ಬೆಂ.ಗ್ರಾ ಸಂಸದ ಡಿ.ಕೆ.ಸುರೇಶ್ ಅದ್ಧೂರಿ ಜನ್ಮದಿನಾಚರಣೆ
ಕನಕಪುರ: ಬೆಂ.ಗ್ರಾ ಸಂಸದ ಡಿ.ಕೆ.ಸುರೇಶ್ರ 48ನೇ ಜನ್ಮದಿನಾಚರಣೆಯನ್ನು ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸ್ನೇಹಿತರು ವಿಜೃಂಭಣೆಯಿಂದ ಆಚರಿಸಿದರು.
ತಮ್ಮ ನಾಯಕನ ಜನ್ಮದಿನಾಚರಣೆಯನ್ನು ಕನಕಪುರ ತಾಲೂಕಿನ ಮಳಗಾಳಿನ ಈಶ್ವರ, ಕೆಂಕೇರಮ್ಮ,ಶಿವಗಿರಿ, ಹಾರೋಹಳ್ಳಿ, ಸಾತನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿಯ ದೇವಾಲಯಗಳಲ್ಲಿ ವಿಶೇಷ ಪೂಜೆಸಲ್ಲಿಸಿ, ಸಾವಜನಿಕರಿಗೆ ಸಿಹಿ ಹಂಚಿ ಆಚರಿಸಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವಿ. ಶ್ರೀನಿವಾಸ್, ವಿಪ ಮಾಜಿ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯದೇವ್, ಕೆ.ಎನ್.ದಿಲೀಪ್, ಐನೋರ್ ಮಹೇಶ್, ಮರಸಪ್ಪರವಿ, ಭೈರವೇಶ್ವರ ರಾಜು, ತೇಜಸ್ವಿನಿ ಕಾಂತರಾಜು, ವೆಂಕಟೇಶಪ್ಪ, ಏಳಗಳ್ಳಿ ರವಿ, ಹೊರಳಗಲ್ಲು ರಮೇಶ್, ನ್ಯಾಯವಾದಿ ರಾಮಚಂದ್ರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ
ಕನಕಪುರ: ರಾಮನಗರದ ಸಂಜೀವಿನಿ ಟ್ರಸ್ಟ್ ವತಿಯಿಂದ ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭ
ಕನಕಪುರ ತಾ. ಕೋಡಿಹಳ್ಳಿಯ ಶ್ರೀಮತಿ ಗೌರಮ್ಮ ಕೆಂಪೇಗೌಡ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ನಡೆಯಿತು.
ಸಂಜೀವಿನಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಿ. ಆನಂದ್ ಹಾಗೂ ಪ್ರಾಂಶುಪಾಲ ಎಲ್ಲಾರೆಡ್ಡಿಯವರು ಜಿಲ್ಲೆಯ ಖ್ಯಾತ ಜಾನಪದ ಗಾಯಕರಾದ ತಿಮ್ಮೇಗೌಡನದೊಡ್ಡಿ ಮಾಯಮ್ಮನವರಿಗೆ ಸೋಬಾನೆ ಸಿರಿ ಪ್ರಶಸ್ತಿ ಹಾಗೂ ಕರಿಯಪ್ಪನದೊಡ್ಡಿಯ ಮಲ್ಲಯ್ಯನವರಿಗೆ ಜಾನಪದ ಗಾನಗಾರುಡಿಗ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಉಪನ್ಯಾಸಕ ಧರಣೀಶ್ ಮಾತನಾಡುತ್ತಾ, ಹಳೇ ಮೈಸೂರು ಪ್ರಾಂತ್ಯದ ಜಾನಪದ ಸೊಗಡನ್ನು ಅರಿತು, ಜಾನಪದ ಕಲೆ ಸಂಸ್ಕೃತಿಗಳ ಸಾರವನ್ನು ಗಾಯನದ ಮೂಲಕ ಪಸರಿಸುತ್ತಾ ಇಂದಿಗೂ ಜೀವಂತವಾಗಿ ಉಳಿಸಲು ಶ್ರಮಿಸುತ್ತಿರುವ ಕಲಾವಿದರನ್ನು ಟ್ರಸ್ಟ್ ಗೌರವಿಸಿ ಉತ್ತಮ ಕಾರ್ಯ ನಡೆಸಿದೆ ಎಂದು ಹೇಳಿದರು. ಸಮಾರಂಭದಲ್ಲಿ ಪ್ರೊ.ಎನ್.ಪಿ.ಕೃಷ್ಣಮೂರ್ತಿ, ಪ್ರೊ. ಚೂಡಲಿಂಗಯ್ಯ, ಉಪನ್ಯಾಸಕ ಮಂಜುನಾಥ್, ಟ್ರಸ್ಟ್ ಖಜಾಂಚಿ ಸರ್ವಮಂಗಳ ಪಾಲ್ಗೊಂಡಿದ್ದರು.
