ಬೆಂಗಳೂರು ಗ್ರಾಮಾಂತರ

'ಲಯನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯ ನೆರವು'

Published On :

ದೊಡ್ಡಬಳ್ಳಾಪುರ: ಇಲ್ಲಿನ ಪ್ರವಾಸಿ ಮಂದಿರ ವೃತ್ತದ ಬಳಿ ಎಪಿಎಂಸಿ ಎದುರು ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಲಾಗುತ್ತಿರುವ ಲಯನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ವೀಕ್ಷಣೆಗೆ ಅಂತರ ರಾಷ್ಟ್ರೀಯ ಲಯನ್ಸ್ ಕ್ಲಬ್ ಅಧ್ಯಕ್ಷ ಬೆರ್ರಿ ಜಿ.ಫಾಮರ್ ಭೇಟಿ  ನೀಡಿದ್ದರು.
ಈ ವೇಳೆ ಮಾತನಾಡಿದ ಅವರು, ವಿಶ್ವಾದ್ಯಂತ ಅನೇಕ ಸೇವಾ ಕಾರ್ಯಗಳ ಮೂಲಕ ಜನಮನ್ನಣೆ ಗಳಿಸಿರುವ ಲಯನ್ಸ್ ಕ್ಲಬ್ ಭಾರತದಲ್ಲೂ ಅತ್ಯಂತ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ಸೇವಾ ಕಾರ್ಯಗಳಲ್ಲಿ ಮುಂದಿರುವ ಕ್ಲಬ್ ತನ್ನ ವಿಸ್ತೃತ ಉದ್ದೇಶ ಮತ್ತು ಕಾರ್ಯಯೋಜನೆಗಳನ್ನು ಸಾಕಾರಗೊಳಿಸಬೇಕಾದರೆ ಎಲ್ಲ ಪದಾಧಿಕಾರಿಗಳ ಪರಿಶ್ರಮ ಅಗತ್ಯ. ದೊಡ್ಡಬಳ್ಳಾಪುರದಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆಗೆ ಅಂತಾರಾಷ್ಟ್ರೀಯ ಕ್ಲಬ್ ಶ್ಲಾಘಿಸುತ್ತದೆ. ಅಗತ್ಯ ನೆರವು ನೀಡುವ ಕುರಿತು ಚಿಂತಿಸಲಾಗುವುದು ಎಂದರು.
ಲಯನ್ಸ್ ಚಾರಿಟೀಸ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ನೇತ್ರ ಚಿಕಿತ್ಸೆ, ತಪಾಸಣೆ, ಆರೋಗ್ಯ ಶಿಬಿರಗಳು, ಶೈಕ್ಷಣಿಕ ಸೇವಾ ಕಾರ್ಯಗಳು ಸೇರಿದಂತೆ ಅನೇಕ ಕಾರ್ಯಯೋಜನೆಗಳ ಮೂಲಕ ಜನರ ಪ್ರೀತಿ ಗಳಿಸಿರುವ ಲಯನ್ಸ್ ಕ್ಲಬ್ ಇದೀಗ 1.5 ಕೋಟಿ ವೆಚ್ಚದಲ್ಲಿ ಬೃಹತ್ ಆಸ್ಪತ್ರೆ ನಿರ್ಮಾಣಕ್ಕೆ ಕೈಹಾಕಿದೆ. ಇಲ್ಲಿ ಬಡಜನರಿಗೆ ಅನುಕೂಲವಾಗುವಂತೆ ಡಯಾಲಿಸಿಸ್ ಕೇಂದ್ರವನ್ನೂ ತೆರೆಯುವ ಉದ್ದೇಶವಿದೆ. ದೊಡ್ಡಬಳ್ಳಾಪುರ ನಗರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಅಂತಾರಾಷ್ಟ್ರೀಯ ಲಯನ್ಸ್ ಅಧ್ಯಕ್ಷ ಬೆರ್ರಿ ಜಿ.ಫಾಮರ್ ಮತ್ತು ಅವರ ಪತ್ನಿ ಅನಿ ಜೆ.ಫಾಮರ್ ಆಸ್ಪತ್ರೆ ಕಾಮಗಾರಿ ವೀಕ್ಷಿಸಿ, ಯೋಜನೆಗೆ ಹೆಚ್ಚಿನ ನೆರವು ನೀಡುವ ಉದ್ದೇಶವಿದೆ. ದಾನಿಗಳ ನೆರವಿನಿಂದ ಬಡಜನರಿಗೆ ಉಪಯೋಗವಾಗುವ ಆರೋಗ್ಯ ಸಂಬಂಧಿ ಕೆಲಸಗಳನ್ನು ಮಾಡಬೇಕಿದೆ ಎಂದು ವಿಶ್ಲೇಷಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಲಯನ್ಸ್ ಮತ್ತು ಲಯನೆಸ್ ಕ್ಲಬ್ ನೇತೃತ್ವದಲ್ಲಿ ಬೆರ್ರಿ ಜಿ.ಫಾಮರ್ ಮತ್ತು ಅನಿ ಜಿ.ಫಾಮರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ವಿ.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಜಿಲ್ಲಾ ರಾಜ್ಯಪಾಲ ಆರ್.ಕುಮಾರ್, ರಂಗನಾಥ್, ಪ್ರೇಮನಾಥ್, ಲಯನ್ಸ್ ಚಾರಿಟೀಸ್ ಟ್ರಸ್ಟ್‌ನ ಎಲ್.ಕೃಷ್ಣಮೂರ್ತಿ, ಎ.ವೆಂಕಟೇಶ್, ಎಂಪಿಸಿ ವೆಂಕಟೇಶ್, ಎಸ್.ನಟರಾಜ್, ನಾಗಪ್ರಿಯ ಸೇರಿದಂತೆ ಲಯನ್ಸ್ ಕ್ಲಬ್‌ನ ಬಹುತೇಕ ಸದಸ್ಯರು, ಮಾಜಿ ಅಧ್ಯಕ್ಷರು, ಲಯನೆಸ್ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.