ವಿಕಲಚೇತನರ ಹೋರಾಟಕ್ಕೆ ದನಿಯಾಗುವೆ
ಕ.ಪ್ರ.ವಾರ್ತೆ , ರಾಮನಗರ , ಡಿ.20
ವಿಕಲಚೇತನರಿಗೆ ಸರ್ಕಾರ ನೀಡುತ್ತಿರುವ ಮಾಸಾಶನ ಯಾವುದಕ್ಕೂ ಸಾಲದಾಗಿದೆ. ಅವರ ಗೌರವಯುತ ಜೀವನ ನಿರ್ವಹಣೆಗೆ ಸಾಕಾಗುವಷ್ಟು ನೆರವು ನೀಡಬೇಕು. ಈ ನಿಟ್ಟಿನಲ್ಲಿ ವಿಕಲಚೇತನರು ನಡೆಸುತ್ತಿರುವ ಹೋರಾಟಕ್ಕೆ ನಾನು ಧ್ವನಿಯಾಗುವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಏಳ್ಗೆಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಘ-ಸಂಸ್ಥೆಗಳಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನರ ಬಗ್ಗೆ ಅನುಕಂಪದ ಮಾತುಗಳನ್ನಾಡುವ ಬದಲು ಆವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಆಗಬೇಕು. ಅವರ ಬದುಕಿನಲ್ಲಿ ಚೈತನ್ಯ ಮೂಡಿಸಬೇಕು. ಹೀಗಾದಾಗ ಮಾತ್ರ ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದ ಇತರರೊಂದಿಗೆ ಸ್ಪರ್ಧಿಸಿ, ಸ್ವಾವಲಂಬಿ ಜೀವನ ನಡೆಸಲು ಅವರಿಗೆ ಸಾಧ್ಯವಾಗಲಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ವಿಧಾನಸೌಧಕ್ಕೆ ನೇರ ಪ್ರವೇಶ: ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಕಲಚೇತನರು ಯಾವುದೇ ಅಡೆತಡೆಗಳಿಲ್ಲದೆ ವಿಧಾನಸೌಧಕ್ಕೆ ಬಂದು ಹೋಗಲು ಅವಕಾಶ ಕಲ್ಪಿಸಿದ್ದೆ. ಜನತಾ ದರ್ಶನದಲ್ಲೂ ಅವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ಮುಖ್ಯಮಂತ್ರಿ ಕಚೇರಿ ಸೇರಿದಂತೆ ಇಂಧನ ಇಲಾಖೆಯಲ್ಲಿ ಸುಮಾರು ಒಂದು ಸಾವಿರ ವಿಕಲಚೇತನಿರಿಗೆ ಉದ್ಯೋಗ ನೀಡಲಾಗಿತ್ತು. ಕತ್ತಲಲ್ಲಿರುವ ಅವರ ಬಾಳಿಗೆ ಬೆಳಕು ನೀಡಬೇಕೆಂಬುದು ನನ್ನ ಹಂಬಲವಾಗಿದೆ ಎಂದು ಅವರು ತಿಳಿಸಿದರು.
ದೊಡ್ಡವರಿಂದ ಲಂಚಕ್ಕೆ ಆಸೆ: ಸರ್ಕಾರವು ಶೇ.40ರಷ್ಟು ಅಂಗವಿಕಲತೆ ಹೊಂದಿದವರಿಗೆ ರು.500 ಹಾಗೂ ಶೇ.75ರಷ್ಟು ಅಂಗವೈಕಲ್ಯ ಇರುವವರಿಗೆ ರು.1200 ಮಾಸಾಶನ ನೀಡುತ್ತಿದೆ. ಆದರೆ, ಅಂಗವಿಕಲ ಪ್ರಮಾಣ ಪತ್ರ ನೀಡಲು ವೈದ್ಯಾಧಿಕಾರಿಗಳು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ. ಮಾನವೀಯತೆಯ ಪ್ರತೀಕವಾಗಿರುವ ವೈದ್ಯರ ವರ್ತನೆ ಬೇಸರ ಉಂಟುಮಾಡಿದೆ ಎಂದು ವಿಷಾದಿಸಿದರು.
ಪ್ರಥಮ ಆದ್ಯತೆ ನೀಡಿ: ವಿಕಲಚೇತನರ ಅರ್ಜಿಗಳಿಗೆ ಪ್ರಥಮ ಆದ್ಯತೆ ನೀಡಿ, ಸಕಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವಿಕಲಚೇತನರು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ತಮ್ಮ ಕುಂದು ಕೊರತೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಕುಮಾರಸ್ವಾಮಿ ಹೇಳಿದರು.
ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ದೊರೆಯದಿರುವುದು, ಹೆರಿಗೆ ಸಂದರ್ಭದಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ದೊರೆಯದಿರುವುದರಿಂದ ಮಕ್ಕಳು ವಿಕಲಚೇತನರಾಗಿ ಜನಿಸುವರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯರಂತೆ ಜೀವನ ನಡೆಸಲು 32 ಕಾರ್ಯಕ್ರಮಗಳನ್ನು ಗುರುತಿಸಲಾಗಿದೆ. ಈ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು.
