ಚಳಿಗಾಲ ಆರಂಭದಲ್ಲೇ ವಿದ್ಯುತ್ ಕಣ್ಣಾಮುಚ್ಚಾಲೆ
-ಮತ್ತೀಕೆರೆ ಜಯರಾಮ್
ರಾಮನಗರ: ಮಳೆಗಾಲ ಮುಗಿದು ಚಳಿಗಾಲದ ಆರಂಭದಲ್ಲೇ ರಾಮನಗರ ಜಿಲ್ಲಾದ್ಯಂತ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ. ಬೆಸ್ಕಾಂನ ಅಘೋಷಿತ ಲೋಡ್ ಶೆಡ್ಡಿಂಗ್ ಪರಿಣಾಮ ನಾಗರಿಕರು, ಕೊಳವೆ ಬಾವಿ ಆಶ್ರಿತ ರೈತರು, ಪರೀಕ್ಷೆ ಹೊಸ್ತಿಲಲ್ಲಿರುವ ವಿದ್ಯಾರ್ಥಿಗಳು ಯಾತನೆ ಅನುಭವಿಸುತ್ತಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದಲೇ ವಿದ್ಯುತ್ ಸಮಸ್ಯೆ ಹೆಚ್ಚಿದೆ. ಇದು, ಮುಂಬರುವ ಬೇಸಿಗೆಯಲ್ಲಿ ವಿದ್ಯುತ್ ಅಭಾವ ಮತ್ತಷ್ಟು ತೀವ್ರವಾಗುವ ಮುನ್ಸೂಚನೆಯಾಗಿದೆ. ರಾಮನಗರ ಮಾತ್ರವಲ್ಲದೆ ಇಡೀ ರಾಜ್ಯವನ್ನು ಕತ್ತಲು ಆವರಿಸುವ ಆತಂಕ ಕಾಡುತ್ತಿದೆ.
ರಾಮನಗರ ಮತ್ತು ಚನ್ನಪಟ್ಟಣ ಅವಳಿ ನಗರಗಳಲ್ಲಿ ಈಗಾಗಲೇ 3 ರಿಂದ 4 ತಾಸು, ಮಾಗಡಿ ಮತ್ತು ಕನಕಪುರ ಪಟ್ಟಣಗಳು, ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ 4 ರಿಂದ 5 ತಾಸು, ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ವಿದ್ಯುತ್ ಕಡಿತ ಜಾರಿಗೊಳಿಸಲಾಗಿದೆ.
ಅರ್ಧದಷ್ಟು ಸರಬರಾಜು: ರಾಮನಗರ ಜಿಲ್ಲೆಯ 4 ತಾಲೂಕುಗಳಿಂದ ದಿನವಹಿ ವಿದ್ಯುತ್ ಬೇಡಿಕೆ ಪ್ರಮಾಣ 175 ಮೆಗಾ ವ್ಯಾಟ್ ಆಗಿದೆ. ಆದರೆ, ಪ್ರಸ್ತುತ ಸರಬರಾಜಾಗುತ್ತಿರುವುದು ಸರಾಸರಿ 80 ರಿಂದ 90 ಮೆಗಾ ವ್ಯಾಟ್ ವಿದ್ಯುತ್ ಮಾತ್ರವೇ. ಹೀಗಾಗಿ ಸಮಸ್ಯೆ ಉಲ್ಬಣಿಸಿದೆ. ರಾಮನಗರ ನಗರಸಭೆ ವ್ಯಾಪ್ತಿಯೂ ಸಹಿತ ತಾಲೂಕಿನ ಗ್ರಾಮೀಣ ಭಾಗ, ಬಿಡದಿ ಕೈಗಾರಿಕಾ ಪ್ರದೇಶವನ್ನು ಒಳಗೊಂಡಂತೆ ವಿದ್ಯುತ್ ಪೂರೈಸುವ ವಿತರಣಾ ಘಟಕ ಬಿಡದಿಯಲ್ಲಿದೆ. ಚನ್ನಪಟ್ಟಣ ಮತ್ತು ಕನಕಪುರ ತಾಲೂಕುಗಳಿಗೆ ವಿದ್ಯುತ್ ಪೂರೈಕೆ ಮಾಡುವ ಘಟಕ ಕನಕಪುರದಲ್ಲಿದೆ.
