ಬೆಂಗಳೂರು ಗ್ರಾಮಾಂತರ

ಪ್ರತಿಭಾ ಅನಾವರಣಕ್ಕೆ ಪರಿಶ್ರಮ ಅಗತ್ಯ

Published On :

ಕ.ಪ್ರ.ವಾರ್ತೆ ,  ರಾಮನಗರ ,  ಡಿ.13
ಒಬ್ಬ ವ್ಯಕ್ತಿಯ ಪರಿಪೂರ್ಣ ಅಭಿವೃದ್ಧಿಗೆ ಭೌತಿಕ, ಆಧ್ಯಾತ್ಮಿಕ, ಸಾಮಾಜಿಕ ಸಮತೋಲನ ಅಗತ್ಯ. ಅಂತೆಯೇ ಒಬ್ಬ ವಿದ್ಯಾರ್ಥಿಗೆ ಶಿಕ್ಷಣದ ಜತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಅತ್ಯವಶ್ಯ ಎಂದು ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ಅಭಿಪ್ರಾಯಪಟ್ಟರು.  
ಧಾರವಾಡದ ರಾಜ್ಯ ಬಾಲ ವಿಕಾಸ ಅಕಾಡೆಮಿ, ಜಿಲ್ಲಾಡಳತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಜಾನಪದ ಪರಿಷತ್  ಸಂಯುಕ್ತಾಶ್ರಯದಲ್ಲಿ ಜಾನಪದ ಲೋಕದಲ್ಲಿ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ನಾಲ್ಕು ಗೋಡೆಯ ಮಧ್ಯೆ ಕುಳಿತು ಶಿಕ್ಷಣ ಪಡೆಯುವ ಮಕ್ಕಳಲ್ಲಿನ ಸಾತ್ವಿಕ ಗುಣವನ್ನು ಹೊರತರಲು ಇಂತಹ ಕಾರ್ಯಕ್ರಮ ಪೂರಕವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಚಟುವಟಿಕೆಗಳ ಜತೆಗೆ ಸಾತ್ವಿಕ ಶಿಕ್ಷಣವೂ ಬೇಕು ಎಂದು ಅವರು ತಿಳಿಸಿದರು.
ಶಿಕ್ಷಕರೇ ಶಿಲ್ಪಿಗಳು: ಒಬ್ಬ ಶಿಲ್ಪಿ ಒಂದು ಕಲ್ಲನ್ನು ಸುಂದರ ವಿಗ್ರಹವನ್ನಾಗಿಸುವಂತೆ ಒಬ್ಬ ವಿದ್ಯಾರ್ಥಿಯನ್ನು ಪರಿಪೂರ್ಣ ವ್ಯಕ್ತಿಯಾಗಿಸಿ ಅವನಲ್ಲಿರುವ ಸಾತ್ವಿಕ ಗುಣಗಳನ್ನು ಹೊರತಂದು, ಅವರ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ವೆಂಕಟೇಶ್ ಹೇಳಿದರು.
ಪ್ರತಿಯೊಂದು ಮಗುವಿನಲ್ಲೂ ಸುಪ್ತ ಪ್ರತಿಭೆ ಅಡಗಿರುತ್ತದೆ. ಮಕ್ಕಳಲ್ಲಿರುವ ಪ್ರತಿಭೆ, ಚತುರತೆ, ಉತ್ತಮ ಗುಣಗಳನ್ನು ಅನಾವರಣಗೊಳಿಸಲು ಆಗಿಂದಾಗ್ಗೆ ಸೂಕ್ತ ವೇದಿಕೆ ಕಲ್ಪಿಸಬೇಕು. ಮಕ್ಕಳ ಹಬ್ಬ, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಸಲಹೆ ನೀಡಿದರು.
ನಗರ ಪ್ರದೇಶದ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ತರಬೇತಿ ಮೂಲಕ ನೀಡಬೇಕು. ಆದರೆ, ಗ್ರಾಮೀಣ ಮಕ್ಕಳಲ್ಲಿ ಅವೆಲ್ಲವೂ ತಾನಾಗಿಯೇ ಮೈಗೂಡಿರುತ್ತವೆ. ಗ್ರಾಮೀಣ ಮಕ್ಕಳು ಕೀಳರಿಮೆ ಬಿಟ್ಟು, ಸ್ಪರ್ಧಾ ಪೈಪೋಟಿಗೆ ಸಜ್ಜಾಗಬೇಕು ಎಂದರು.  
