ಬೆಂಗಳೂರು ಗ್ರಾಮಾಂತರ

ಒಕ್ಕಲಿಗರ ಚುನಾವಣೆಗೆ ಸಮಾನ ಮನಸ್ಕರ ವೇದಿಕೆ ಸ್ಪರ್ಧೆ

Published On :

ಚನ್ನಪಟ್ಟಣ: ಒಕ್ಕಲಿಗರ ಸಂಘದ ಆಡಳಿತ ಮಂಡಳಿಗಳು ಸದಸ್ಯರನ್ನು ಕತ್ತಲಲ್ಲಿ ಇರಿಸಿ ನಿರಂತರ ಅವ್ಯವಹಾರದಲ್ಲಿ ತೊಡಗಿದ್ದು ಚುನಾವಣೆಯಲ್ಲಿ ಸಮಾನ ಮನಸ್ಕರ ವೇದಿಕೆ ಸ್ಪರ್ಧಿಸುವ ಮೂಲಕ ಬದಲಾವಣೆಗಾಗಿ ಹೋರಾಟ ಆರಂಭಿಸಿದೆ ಎಂದು ವೇದಿಕೆಯ ಮುಂದಾಳು ಕೆ.ವಿ. ಚಂದ್ರಶೇಖರ್ ತಿಳಿಸಿದರು.
ಮುದುಗೆರೆ ಸಮೀಪ ಸುದ್ದಿಗಾರರೊಂದಿಗೆ ಮಾತನಾಡಿ, ಅವ್ಯವಸ್ಥೆಯ ಆಗರವಾಗಿರುವ ಒಕ್ಕಲಿಗರ ಸಂಘದಲ್ಲಿ ಶಿಸ್ತಿ ಮತ್ತು ಸಮುದಾಯದ ಪ್ರಗತಿಗೆ ಶ್ರಮಿಸುವಂತೆ ಮಾಡುವ ಉದ್ದೇಶ ನಮ್ಮದಾಗಿದ್ದು ನಮ್ಮ  ಸದಾಶಯಗಳಿಗೆ ಸಂಘದ ಸದಸ್ಯರು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
 ಸಂಘವನ್ನು ಹೊಕ್ಕಿರುವ ಕೆಲ ಸ್ಥಾಪಿತ ಹಿತಾಸಕ್ತಿಗಳು ಇಂದು ಸಂಘವನ್ನು ಸ್ವಂತ ಆಸ್ತಿ ಮಾಡಿಕೊಂಡು  ಸದಸ್ಯರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದು  ಇಂತಹ ಸ್ವಾರ್ಥಿಗಳ ಹಿಡಿತಕ್ಕೆ ಸಿಗದಂತೆ ಕಾಪಾಡುವುದೇ ನಮ್ಮ ತಂಡದ ಅಜೆಂಡಾ ಎಂದರು.
ಪ್ರತಿವರ್ಷ ಸರ್ವಸದಸ್ಯರ ಸಭೆ ಕರೆಯ ಬೇಕೆಂಬ ನಿಯಮ ಇದೆಯಾದರೂ ಕಳೆದ 12 ವರ್ಷಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಸರ್ವಸದಸ್ಯರ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಸಂಘದ ಹಣಕಾಸಿನ ವ್ಯವಹಾರ, ವ್ಯಾಜ್ಯಗಳು, ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸೇರಿದಂತೆ ಯಾವುದೇ ಮಾಹಿತಿಯನ್ನು ಸಭೆಗೆ ನೀಡದೆ ಪ್ರಮಾದವೆಸಗುತ್ತಾ ಬಂದಿದ್ದಾರೆ ಎಂದು ದೂರಿದರು.