ಜಿಪಂ ಅಧ್ಯಕ್ಷ ರಾಜು ಸಲಹೆ: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಕಲಚೇತನರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರೆ ಅವರು ಈ ರೀತಿಯ ಕಷ್ಟಗಳಿಗೆ ಒಳಗಾಗುತ್ತಿರಲಿಲ್ಲ. ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬರು ಕರ್ತವ್ಯ ಎಂಬುದನ್ನು ಮನಗಾಣಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜಣ್ಣ ಹೇಳಿದರು.
ಅಧಿಕಾರಿಗಳು ವಿಕಲಚೇತನರಿಗೆ ತೊಂದರೆ ನೀಡುವುದನ್ನು ಸಹಿಸುವುದಿಲ್ಲ. ಎಲ್ಲ ಸರ್ಕಾರಿ ಕಚೇರಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರನ್ನು ಗೌರವದಿಂದ ಕಾಣಬೇಕು. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಅಧೀನ ಇಲಾಖೆಗಳ ಅನುದಾನದಲ್ಲಿ ಶೇ. 3ರಷ್ಟನ್ನು ವಿಕಲಚೇತನರಿಗೆ ಮೀಸಲಿರಿಸಬೇಕು ಎಂದರು.
ಪ್ರತಿಭಾನ್ವಿತರಿಗೆ ಅಭಿನಂದನೆ: ಅಂಗವಿಕಲರ ಏಳ್ಗೆಗಾಗಿ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಕಲಚೇತನ ವಿದ್ಯಾರ್ಥಿಗಳಾದ ಬಿ.ಸಂಧ್ಯಾ, ನವ್ಯಶ್ರೀ, ಪ್ರವೀಣ್ ಅವರನ್ನು ಅಭಿನಂದಿಸಲಾಯಿತು.
ಮಾಜಿ ಶಾಸಕ ಕೆ.ರಾಜು, ಜಿಪಂ ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ಸದಸ್ಯೆ ಶಾಂತಮ್ಮ, ತಾಪಂ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಎಂ.ಚಂದ್ರಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್.ರಾಮಚಂದ್ರಯ್ಯ ಮತ್ತಿತರರು ಭಾಗವಹಿಸಿದ್ದರು.
ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿ ಪಟ್ಟಿ
ರಾಮನಗರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ. ಈ ತಿಂಗಳ ಮಾಸಾಂತ್ಯ ಅಥವಾ ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಅಭ್ಯರ್ಥಿ ಆಯ್ಕೆ ಸಂಬಂಧ ರಾಜ್ಯದ ಎಲ್ಲ 28 ಕ್ಷೇತ್ರಗಳ ವ್ಯಾಪ್ತಿಯ ಹಾಲಿ-ಮಾಜಿ ಶಾಸಕರು, ಪ್ರಮುಖ ನಾಯಕರ ಸಭೆ ಬೆಂಗಳೂರಿನಲ್ಲಿ ಇಂದು ನಡೆಯಲಿದೆ. ಅಲ್ಲಿ ಅಭಿಪ್ರಾಯ ಕ್ರೂಢೀಕರಿಸಿದ ನಂತರ ಪಕ್ಷವು ಅಭ್ಯರ್ಥಿ ಆಯ್ಕೆಗೆ ಚಾಲನೆ ನೀಡಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಕೃಷಿ ಉತ್ಪನ್ನಗಳಿಗೆ ಸಿಗದ ವೈಜ್ಞಾನಿಕ ಬೆಲೆ ಸಹಿತ ರೈತಾಪಿ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು, ಕಾಂಗ್ರೆಸ್ ಮತ್ತು ಬಿಜೆಪಿಯ ವೈಫಲ್ಯ, ಜನ ವಿರೋಧಿ ನೀತಿಗಳು ಚುನಾವಣೆಯಲ್ಲಿ ಜೆಡಿಎಸ್ನ ಪ್ರಮುಖ ಅಸ್ತ್ರವಾಗಲಿವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎನ್ನುವುದು ವಿಧಾನಸಭೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಣೆಯಾಗಿತ್ತು. ಆದರೆ, ಬಿ ಸ್ಕೀಂ ವಿಚಾರದಲ್ಲಿ ಕೃಷ್ಣೆಯ ವಿಷಯದಲ್ಲಿ ಕಾಂಗ್ರೆಸ್ ಒಲವು ಆಂಧ್ರದ ಕಡೆಯಾಗಿದ್ದು, ಕಾವೇರಿ ವಿಷಯದಲ್ಲಿ ತಮಿಳುನಾಡು ಪರವಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.
ಸದ್ಯಕ್ಕೆ ಪ್ರತಿಕ್ರಿಯೆ ಇಲ್ಲ: ಮೈಸೂರು ಲೋಕಸಭೆ ಕ್ಷೇತ್ರದಿಂದ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪತ್ನಿ ಪ್ರಮೋದಾದೇವಿ ಒಡೆಯರ್ ಅವರನ್ನು ಕಣಕ್ಕಿಳಿಯುವ ವಿಷಯದಲ್ಲಿ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ ಎಂದ ಕುಮಾರಸ್ವಾಮಿ ಅವರು, ಈ ವಿಷಯವಾಗಿ ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