ಬೆಳವಣಿಗೆಗೆ ಕೊಡುಗೆ: ಮಕ್ಕಳನ್ನು ಕ್ರಿಯಾಶೀಲರಾಗಿ ಬೆಳೆಸಲು ನಮ್ಮ ಸಂಸ್ಕೃತಿ ಅತ್ಯಂತ ಉಪಯುಕ್ತವಾಗಿದೆ. ನಮ್ಮ ಸಂಸ್ಕೃತಿಯು ಮಕ್ಕಳ ಸಾಮಾಜಿಕ, ಧಾರ್ಮಿಕ ಹಾಗೂ ವಯಕ್ತಿಕ ಬೆಳವಣಿಗೆಗೆ ನೀಡಿರುವ ಕೊಡುಗೆ ಅನನ್ಯವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕ ಟ್ರಸ್ಟ್ ಅಧ್ಯಕ್ಷ ಟಿ.ತಿಮ್ಮೇಗೌಡ ತಿಳಿಸಿದರು.
ನಾಯಕರು ಆದರ್ಶವಾಗಲಿ: ಬಾಲ ವಿಕಾಸ ಅಕಾಡೆಮಿಯು ಮಕ್ಕಳಿಗೋಸ್ಕರ, ಮಕ್ಕಳಿಗಾಗಿ ಇರುವ ಸಂಸ್ಥೆಯಾಗಿದೆ. ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಸ್ಥೆ ಉತ್ತೇಜನ ನೀಡುತ್ತಿದೆ. ಈಗಿನ ಮಕ್ಕಳಿಗೆ ಮಹಾನ್ ನಾಯಕರು ಆದರ್ಶಪ್ರಾಯವಾಗಬೇಕು ಎಂದು ಬಾಲವಿಕಾಸ ಅಕಾಡೆಮಿ ಸದಸ್ಯ ರಾ.ಶಿ.ಬಸವರಾಜು ಸಲಹೆ ನೀಡಿದರು.
ಅಪರಾಧ ವೈಭವೀಕರಣ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಇಂದಿನ ದೃಶ್ಯ ಮಾಧ್ಯಮಗಳು ಉಪಯುಕ್ತವಾಗಿಲ್ಲ. ಮಾಧ್ಯಮಗಳಲ್ಲಿ ಅಪರಾಧ ಜಗತ್ತಿನ ವೈಭವೀಕರಣವೇ ಹೆಚ್ಚಾಗಿದ್ದು, ಅದು ಮಕ್ಕಳ ಭವಿಷ್ಯಕ್ಕೆ ಮುಳುವಾಗಿದೆ. ಅವುಗಳಿಂದ ದೂರವಿಟ್ಟು ಮಕ್ಕಳಿಗೆ ಪೋಷಕರು ಮತ್ತು ಶಿಕ್ಷಕರು ಚಿಕ್ಕಂದಿನಿಂದಲೇ ಸಂಸ್ಕಾರ, ಸಂಸ್ಕೃತಿ, ನಮ್ಮತನವನ್ನು ತುಂಬಬೇಕು ಎಂದು ಡಿವೈಎಸ್ಪಿ ರಾಮಲಿಂಗಪ್ಪ ತಿಳಿಸಿದರು.  
ಪ್ರತಿಭೆ ಹೊರತನ್ನಿ: ಮಕ್ಕಳಲ್ಲಿನ ವಿಶೇಷತೆಗಳನ್ನು ಗುರ್ತಿಸಿ ಬೆಳಕು ಚೆಲ್ಲಬೇಕು. ಅವರ ಏಳ್ಗೆಗೆ ಪೋಷಕರಷ್ಟೇ ಕಾಳಜಿಯನ್ನು ಶಿಕ್ಷಕರೂ ವಹಿಸಬೇಕು. ಒಳ್ಳೆಯ ಗುರುವಿಲ್ಲದೆ ಮಕ್ಕಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಲು ಸಾಧ್ಯವೇ ಇಲ್ಲ. ಹೀಗಾಗಿ ಶಿಕ್ಷಕರ ಪಾತ್ರ ಅತ್ಯಂತ ಪಾವಿತ್ರ್ಯ ಮತ್ತು ಮಹತ್ವದ್ದಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಹೇಳಿದರು.  
