ಯ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

