ಬೆಂಗಳೂರು ಗ್ರಾಮಾಂತರ

ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ರದ್ದು ಬೇಡ

Published On :

ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯದ ಸುಪ್ರಸಿದ್ಧ ದನಗಳ ಜಾತ್ರೆಗಳಲ್ಲಿ ಒಂದೆನಿಸಿದ್ದ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಪ್ರಕಟಿಸಿದೆ. ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯದೆಲ್ಲೆಡೆ ಹಬ್ಬಿರುವ ಕಾಲುಬಾಯಿ ಜ್ವರದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಂಕರ್ ತಿಳಿಸಿದ್ದಾರೆ.
ಆದರೆ, ಜಿಲ್ಲಾಡಳಿತದ ಈ ಕ್ರಮ ರೈತರಿಗೆ ಸಮಾಧಾನ ತಂದಿಲ್ಲ. ಪರಿಣಾಮ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ರೈತರು ದೊಡ್ಡಬಳ್ಳಾಪುರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ರನ್ನು ಭೇಟಿ ಮಾಡಿ ದನಗಳ ಜಾತ್ರೆ ನಡೆಸಲು ಅವಕಾಶ ಕೊಡುವಂತೆ ಕೋರಿದರು. ಸುಮಾರು 10 ಜಿಲ್ಲೆಗಳಿಂದ ಆಗಮಿಸಿದ್ದ ರೈತ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಹತ್ತಾರು ವರ್ಷಗಳಿಂದ ಘಾಟಿ ಕ್ಷೇತ್ರದಲ್ಲಿ ನಡೆಯುತ್ತಿರುವ ದನಗಳ ಜಾತ್ರೆ ತಡೆಯುವುದು ಬೇಡ. ಇದರ ಹಿಂದೆ ಧಾರ್ಮಿಕ ಭಾವನೆಗಳಿವೆ. ಜೊತೆಗೆ ಕೃಷಿಕ ಪರಂಪರೆಯ ನಂಟು ಇದೆ. ರಾಜ್ಯ ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡಿನ ರೈತರೂ ಈ ಜಾತ್ರೆಯಲ್ಲಿ ದನಗಳ ವಹಿವಾಟಿನಲ್ಲಿ ತೊಡಗುತ್ತಾರೆ.
10 ಕೋಟಿಗೂ ಅಧಿಕ ವಹಿವಾಟು: ಸುಮಾರು 10 ಕೋಟಿಗೂ ಅಧಿಕ ವಹಿವಾಟು ಈ ಜಾತ್ರೆಯಲ್ಲಿ ನಡೆಯುತ್ತಿತ್ತು. ಜಾತ್ರೆ ರದ್ದಾದರೆ ಅನೇಕ ರೈತರು ಇದರಿಂದ ಪರಿತಪಿಸುವಂತಾಗುತ್ತದೆ. ಅಲ್ಲದೆ ಇದರಿಂದ ಸರ್ಕಾರಕ್ಕೆ ಬರುವ ಕರವೂ ಕೈತಪ್ಪುತ್ತದೆ ಎಂದು ವಿವರಿಸಿದರು.
ಅವಕಾಶ ಕೊಡಿ: ಜಿಲ್ಲಾಧಿಕಾರಿಗಳು ಹೇಳಿರುವಂತೆ ಕಾಲುಬಾಯಿ ಜ್ವರ ರಾಜ್ಯದಲ್ಲಿ ಕಾಣಿಸಿಕೊಂಡಿರುವುದು ಸತ್ಯ. ಆದರೆ ಜ್ವರದಿಂದ ಮೃತಪಟ್ಟಿರುವುದು ಬಹುತೇಕ ವಿದೇಶಿ ತಳಿಯ ಹಸುಗಳೇ. ದೇಶಿ ಹಸುವಿನ ತಳಿಗಳಿಗೆ ಯಾವುದೇ ರೋಗ ಬರಲು-ಹರಡಲು ಸಾಧ್ಯವಿಲ್ಲ. ಜಾತ್ರೆಗೆ ಬರುವ ಹಸುಗಳು ದೇಸೀಯವೇ ಆಗಿರುತ್ತವೆ. ಹಾಗಾಗಿ ರೋಗಭೀತಿ ಅಗತ್ಯವಿಲ್ಲ.ಈಗಾಗಲೇ ದೂರದ ಊರುಗಳಿಂದ ಘಾಟಿ ಕ್ಷೇತ್ರಕ್ಕೆ ಹಸುಗಳೊಂದಿಗೆ ರೈತರು ಆಗಮಿಸಿದ್ದಾಗಿದೆ. ಅವರನ್ನು ಹಿಂದಕ್ಕೆ ಕಳುಹಿಸುವುದು ಬೇಡ. ಬರುವ ರೈತರು ಅವರ ಪಾಡಿಗೆ ವ್ಯಾಪಾರ ವಹಿವಾಟು ನಡೆಸಿಕೊಳ್ಳುವುದಕ್ಕೆ ಅವಕಾಶ ಕೊಡಿ. ಬೇಕಿದ್ದರೆ ಸರ್ಕಾರ ಕೊಡುವ ಜಾತ್ರೆಯ ಯಾವ ಸವಲತ್ತೂ ರೈತರಿಗೆ ಬೇಡ ಎಂದರು.
ಪರಿಶೀಲನೆ ಭರವಸೆ: ರೈತರ ಮನವಿ ಸ್ವೀಕರಿಸಿದ ತಹಸೀಲ್ದಾರ್ ಕೆ.ಬಿ.ಸಿದ್ಧಲಿಂಗಯ್ಯ, ರಾಜ್ಯದ ಹಲವು ಜಿಲ್ಲೆಗಳ ರೈತರು ಘಾಟಿ ದನಗಳ ಜಾತ್ರೆ ನಡೆಸುವಂತೆ ಮಾಡಿರುವ ಮನವಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು. ರೈತರ ಹಿತದೃಷ್ಟಿಯಿಂದಲೇ ಸರ್ಕಾರ ದನಗಳ ಜಾತ್ರೆಯನ್ನು ಈ ವರ್ಷದ ಮಟ್ಟಿಗೆ ನಿಲ್ಲಿಸಿದೆ. ದನಗಳ ಜಾತ್ರೆ ರದ್ದು ಪಡಿಸಿರುವುದಕ್ಕೆ ರೈತರು ಸಹಕರಿಸಬೇಕು. ಆದಾಗ್ಯೂ ಕೂಡ ಅವರ ಮನವಿಯನ್ನು ಸರ್ಕಾರದ ಹಂತಕ್ಕೆ ಕಳುಹಿಸಲಾಗುವುದು ಎಂದರು.
ತಾಲೂಕು ಪಶು ವೈದ್ಯಾಧಿಕಾರಿ ರಾಜಣ್ಣ, ಘಾಟಿ ದೇವಾಲಯದ ವ್ಯವಸ್ಥಾಪಕ ನಂಜಪ್ಪ ಸೇರಿದಂತೆ ಕ್ಷೇತ್ರದ ಹಲವು ಮುಖಂಡರು, ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.