ಜೆಡಿಎಸ್ಸದಸ್ಯರು-ಅಧಿಕಾರಿ ತೀವ್ರ ವಾಗ್ವಾದ
ಕ.ಪ್ರ.ವಾರ್ತೆ ರಾಮನಗರ ಡಿ.19
ಕಾಡುತ್ತಿರುವ ಭೀಕರ ಬರ, ಬೇಸಿಗೆಗೆ ಮುನ್ನವೇ ಉಲ್ಬಣಿಸಿರುವ ಕುಡಿಯುವ ನೀರಿನ ಬವಣೆಯ ವಿಷಯವಾಗಿ ಗುರುವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯರು ಹಾಗೂ ಅಧಿಕಾರಿ ನಡುವಿನ ವಾಗ್ವಾದ ನಡೆಯಿತು.
ತಮ್ಮ ಅಧಿಕಾರಾವಧಿಯಲ್ಲಿ ಜರುಗಿದ ಚೊಚ್ಚಲ ಸಭೆಯಲ್ಲಿ ಸದಸ್ಯರು ಮತ್ತು ಅಧಿಕಾರಿ ನಡುವೆ ತಾರಕಕ್ಕೇರಿದ ಚರ್ಚೆಗೆ ಅಂತ್ಯಹಾಡಲು ತಾ.ಪಂ. ನೂತನ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಹರಸಾಹಸವನ್ನೇ
ನಡೆಸಬೇಕಾಯಿತು. ಸುಮಾರು 1 ತಾಸು ಸಭೆ ಗೊಂದಲಮಯವಾಯಿತು.
ಸಭೆ ಪ್ರಾರಂಭಗೊಳ್ಳುತ್ತಿದ್ದಂತೆಯೇ ನೀರಿನ ವಿಷಯದಲ್ಲಿ ಚರ್ಚೆಗೆ ಇಳಿದ ಜೆಡಿಎಸ್ ಸದಸ್ಯ ಎಚ್. ಶಿವಪ್ರಸಾದ್ ಅವರು ಬೇಜವಾಬ್ದಾರಿ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಸ್ವಪಕ್ಷೀಯ ಸದಸ್ಯರು ಧ್ವನಿಗೂಡಿಸಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಇಂತಹ ಸಾಮಾನ್ಯ ಸಭೆಗಳು ಕಾಟಾಚಾರದ್ದಾಗಿವೆ. ನಾವೆಷ್ಟೇ ಕೂಗಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗ್ರಾಮ ಸಭೆಗಳಿಗೂ ಅಧಿಕಾರಿಗಳು ಗೈರಾಗುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಎಇ ನೀತಿ ಪಾಠ: ಅಧ್ಯಕ್ಷರ ಅಪ್ಪಣೆ ಮೇರೆಗೆ ಉತ್ತರಿಸಲು ನಿಂತ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಶ್ರೀನಿವಾಸ್, ತಮ್ಮದೇ ಮಾಮೂಲು ಶೈಲಿಯಲ್ಲಿ ಸದಸ್ಯರಿಗೇ ನೀತಿಪಾಠ ಹೇಳಲು ಶುರುವಿಟ್ಟುಕೊಂಡರು.
ತಾಲೂಕಿನ 75ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. 32 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲವೆನ್ನುವ ಆರೋಪ ನಿರಾಧಾರ ಎಂದು ತೀಕ್ಷ್ಣವಾಗಿ ಹೇಳಿದರು.
ಇದರಿಂದ ಕೆರಳಿದ ಸದಸ್ಯ ಶಿವಪ್ರಸಾದ್ ಅವರು ಹಳ್ಳಿಗಳಲ್ಲಿ ಈ ಹಿಂದೆ ಕೊರೆದಿರುವ ಕೊಳವೆ ಬಾವಿಗಳಿಗೆ ಅಳವಡಿಸಿರುವ ಮೋಟಾರ್ ಪಂಪ್ಗಳಿಗೆ ಮತ್ತೆ ಇನ್ನೂ ಬಿಲ್ ಮಂಜೂರಾಗಿಲ್ಲ. ಇದು ಅಧಿಕಾರಿಗಳ ವೈಫಲ್ಯವಲ್ಲದೆ ಮತ್ತೇನು ಎಂದು ಕಿಡಿ ಕಾರಿದರು.
ಪ್ರಾಣೇಶ್ ಸಲಹೆ: ಗೊಂದಲಕಾರಿ ಚರ್ಚೆ ನಡುವೆ ಮಾತಿಗೆ ಇಳಿದ ಸದಸ್ಯ ಪ್ರಾಣೇಶ್ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ಅಧಿಕಾರಿಗಳು ಮತ್ತು ಸದಸ್ಯರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲಿಸಬೇಕು. ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದಾಗ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಸಮ್ಮತಿಸಿದರು. ಇದರೊಂದಿಗೆ ವಿಷಯಾಂತರವಾಯಿತು.
ಸಭೆಯಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆ ಕಾರ್ಯಕ್ರಮಗಳ ಮೇಲೆ ಚರ್ಚೆ ನಡೆಯಿತು. ಸಾಮಾನ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸಭೆಯ ನಡವಳಿಗಳನ್ನು ಅನುಮೋದಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಶಂಕರಯ್ಯ, ಇಒ ವೆಂಕಟೇಶ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

