ಜನಪದ ಉಳಿವಿಗೆ ಯುವಶಕ್ತಿ ಶ್ರಮಿಸಲಿ
ಕ.ಪ್ರ.ವಾರ್ತೆ , ರಾಮನಗರ , ಡಿ.12
ನೃತ್ಯ ಪ್ರಾಕಾರಗಳಾದ ಭರತನಾಟ್ಯ, ಕೂಚುಪುಡಿ ಹಾಗೂ ಸಂಗೀತ ಪ್ರಾಕಾರಗಳಾದ ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತಗಳಿಗೆ ಸಿಗುತ್ತಿರುವಷ್ಟು ಮನ್ನಣೆ, ಪ್ರೋತ್ಸಾಹ ಜನಪದ ಕಲಾ ಪ್ರಾಕಾರಗಳಿಗೆ ಸಿಗುತ್ತಿಲ್ಲ ಎಂದು ಜಾನಪದ ಲೋಕದ ಕ್ಯೂರೇಟರ್ ಡಾ.ಕುರುವ ಬಸವರಾಜು ವಿಷಾದಿಸಿದರು.
ನಗರದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವ ಆಯ್ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದಲ್ಲಿರುವ ಎಲ್ಲಾ ಕಲಾ ಪ್ರಾಕಾರಗಳಿಗೂ ಏಕ ಪ್ರಕಾರದ ಪ್ರೋತ್ಸಾಹ ಅಗತ್ಯ. ಇಲ್ಲದಿದ್ದರೆ ಜಾನಪದ ಕಲೆಗಳು ನಶಿಸಿ ಹೋಗುವ ಆತಂಕವಿದೆ ಎಂದರು.
ರಾಷ್ಟ್ರದಲ್ಲಿ ಬೆಳಕಿಗೆ ಬಾರದ ವೈವಿಧ್ಯಮಯತೆ ಹೊಂದಿರುವ ಅನೇಕ ಕಲಾ ಪ್ರಾಕಾರಗಳಿವೆ. ಸೂಕ್ತ ಪ್ರೋತ್ಸಾಹ ದೊರಕದ ಕಾರಣದಿಂದ ಅವುಗಳು ಬೆಳಕಿಗೆ ಬಂದಿಲ್ಲ. ಕೇವಲ ಚರ್ಮ ವಾದ್ಯ ಒಂದರಲ್ಲೇ 150ಕ್ಕೂ ಹೆಚ್ಚು ವೈವಿಧ್ಯಮಯ ಪ್ರಕಾರಗಳಿವೆ. ಇಂತಹ ಕಲಾ ಪ್ರಾಕಾರಗಳಿಗೆ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ನೀಡಿ, ನೆಲೆ ಕಲ್ಪಿಸಬೇಕಿದೆ ಎಂದು ಹೇಳಿದರು.
ಸೀಮಿತವಾಗಬಾರದು: ವೇದಿಕೆಗಳು ಯಾವುದೋ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಬಾರದು. ಗಂಗಾ, ಬ್ರಹ್ಮಪುತ್ರ ನದಿಗಳಿಗೆ ಇರುವಷ್ಟೇ ಪ್ರಾಮುಖ್ಯತೆ ದೇಶದ ಇನ್ನಿತರೆ ನದಿಗಳಿಗಿದ್ದು, ಇದು ಕಲಾ ವಿಷಯದಲ್ಲೂ ಪ್ರಸ್ತುತವಾಗಿದೆ. ಕಲಾವಿದರು ಸತತ ಅಭ್ಯಾಸದಿಂದ ತಮ್ಮಲ್ಲಿನ ಪ್ರತಿಭೆ ಹೊರ ಹಾಕುವಂತೆ ಕರೆ ನೀಡಿದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸುಮಾರು 1980ರಲ್ಲಿ ಜಾರಿಗೆ ತಂದ ನಿಯಮಗಳು ಹಾಗೂ ಯೋಜನೆಗಳನ್ನೇ ಈಗಲೂ ಅನುಸರಿಸುತ್ತಿದೆ. ಈ ಹಳೆಯ ನಿಯಮಗಳಿಂದ ಹೆಚ್ಚಿನ ಲಾಭವಾಗುತ್ತಿಲ್ಲ. ಇಂದಿನ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ತರುವ ಮೂಲಕ ಯುವಜನರನ್ನು ಪ್ರೋತ್ಸಾಹಿಸಲು ಮುಂದಾಗಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ರಾಜ್ಯ ಸಂಚಾಲಕ ಎಸ್.ಬಾಲಾಜಿ ಹೇಳಿದರು.