ಸಜ್ಜೆಪಾಳ್ಯ ಜಮೀನುವಿವಾದ: ಸಂಘದ ಪ್ರತಿಯೊಂದು ಚುನಾವಣೆಯಲ್ಲೂ ಸಜ್ಜೆಪಾಳ್ಯದ ಜಮೀನಿನ ವಿವಾದ ಮಾರ್ದನಿಸುತ್ತಲೇ ಇದೆ. ಇದನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡು ಚುನಾವಣೆಯಲ್ಲಿ  ಗೆಲವು ಸಾಧಿಸಿದ ಮಂದಿ ಕನಿಷ್ಠ ಪರಿಹಾರವನ್ನು ಕಲ್ಪಿಸಿಲ್ಲ.
ರಂಗಮ್ಮ ಮತ್ತು ಕೃಷ್ಣಯ್ಯ ಎಂಬುವರು ಪುಟ್ಟಸ್ವಾಮಿ ಗೌಡ ಎಂಬುವರ ಮೂಲಕ ನೀಡಿರುವ ಸಜ್ಜೆಪಾಳ್ಯ ಜಮೀನನ್ನು ಸಂಘ ನಿಬಂಧನೆಯಂತೆ  ಬಳಕೆ ಮಾಡುತ್ತಿಲ್ಲ. 30 ವರ್ಷಗಳಿಂದ ಈ ವಿಷಯದಲ್ಲಿ ಸದಸ್ಯರಿಗೆ ಸಂಘದ ಆಡಳಿತ ಮಂಡಲಿ ತಪ್ಪು ಮಾಹಿತಿಯನ್ನೇ ನಿಡುತ್ತಾ ಬಂದಿದೆ ಎಂದು ಆರೋಪಿಸಿದರು.
ಪ್ರಾಮಾಣಿಕವಾಗಿ ಚುನಾವಣೆ ಎದುರಿಸುತ್ತೇವೆ: ಸಂಘದ ಚುನಾವಣೆ ವ್ಯಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಅಸಹ್ಯ ಮೂಡಿದೆ, ನಮ್ಮ ಸಮುದಾಯದ ಮಠಾಧೀಶರು, ಹಿರಿಯ ರಾಜಕಾರಣಿಗಳು, ಮುತ್ಸದ್ದಿಗಳು ಅಸಹ್ಯ ಪಡುವಂತಹ ಪರಿಸ್ಥಿತಿ ನಿರ್ಮಾಣ ಗೊಂಡಿದೆ. ಆದರೆ ನಾಮ್ಮ ಸಿಂಡಿಕೇಟ್ ಇಂತಹ ದುಂದು ವೆಚ್ಚಗಳನ್ನು ಮಾಡದೆ ತೀರಾ ಅಗತ್ಯ ಖರ್ಚುಗಳನ್ನು ಮಾತ್ರ ಮಾಡುತ್ತಿದ್ದು  ನಾವು ಮಾಡುವ ಖರ್ಚಿನ ವಿವರವನ್ನು ಸದಸ್ಯರಿಗೆ ನಮ್ಮ ಕರಪತ್ರದಲ್ಲಿ ಅದಾಗಲೇ ತಿಳಿಸಿದ್ದೇವೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಮೇದುವಾರ ಡಾ. ಶಿವಕುಮಾರ್ ಸಂಘವನ್ನು ಸಮುದಾಯದ ಪ್ರಗತಿಗೆ ದನಿಯಾಗಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ನಮ್ಮ ತಂಡ ಕಣಕ್ಕಿಳಿಯುತ್ತಿದ್ದು, ಹಿಂದಿನ ಆಡಳಿತ ಮಂಡಲಿಯ ಎಡವಟ್ಟುಗಳನ್ನು ಸರಿಪಡಿಸಿ ವಿಶ್ವಾಸಾರ್ಹ ಆಡಳಿತ ನಡೆಸುವುದೇ ನಮ್ಮ ಗುರಿ ಎಂದರು.
ಸಂಘದ ಉಮೇದುವಾರರಾದ ಸಿ.ಪ್ರಭು, ಎಚ್.ಆರ್. ಪದ್ಮನಾಭ, ವೆಂಕಟಸ್ವಾಮಿ, ನಾಗವಾರ ರಂಗಸ್ವಾಮಿ, ಕೂಡ್ಲೂರು ವೆಂಕಟೇಶ್, ಚಕ್ಕೆರೆ ನಾಗರಾಜು (ಎಲ್‌ಐಸಿ) ಮುಂತಾದವರು  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.