ಬ್ಯಾಂಕ್ ನೌಕರರ ಮುಷ್ಕರಕ್ಕೆ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ
ರಾಮನಗರ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರವ್ಯಾಪಿ ನಡೆದ ಬ್ಯಾಂಕ್ ನೌಕರರ ಮುಷ್ಕರಕ್ಕೆ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಿಬ್ಬಂದಿ ಮುಷ್ಕರದ ಪರಿಣಾಮ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಬಿಡದಿ, ಹಾರೋಹಳ್ಳಿ ಸೇರಿದಂತೆ ಜಿಲ್ಲಾದ್ಯಂತ ಇರುವ ಇನ್ನೂರಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳು ಮುಚ್ಚಿದ್ದವು. ಮುಷ್ಕರದ ಮಾಹಿತಿ ಇಲ್ಲದೆ ಹಣಕಾಸು ವ್ಯವಹಾರ ಸಂಬಂಧ ಬ್ಯಾಂಕುಗಳಿಗೆ ಬಂದ ಗ್ರಾಹಕರು ಕದ ಮುಚ್ಚಿದ್ದನ್ನು ನೋಡಿಕೊಂಡು ವಾಪಸಾದರು. ಸಹಕಾರ, ಸ್ಥಳೀಯ ಬ್ಯಾಂಕುಗಳು ಎಂದಿನಂತೆ ಕೆಲಸ ನಿರ್ವಹಿಸಿದವು.
ಬೀಗ ಒಡೆದು ಹಣ ದರೋಡೆ
ಮಾಗಡಿ: ಯಾರೋ ದುಷ್ಕರ್ಮಿಗಳು ಮಾಗಡಿ ಪಟ್ಟಣದ ರಾಮರಾಜ ಅರಸು ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಬಳಿ ಇರುವ ಶ್ರೀವಾಸವಿ ಟ್ರೇಡರ್ಸ್ ಸಗಟು ಅಂಗಡಿ ಮಳಿಗೆಯ ಬೀಗ ಒಡೆದು ಲಾಕರ್ನಲ್ಲಿದ್ದ 49 ಸಾವಿರ ರು. ಗಳನ್ನು ದರೋಡೆ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶ್ರೀವಾಸವಿ ಟ್ರೇಡರ್ಸ್ ಮಾಲೀಕ ಎಸ್. ಸುನೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆಗ್ರಹ: ರಾತ್ರಿ ವೇಳೆ ಪೊಲೀಸ್ ಬೀಟ್ ಇಲ್ಲದ ಕಾರಣ ಆಗಾಗ್ಗೆ ಪಟ್ಟಣದ ಅಂಗಡಿ ಮಳಿಗೆಗಳ ಮೇಲೆ ದುಷ್ಕರ್ಮಿಗಳು ಸಂಚು ಹಾಕಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ರಾತ್ರಿ ವೇಳೆ ಪಟ್ಟಣದಲ್ಲಿ ಪೊಲೀಸರು ಗಸ್ತು ಹಾಕುವಂತೆ ಅಂಗಡಿಗಳ ಮಾಲೀಕರು ಪೊಲೀಸರಲ್ಲಿ ಮನವಿ ಮಾಡಿ ಆಗ್ರಹಿಸಿದ್ದಾರೆ.
ಯುವ ನಾಯಕತ್ವ ತರಬೇತಿ ಶಿಬಿರ
ನೆಲಮಂಗಲ: ಪಟ್ಟಣದ ಪವಾಡ ಬಸವಣ್ಣ ದೇವರ ಮಠದಲ್ಲಿ ದಿ ಆರ್ಟ್ ಆಫ್ ಲೀವಿಂಗ್ ವತಿಯಿಂದ 18 ರಿಂದ 40 ವಯಸ್ಸಿನೊಳಗಿನ ಯುವಕ ಯುವತಿಯರಿಗೆ ಡಿ. 20 ಶುಕ್ರವಾರ ಸಂಜೆ 6-30 ರಿಂದ 8-00 ಗಂಟೆ ವರೆಗೆ ಮತ್ತು ಡಿ. 22ರ ಭಾನುವಾರದಿಂದ ಡಿ. 30ರ ಸೋಮವಾರದವರೆಗೆ ದಾಸನಪುರ ಗ್ರಾಮ ಉಭಯ ವೇದಾಂತ ಶ್ರೀ ವೈಷ್ಣವ ಮಹಾ ಸಭಾದಲ್ಲಿ ಯುವ ನಾಯಕತ್ವ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಹತೆ ಪಿಯುಸಿ ಅಥವಾ ಯಾವುದಾದರು ಸ್ನಾತಕೋತ್ತರ ಪದವಿ ಆಗಿರಬೇಕು. ತರಬೇತಿಯಲ್ಲಿ ಹೇಳಿ ಕೊಡುವ ವಿಷಯಗಳು ಯೋಗ, ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯೆ, ಸಂಘಟನೆ ಮತ್ತು ಸಂವಹನ ಕೌಶಲ್ಯ, ಗ್ರಾಮೀಣಾಭಿವೃದ್ಧಿ, ಮಾದರಿ ಗ್ರಾಮದ ಸ್ಥಾಪನೆ, ಆರ್ಟ್ ಆಫ್ ಲೀವಿಂಗ್ ಹಿರಿಯ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಗ್ಯ ಉಚಿತ ತಪಾಸಣಾ ಶಿಬಿರ
ಆನೇಕಲ್ಲು: ಕರ್ನಾಟಕ ರೆಡ್ಡಿ ಯುವಕ ಸಂಘದ ಸಂಸ್ಥಾಪಕ ಆರ್. ರಮೇಶ್ ರೆಡ್ಡಿ(ಬಾವಾ) ಅವರ 2ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ, ಅನಾಥಾಶ್ರಮ ಮಕ್ಕಳಿಗೆ ವಸ್ತ್ರ ಹಾಗೂ ಪರಿಕರಗಳ ವಿತರಣೆ ಮತ್ತು ರಕ್ತ ದಾನ ಶಿಬಿರವನ್ನು ಡಿ.18 ಬುಧವಾರ ಬೆಳಗ್ಗೆ ಮರಸೂರಿನ ಸರ್ಕಾರಿ ಶಾಲಾ ಆವರಣದಲ್ಲಿ ಬೆ. 10 ಗಂಟೆಗೆ ಏರ್ಪಡಿಸಿದ್ದು ತಾಲೂಕಿನ ಜನತೆ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದು ಗ್ರಾಪಂ ಅಧ್ಯಕ್ಷ ಸೋಮಶೇಖರ ರೆಡ್ಡಿ, ಸಂಪತ್ಕುಮಾರ್ ತಿಳಿಸಿದ್ದಾರೆ.