ಉಭಯ ಘಟಕಗಳ ಬೇಡಿಕೆ ಪ್ರಮಾಣ 130 ಮೆಗಾ ವ್ಯಾಟ್ ಆಗಿದ್ದು, ಪೂರೈಕೆ 60 ರಿಂದ 70 ಮೆಗಾ ವ್ಯಾಟ್ ಆಗಿದೆ. ಇನ್ನು ಮಾಗಡಿ ತಾಲೂಕು ನೆಲಮಂಗಲ ವಿತರಣಾ ಘಟಕಕ್ಕೆ ಸೇರಿದ್ದು, ಆ ತಾಲೂಕಿಗೆ ನಿತ್ಯ 45 ಮೆಗಾ ವ್ಯಾಟ್ ಬೇಡಿಕೆ ಇದೆ. ಅಲ್ಲಿಗೂ ಸರಬರಾಜು 20-25 ಮೆಗಾ ವ್ಯಾಟ್ ಮಾತ್ರವೇ.
ಕೊರತೆಗೆ ಸಕಾರಣವಿಲ್ಲ: ಹೊಸದಾಗಿ ವಿದ್ಯುತ್ ಉತ್ಪಾದನಾ ಕೇಂದ್ರಗಳ ನಿರ್ಮಾಣ, ಸ್ಥಾವರಗಳ ಸ್ಥಾಪನೆ, ಸೋರಿಕೆ ಮತ್ತು ಕಳವು ತಡೆ, ಸಿಂಗಲ್ಫೇಸ್ನಲ್ಲಿ ಕೃಷಿ ಪಂಪ್ ಸೆಟ್ಗಳು ಚಲಿಸದಂತೆ ಓಪನ್ ಡೆಲ್ಟಾ ವ್ಯವಸ್ಥೆ ಜಾರಿ ಬಳಿಕವೂ ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೋರಿರುವುದು ವಿಪರ್ಯಾಸದ ಸಂಗತಿ.
ರಾಜ್ಯದ ಬಹುತೇಕ ಜಲಾಶಯಗಳಲ್ಲಿ ಇನ್ನೂ ಸಾಕಷ್ಟು ನೀರು ಶೇಖರಣೆಯಾಗಿದ್ದು, ಜಲ ವಿದ್ಯುತ್ ಘಟಕಗಳು ಉತ್ಪಾದನೆ ಮುಂದುವರೆಸಿವೆ. ಹೊಸ ಗ್ರಿಡ್ ಸ್ಥಾಪನೆಯೊಂದಿಗೆ ಕೇಂದ್ರದಿಂದ ರಾಜ್ಯದ ಪಾಲಿನ ವಿದ್ಯುತ್ ಪೂರೈಕೆಗೂ ಸರ್ಕಾರ ಕ್ರಮ ಕೈಗೊಂಡಿದೆ.
ಇಷ್ಟಾಗಿಯೂ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು ಆಗುತ್ತಿಲ್ಲ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ನೀಡುವ ಕಾರಣ ಅರ್ಥವಿಲ್ಲದ್ದಾಗಿದೆ. ಸಕಾರಣವನ್ನೇ ನೀಡದೆ ಜನರನ್ನು ದಿಕ್ಕುತಪ್ಪಿಸುವ ಕೆಲಸವಾಗುತ್ತಿದೆಯೇ ಎನ್ನುವ ಅನುಮಾನ ಸಹಜವಾಗಿಯೇ ಕಾಡುತ್ತಿದೆ.
ಪರೀಕ್ಷೆ ಹೊಸ್ತಿಲಲ್ಲಿ ಸಮಸ್ಯೆ: ವಿದ್ಯಾರ್ಥಿಗಳು ಇನ್ನೇನು ಪರೀಕ್ಷೆಯ ಹೊಸ್ತಿಲಲ್ಲಿದ್ದಾರೆ. 2-3 ತಿಂಗಳಲ್ಲಿ ಬರುವ ಪರೀಕ್ಷೆಗೆ ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದಾರೆ. ಈ ಹಂತದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಪ್ರಾರಂಭವಾಗಿದ್ದು, ಅವರ ಭವಿಷ್ಯದ ಜತೆ ಚೆಲ್ಲಾಟ ನಡೆಯುತ್ತಿದೆ.
ಹೇಳಿ ಕೇಳಿ ರಾಮನಗರ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶ ತೀವ್ರ ಕುಸಿತ ಕಂಡಿದೆ. ಫಲಿತಾಂಶದಲ್ಲಿ ಜಿಲ್ಲೆಯನ್ನು ಮೇಲೆತ್ತಲು ನಡೆಸುತ್ತಿರುವ ಪ್ರಯತ್ನಗಳಿಗೆ ಅಘೋಷಿತ ಲೋಡ್ ಶೆಡ್ಡಿಂಗ್ ಹಿನ್ನಡೆಯಾಗಿದೆ.
