ಪ್ರತಿಭೆ ಅನಾವರಣಕ್ಕೆ ಯುವ ಸಮ್ಮೇಳನ
ಕ.ಪ್ರ.ವಾರ್ತೆ , ರಾಮನಗರ , ಡಿ.16
ಯುವಕರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸರ್ಕಾರವು ಯುವ ಸಮ್ಮೇಳನದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವೇದಿಕೆ ಸೃಷ್ಟಿಸಿದೆ. ವಿದ್ಯಾರ್ಥಿ ಯುವಜನರು ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಕರೆ ನೀಡಿದರು.
ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ನಗರದ ಹೊರ ವಲಯದಲ್ಲಿರುವ ಜಾನಪದ ಲೋಕದಲ್ಲಿ ಆಯೋಜಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಯುವ ಸಮ್ಮೇಳನ, ಕಾರ್ಯಾಗಾರ ಹಾಗೂ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಇಂದಿನ ಯುವಜನರು ಜಾನಪದ ಕಲೆಗಳನ್ನು ಕಡೆಗಣಿಸುತ್ತಿದ್ದಾರೆ. ಜಾನಪದ ಕಲೆಗಳು ನಶಿಸಿದರೆ ನಮ್ಮ ಸಂಸ್ಕೃತಿಯೇ ನಶಿಸಿಹೋಗಲಿದೆ. ಇಂತಹ ಶ್ರೀಮಂತ ಜಾನಪದ ಕಲೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.
ಜಾನಪದ ಕಲೆಗಳು ಮನರಂಜನೆ ನೀಡುವ ಜತೆಗೆ ಜೀವನ ರೂಪಿಸಿಕೊಳ್ಳಬಲ್ಲ ಮೌಲ್ಯಗಳನ್ನು ಕಲಿಸಿಕೊಡುತ್ತವೆ. ಯುವಜನರು ನಾಡಿನ ಕಲೆ, ಸಂಸ್ಕೃತಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಜಾನಪದ ಕಲೆಗಳನ್ನು ಕಲಿತು, ಪ್ರದರ್ಶಿಸುವ ಮೂಲಕ ನಶಿಸುತ್ತಿರುವ ಕಲೆಗಳನ್ನು ಉಳಿಸಲು ಮುಂದಾಗಬೇಕು ಎಂದು ತಿಮ್ಮೇಗೌಡ ತಿಳಿಸಿದರು.
ಕಲೆಗಳ ತವರೂರು: ರಾಮನಗರವು ಸಾಂಸ್ಕೃತಿಕವಾಗಿ ಶ್ರೀಮಂತವಾದ ಜಿಲ್ಲೆಯಾಗಿದೆ. ವಿಶೇಷವಾಗಿ ಇಲ್ಲಿನ ಜಾನಪದ ಕಲೆ, ಸಂಸ್ಕೃತಿ ಗಮನ ಸೆಳೆಯುವಂತಿದೆ. ವಿಭಿನ್ನ ಕಲಾ ಪ್ರಕಾರಗಳ ನೆಲೆಯಾಗಿರುವ ಜಿಲ್ಲೆಯಲ್ಲಿ ಯುವ ಕಲಾ ತಂಡಗಳು ಯುವ ಸಮ್ಮೇಳನದಂತಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಇದರಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಿಗೆ ಅವಕಾಶ ಪಡೆಯಲು ಸಾಧ್ಯವಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಸಂಚಾಲಕ ಎಸ್. ಬಾಲಾಜಿ ತಿಳಿಸಿದರು.
ಟಿ.ಕೆ.ಗೌಡ ಸಲಹೆ: ಯುವಜನರನ್ನು ಕ್ರಿಯಾಶೀಲರನ್ನಾಗಿಸುವ ಉದ್ದೇಶದಿಂದ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ವಿವೇಕಾನಂದರ ಜಯಂತಿ ಸಂದರ್ಭದಲ್ಲಿ ಯುವಕರನ್ನು ಒಂದೆಡೆ ಸಂಘಟಿಸುವ ದಿಸೆಯಲ್ಲಿ ಯುವ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಗೌಡ ಹೇಳಿದರು.
ಯುವ ಸಬಲೀಕರಣಕ್ಕಾಗಿಯೇ ಪ್ರತ್ಯೇಕ ಇಲಾಖೆಯೂ ಇದೆ. ಜಿಲ್ಲೆಯ ಯುವ ಸಂಘ ಸಂಸ್ಥೆಗಳು ನಿರುತ್ಸಾಹ ಬಿಟ್ಟು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಸಕ್ತಿ ತೋರಬೇಕು ಎಂದು ಅವರು ಸಲಹೆ ನೀಡಿದರು. ಜಾನಪದ ಲೋಕದ ಸಂಯೋಜಕ ಡಾ.ಕುರುವ ಬಸವರಾಜ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ರಂಗನಿರ್ದೇಶಕ ಬೈರ್ನಳ್ಳಿಶಿವರಾಂ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

