'ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಲಿ'
ಚನ್ನಪಟ್ಟಣ: ಯಾವುದೇ ನಾಯಕನ ಬೆನ್ನ ಹಿಂದೆ ಹೋಗದೆ ಕನ್ನಡ ಕಟ್ಟುವ ಕೆಲಸದಲ್ಲಿ ಪ್ರಮಾಣಿಕವಾಗಿ ಶ್ರಮಿಸುತ್ತಿರುವ ಬೊಂಬೆನಗರಿ ಹೋರಾಟಗಾರರು ನಾಡಿಗೆ ಮಾದರಿಯಾಗುವ ಚಳವಳಿಗಾರರು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಕರವೇ ಹಮ್ಮಿ ಕೊಂಡಿದ್ದ ಬೊಂಬೆನಾಡು ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ವೇದಿಕೆ ಹುಟ್ಟಿನಿಂದ ಪ್ರತಿಯೊಂದು ಚಳವಳಿಯಲ್ಲೂ ಮುಂದೆ ನಿಂತು ಹೋರಾಡುವ ಮೂಲಕ ನಮ್ಮೆಲ್ಲರ ಕೆಚ್ಚು ಎಚ್ಚಿಸಿದ ಹಿರಿಮೆ ಈ ಮಣ್ಣಿನ ಮಕ್ಕಳದ್ದು ಎಂದರು.
ಈ ನೆಲ ಹಲವಾರು ಚಳವಳಿಗಳಿಗೆ ಜನ್ಮ ನೀಡಿದ ಪುಣ್ಯಭೂಮಿಯಾಗಿದ್ದು, ಮನೆಗೊಬ್ಬ ಓಬವ್ವ, ರಾಯಣ್ಣ ಇದ್ದಾರೆ. ಯಾವುದೋ ಸ್ವಹಿತಾಸಕ್ತಿ ನಾಯಕರ ಮಾತಿಗೆ ಕಟ್ಟು ಬಿದ್ದು ಹೋಗದೆ ನ್ಯಾಯಪರವಾಗಿ ನಡೆಸುವ ಹೋರಾಟಕ್ಕಿಳಿದು ಹುರಿದುಂಬಿಸುವ ಇಲ್ಲಿನ ಕನ್ನಡ ಸೇನಾನಿಗಳ ಬದ್ಧತೆ ಸಂಘಟನೆಯ ಜೀವಾಳ ಎಂದರು.
ಕನ್ನಡ ಮರೆತ ರಾಜಕಾರಣಿಗಳು: ಒಬ್ಬ ಸಾಂಬಾಜಿ ಪಾಟೀಲ್ ಸದನದಲ್ಲಿ ಮರಾಠಿಯಲ್ಲಿ ಪ್ರಮಾಣವಚನ ಸ್ವೀಕರಿಸುತ್ತಾನೆ ಎಂದರೆ ಉಳಿದ 223 ಮಂದಿ ಕನ್ನಡ ಶಾಸಕರು ಮೌನವಾಗಿ ಕುಳಿತ್ತಿರುತ್ತಾರೆ. ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತೇನೆ ಎಂದರೂ ನಮ್ಮ ಶಾಸಕರಾಗಲಿ, ಸರ್ಕಾರವಾಗಲಿ ಏನೂ ಆಗಿಲ್ಲ ಎಂಬಂತೆ ಇರುತ್ತದೆ ಇಂತಹ ನೀತಿಗೆಟ್ಟ ವ್ಯವಸ್ಥೆಯ ವಿರುದ್ಧ ನಾವೆಲ್ಲ ದನಿ ಎತ್ತಬೇಕಿದೆ ಎಂದರು.
ಸಿಎಂ ಎಲ್ಲವನ್ನು ಮರೆತಿದ್ದಾರೆ: ಹೋರಾಟದ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಕನ್ನಡವನ್ನೇ ಮರೆತಿದ್ದಾರೆ. ಇವರಿಗೆ ಕುರ್ಚಿ ಮುಖ್ಯವೇ ಹೊರತು, ಕನ್ನಡ, ಕನ್ನಡಿಗರ ಹಿತ ಮುಖ್ಯವಲ್ಲ. ಇಂತಹ ರಾಜಕಾರಣಿಗಳಿಂದಾಗಿ ಕನ್ನಡಕ್ಕೆ ಅನ್ಯಾಯವಾಗುತ್ತಿದೆ ಎಂದು ವಿಷಾದಿಸಿದರು.
ಇದಕ್ಕೂ ಮುನ್ನ ಬೊಂಬೆನಾಡು ಉತ್ಸವದ ಅಂಗವಾಗಿ ಕೆಎಸ್‌ಐಸಿ ಮಿಲ್ ಮುಂಭಾಗದಿಂದ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಪಟ್ಟಣದ ಕೊಲ್ಲಾಪುರದಮ್ಮನ ದೇವಾಲಯದ ಆವರಣದಲ್ಲಿ ಸಂಜೆ ನಗೆ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರವೇ ಮುಖಂಡರಾದ ಯೋಗಾರವುಶ್, ಚಂದ್ರಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ಬಸವರಾಜ್ ಪಡುಕೋಟೆ, ಜಿಲ್ಲಾಧ್ಯಕ್ಷ ಶ್ರೀಧರ್ ಹೊಸೂರು, ತಾಲೂಕು ಅಧ್ಯಕ್ಷ ಸಾಗರ್, ಜಿಲ್ಲಾ ಕಾರ್ಯಾಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ರಾಮಗಿರಿ, ರೈತ ಘಟಕದ ಅಧ್ಯಕ್ಷ ಶಂಭೂಗೌಡ, ಪದಾಧಿಕಾರಿಗಳಾದ ಅಭಿಲಾಷ್, ನಿತೀನ್, ಬೋರಣ್ಣ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