ಯುವಜನ ಮೇಳಗಳಲ್ಲಿ ಭಾಗವಹಿಸುವ ಯುವಕರಿಗೆ ಹಳೆಯ ನಿಯಮಗಳಂತೆಯೇ ಗೌರವಧನ ಪಾವತಿಸಲಾಗುತ್ತಿದೆ. ಇದು ಏನಕ್ಕೂ ಸಾಲದಾಗಿದ್ದು, ಕನಿಷ್ಟ ಒಂದು ಸಾವಿರ ರುಪಾಯಿಗೆ ಗೌರವ ಧನವನ್ನು ಹೆಚ್ಚಿಸಬೇಕಿದೆ ಎಂದು ತಿಳಿಸಿದರು.
ಖಾಸಗೀಕರಣ, ಜಾಗತೀಕರಣದ ಇಂದಿನ ಸನ್ನಿವೇಶದಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶೀ ಕಲೆಗಳನ್ನು ಉಳಿಸಿ, ಬೆಳೆಸುವತ್ತ ಗಮನ ಹರಿಸಬೇಕು. ಇದಕ್ಕಾಗಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲೂ ಯುವಜನ ಮೇಳ ತರಬೇತಿ, ಕಮ್ಮಟಗಳನ್ನು ಆಯೋಜಿಸಬೇಕು. ಸರ್ಕಾರ ಜಾರಿಗೆ ತಂದಿರುವ ಯುವ ನೀತಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಕೃಷಿಕರು, ಕೃಷಿ ಕಾರ್ಮಿಕರನ್ನೂ ಇದರಲ್ಲಿ ಸೇರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಬಾಲಾಜಿ ಹೇಳಿದರು.
ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ, ಏಕಾಂಕ ನಾಟಕ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದ್ಯ, ಶಾಸ್ತ್ರೀಯ ನೃತ್ಯ, ಹಾರ್ಮೋನಿಯಂ, ಗಿಟಾರ್, ಆಶುಭಾಷಣ ಸ್ಪರ್ಧೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಿ, ಆಯ್ಕೆಯಾದ ತಂಡಗಳು ಮಂಡ್ಯ ಜಿಲ್ಲೆಯ ಕೀಲಾರದಲ್ಲಿ ಡಿ.14 ರಿಂದ 16ರವರೆಗೆ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಿ.ನವಜ್ಯೋತಿ ತಿಳಿಸಿದರು.
ಸಂಗೀತ ವಿದ್ವಾಂಸೆ ಶ್ರೀವಳ್ಳಿ, ಕ್ರೀಡಾ ತರಬೇತುದಾರ ಪ್ರಭು, ಪಾರ್ಥಸಾರಥಿ, ಕನ್ನಡ ಪ್ರಾಧ್ಯಾಪಕ ಹನಿಯೂರು ಚಂದ್ರೇಗೌಡ, ಡಾ.ಸೋಮಶೇಖರ್ ಇದ್ದರು. ಕ್ರೀಡಾ ಇಲಾಖೆಯ ನಿವೃತ್ತ ಅಧಿಕಾರಿ ಚಂದ್ರಣ್ಣ ನಿರೂಪಿಸಿದರು. ಡಯಟ್ ಉಪನ್ಯಾಸಕ ಕೆಂಪರಾಜು ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