ನಾಳೆಯಿಂದ ದೀಪೋತ್ಸವ
ಹೊಸಕೋಟೆ: ತಾಲೂಕಿನ ಉಪ್ಪಾರಹಳ್ಳಿಯಲ್ಲಿನ ಶ್ರೀ ಮದ್ದೂರಮ್ಮ ದೇವಿ, ಚೌಡೇಶ್ವರಿ ದೇವಿ ಜಾತ್ರೆ, ದೀಪೋತ್ಸವ ಕಾರ್ಯಕ್ರಮಗಳು ಡಿ.20 ರಿಂದ ಪ್ರಾರಂಭಗೊಂಡು ಡಿ.29 ಕ್ಕೆ ಮುಕ್ತಾಯಗೊಳ್ಳಲಿವೆ. ತಾಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಸುಗಳಿಗೆ ಕಾಲುಬಾಯಿ ರೋಗ ಹರಡಿರುವ ಕಾರಣದಿಂದಾಗಿ ರಾಸುಗಳ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.
ನಾಳೆ ನಗೆಹಬ್ಬ ಕಾರ್ಯಕ್ರಮ
ಚನ್ನಪಟ್ಟಣ: ಪಟ್ಟಣದ ವಿಶ್ವದರ್ಶನಿ ಸೇವಾಸಂಸ್ಥೆ ವತಿಯಿಂದ ನಗೆಹಬ್ಬ ಕಾರ್ಯಕ್ರಮವನ್ನು ಪಟ್ಟಣದ ನಗರಸಭಾ ಆವರಣದಲ್ಲಿ ಶುಕ್ರವಾರ ಹಮ್ಮಿ ಕೊಳ್ಳಲಾಗಿದೆ. ರಿಚರ್ಡ್ ಲೂಯಿಸ್ ತಂಡ ನಗೆಹಬ್ಬ ಕಾರ್ಯಕ್ರಮ ನಡೆಸಿಕೊಡಲಿದ್ದು ಕಾರ್ಯಕ್ರಮದಲ್ಲಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಯು.ಪಿ. ಧರಣೀಶ್ ತಿಳಿಸಿದ್ದಾರೆ.
ಅಟಲ್ ಹುಟುಹಬ್ಬ: 21 ರಿಂದ ಕ್ರಿಕೆಟ್ ಟೂರ್ನಿ
ಹೊಸಕೋಟೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟುಹಬ್ಬದ ಪ್ರಯುಕ್ತ ತಾಲೂಕು ಬಿಜಿಪಿ ವತಿಯಿಂದ ಡಿ.21 ರಿಂದ 3 ದಿನಗಳು ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. 26 ಗ್ರಾಮ ಪಂಚಾಯಿತಿಗಳಿಂದ ತಲಾ 3 ತಂಡಗಳು ಪಟ್ಟಣದ 23 ವಾರ್ಡ್ಗಳಿಂದ ತಲಾ 1 ತಂಡಕ್ಕೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದೆ. ವಿಜೇತರಿಗೆ ಪ್ರಥಮ ಬಹುಮಾನ 25,000 ರು., ದ್ವಿತೀಯ ಬಹುಮಾನ 15,000 ರು., ತೃತೀಯ ಬಹುಮಾನ 10,000 ರು. ನೀಡಲಾಗುವುದು. ನೋಂದಣಿ ಮತ್ತು ಹೆಚ್ಚಿನ ವಿವರಗಳಿಗೆ ಆರ್. ಮುನಿನಂಜಪ್ಪ 9845852661 ಸಂಪರ್ಕಿಸಬಹುದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಸಿ. ಮುನಿಯಪ್ಪ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