ಜಿಪಂ ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ  ಶಿವರಾಮೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ತಾಲೂಕು ಅಧಿಕಾರಿ ನಾಗಲಾಂಬಿಕೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ ಭಾಗವಹಿಸಿದ್ದರು. ರಾಜ್ಯ ಮಟ್ಟದ ಮಕ್ಕಳ ಸಂಸತ್ತಿಗೆ ಆಯ್ಕೆಯಾಗಿದ್ದ ಅಭಿಲಾಷಿ ಅನುಭವ ಹಂಚಿಕೊಂಡರು.
ಸೃಜನಾತ್ಮಕ ಸಾಹಿತ್ಯ ಪ್ರಕಾರದಲ್ಲಿ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿ ಪಡೆದ ಕನಕಪುರದ ಅರುಂಧತಿ  ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಕಲಾಶ್ರೀ ಶಿಬಿರದಲ್ಲಿ ವಿಜೇತರಾದ ಜಿಲ್ಲೆಯ ಮಕ್ಕಳಾದ  ಹಿತೇಶಗೌಡ, ರವಿಕುಮಾರ್ (ಸೃಜನಾತ್ಮಕ ಕಲೆ), ಬಿ.ಸಿ.ಮುನಿರಾಜು(ಸೃಜನಾತ್ಮಕ  ಬರವಣಿಗೆ), ಆರ್.ಸ್ಫೂರ್ತಿ, ಬಿ.ಎಸ್.ಸಂಧ್ಯಾ(ಸೃಜನಾತ್ಮಕ  ಪ್ರದರ್ಶನ ಕಲೆ), ಅಮೃತ ವರ್ಷಿಣಿ, ಎಸ್.ಹರ್ಷ(ವಿಜ್ಞಾದಲ್ಲಿ ನೂತನ ಆವಿಷ್ಕಾರ) ಅವರಿಗೆ ಬಹುಮಾನ ವಿತರಿಸಲಾಯಿತು.  
ಎಲ್ಲೆಡೆಯಲ್ಲೂ ಮಕ್ಕಳ ಕಲರವ...
ಜಾನಪದದ ವೈವಿಧ್ಯಗಳೊಂದಿಗೆ ಸುಂದರ ಪರಿಸರದ ತಾಣವಾಗಿರುವ ಜಾನಪದ ಲೋಕದಲ್ಲಿ ಶುಕ್ರವಾರ ಚಿಣ್ಣರ ಕಲರವ ಕೇಳಿ ಬಂದಿತು. ಅಲ್ಲಿ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಗಣ್ಯರ ಭಾಷಣ ಹೊರತಾದ ಎಲ್ಲ ಜವಬ್ದಾರಿಗಳನ್ನು ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು.  ಜಿಲ್ಲಾ ಮಟ್ಟದ ಈ ಕಾರ್ಯಕ್ರಮಕ್ಕೆ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಗಣ್ಯರ ಭಾಷಣ ಹೊರತಾಗಿ ಪ್ರಾರ್ಥನೆ, ಸ್ವಾಗತ, ನಿರೂಪಣೆ ಎಲ್ಲವನ್ನೂ ಮಕ್ಕಳೇ ನಿಭಾಯಿಸಿದ್ದು ವಿಶಿಷ್ಟವಾಗಿತ್ತು.  ವೇದಿಕೆಯಲ್ಲಿ ಮಕ್ಕಳ ಕಂಠದಿಂದ ಮಧುರ  ಗೀತೆಗಳ ಗಾಯನ, ವಿವಿಧ ವೇಷಭೂಷಣ ತೊಟ್ಟ ಚಿಣ್ಣರು ಜಾನಪದ ಸಹಿತ ನಾನಾ ನೃತ್ಯಗಳಿಂದ ನೆರೆದಿದ್ದವರ ಮನಸೂರೆಗೊಂಡರು. ತಮ್ಮಲ್ಲಿ ಅಡಗಿದ್ದ ಸುಪ್ತ ಪ್ರತಿಭೆ ಅನಾವರಣಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.