ನಗರಾಭಿವೃದ್ಧಿಗೆ ಕಾಂಗ್ರೆಸ್ ಬದ್ಧ: ಶಾಸಕ ಟಿ.ವೆಂಕಟರಮಣಯ್ಯ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದಲ್ಲಿ ತೀವ್ರವಾಗಿದ್ದ ಕುಡಿಯುವ ನೀರಿನ ಅಭಾವ ಈಗ ಕೊಂಚ ತಗ್ಗಿದೆ. ನಗರ ವ್ಯಾಪ್ತಿಯಲ್ಲೇ 25ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಜಕ್ಕಲ ಮಡಗು ನೀರು ಕೂಡ ಲಭ್ಯವಾಗುತ್ತಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಇಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಸಲುವಾಗಿ ಹಲವು ವಾರ್ಡ್‌ಗಳಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದೆ. ನಗರಾಭಿವೃದ್ಧಿ ಯೋಜನೆಯಡಿ ಈಗಾಗಲೇ 15 ಕೋಟಿ ಬಿಡುಗಡೆಯಾಗಿದೆ. ಸರ್ಕಾರದ ಮೇಲೆ ಒತ್ತಡ ತಂದು ಹಲವು ಯೋಜನೆಗಳನ್ನು ಪಡೆಯಲಾಗುತ್ತಿದೆ. ರಸ್ತೆಗಳ ದುರಸ್ಥಿ ಮತ್ತು ಡಾಂಬರೀಕರಣ, ಚರಂಡಿಗಳ ನಿರ್ಮಾಣ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳು ಸದ್ಯದಲ್ಲೇ ಆರಂಭವಾಗಲಿವೆ ಎಂದು ಅವರು ವಿವರಿಸಿದರು.
ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆ ನಮ್ಮ ಪರಿಶ್ರಮದಿಂದ ಮತ್ತೆ ಆರಂಭವಾಗಲಿದೆ. ಸದ್ಯದಲ್ಲೇ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಅದೇ ರೀತಿ ನಗರದಲ್ಲಿ ಕಾನೂನು-ಸುವ್ಯವಸ್ಥೆ, ಟ್ರಾಫಿಕ್ ಸಮಸ್ಯೆಗಳ ನಿವಾರಣೆಗೆ ಪೊಲೀಸರೊಂದಿಗೆ ಚರ್ಚಿಸಲಾಗಿದೆ. ಬಸ್ ನಿಲ್ದಾಣ, ಆಸ್ಪತ್ರೆ ಸೇರಿದಂತೆ ಎಲ್ಲವುಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದ್ದು, ಹಂತ ಹಂತವಾಗಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
1 ವಾರದ ಕಾಲ ನಡೆಯುತ್ತಿರುವ ಜನ ಸಂಪರ್ಕಸಭೆಯಲ್ಲಿ ಸೋಮವಾರ ವಾಡ್ ನಂ.3,5,6,26 ಮತ್ತು 25ರಲ್ಲಿ, ಮಂಗಳವಾರ ವಾರ್ಡ್ ನಂ 23, 24, 4, 2 ಮತ್ತು 27ರಲ್ಲಿ ಸಭೆಗಳು ನಡೆದವು. ಸಾರ್ವಜನಿಕರು ಮೂಲಸೌಕರ್ಯಗಳ ಕುರಿತು ಅನೇಕ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಅಭದ್ರತೆ ಬಗ್ಗೆ ಗಮನ ಸೆಳೆದರು. ಶಾಸಕರು ಏನೇ ಹೇಳಿದರೂ ನೀರಿನ ಸಮಸ್ಯೆ ದೊಡ್ಡಬಳ್ಳಾಪುರದ ಜನರನ್ನು ಬಾಧಿಸುತ್ತಿರುವುದು ಸುಳ್ಳಲ್ಲ ಎಂಬುದಕ್ಕೆ ಸಾರ್ವಜನಿಕರ ದೂರುಗಳೇ ಸಾಕ್ಷಿಯಾಗಿದ್ದವು. ಬುಧವಾರ ವಾರ್ಡ್ ನಂ.28, 1, 31, 30 ಮತ್ತು 29ರಲ್ಲಿ ಜನ ಸಂಪರ್ಕ ಸಭೆಗಳು ನಡೆಯಲಿವೆ.
ನಗರಸಭೆ ಆಯುಕ್ತ ಬಿಳಿಕೆಂಚಪ್ಪ, ವಾರ್ಡ್‌ಗಳಲ್ಲಿ ಸ್ಥಳೀಯ ನಗರಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರು, ಸಂಘಟನೆಗಳ ಕೆಲ ಕಾರ್ಯಕರ್ತರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