ಪಾಳಿಯಲ್ಲೂ ಬದಲಾವಣೆ: ಗ್ರಾಮೀಣ ಪ್ರದೇಶದಲ್ಲಿ ನಿತ್ಯ 6 ತಾಸು ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಅಸಲಿಗೆ ಒಟ್ಟಾರೆ ವಿದ್ಯುತ್ ನೀಡುತ್ತಿರುವುದು 4 ರಿಂದ 5 ತಾಸು ಮಾತ್ರ. ಹಗಲು 4 ತಾಸು ಮತ್ತು ರಾತ್ರಿ 2 ತಾಸು ಎಂದು ನಿಗದಿಪಡಿಸಿದ್ದರೂ ರಾತ್ರಿ ಪಾಲನ್ನು ಬೆಸ್ಕಾಂ ಕಡಿತಗೊಳಿಸಿದೆ. ಹಗಲು ಮತ್ತು ರಾತ್ರಿ ತಲಾ 3 ಪಾಳಿಯನ್ನು ವಾರಕ್ಕೊಮ್ಮೆ ಬದಲಿಸಬೇಕು. ಇಲ್ಲೂ ಲಾಬಿಯಿದ್ದು, ಅಧಿಕಾರಿಗಳು ಬೇಕಾಬಿಟ್ಟಿ ಬದಲಾವಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ
ರಾಮನಗರ, ಚನ್ನಪಟ್ಟಣ, ಕನಕಪುರಕ್ಕೆ ಕಾವೇರಿ ಕುಡಿಯುವ ನೀರು ಪೂರೈಸುವ ಯೋಜನೆ ಅವಲಂಬಿಸಿರುವುದೇ ವಿದ್ಯುತ್ ಚಾಲಿತ ಮೋಟಾರ್ ಪಂಪ್ಗಳನ್ನು. ಇನ್ನು ಈ ಜಿಲ್ಲೆಯ ಬಹುಪಾಲು ಗ್ರಾಮೀಣ ಪ್ರದೇಶವು ಕೊಳವೆ ಬಾವಿಗಳ ನೀರನ್ನು ಆಶ್ರಯಿಸಿದೆ. ಆಗಾಗ್ಗೆ ವಿದ್ಯುತ್ ಕಡಿತ ಮತ್ತು ಅಸಮರ್ಪಕ ಪೂರೈಕೆಯಿಂದ ಕುಡಿಯುವ ನೀರು ಸರಬರಾಜಿನ ಮೇಲೆ ಸಹಜವಾಗಿಯೇ ಪ್ರತಿಕೂಲ ಪರಿಣಾಮ ಬೀರಲಿದೆ. ಬೇಸಿಗೆಗೆ ಮುನ್ನವೇ ಜಲಕ್ಷಾಮ ಎದುರಾಗುವ ಭೀತಿ ರಾಮನಗರ ಜಿಲ್ಲೆಯನ್ನು ಕಾಡಲಾರಂಭಿಸಿದೆ. ಕಳೆದೆರಡು ವರ್ಷ ಭೀಕರ ಬರದಿಂದ ಜಿಲ್ಲೆ ರೈತರು ಕಂಗಾಲಾಗಿದ್ದಾರೆ. ಸ್ವತಃ ಜಿಲ್ಲಾಡಳಿತವೇ ಗುರುತಿಸಿದ್ದ ಪ್ರಕಾರ ಶೇ.60ರಷ್ಟು ಹಳ್ಳಿಗಳಲ್ಲಿ ನೀರಿನ ಬವಣೆ ಎದುರಾಗಿತ್ತು. ಈಗಲೂ ಕಳೆದ ಬೇಸಿಗೆಯಂತೆಯೇ ಟ್ಯಾಂಕರ್ ನೀರನ್ನೇ ಅವಲಂಬಿಸುವ ದುಸ್ಥಿತಿ ಎದುರಾಗಲಿದೆ.
ಬೇಡಿಕೆಯಷ್ಟು ಸರಬರಾಜಿಲ್ಲ
ಮಾಗಡಿ ಹೊರತುಪಡಿಸಿ ರಾಮನಗರ ಜಿಲ್ಲೆಯ ಉಳಿದ 3 ತಾಲೂಕುಗಳಿಗೆ ನಿತ್ಯ 130 ಮೆ.ವ್ಯಾ. ವಿದ್ಯುತ್ ಬೇಡಿಕೆಯಿದೆ. ಪೂರೈಕೆ ಆಗುತ್ತಿರುವುದು 60-70 ಮೆ.ವ್ಯಾ. ಮಾತ್ರ. ಹೀಗಾಗಿ ವಿದ್ಯುತ್ ಕಡಿತ ಅನಿವಾರ್ಯವಾಗಿದೆ.
-ರಮೇಶ್,ಇಇ, ಬೆಸ್ಕಾಂ, ರಾಮನಗರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

