ಬೆಂಗಳೂರು ಗ್ರಾಮಾಂತರ

ದೊಡ್ಡಗಂಗವಾಡಿ ಗ್ರಾಪಂನಲ್ಲಿ ನರೇಗಾ ಹಣ ಗುಳುಂ

Published On :

ಕ.ಪ್ರ.ವಾರ್ತೆ  ರಾಮನಗರ  ಡಿ.24
ತಾಲೂಕಿನ ದೊಡ್ಡಗಂಗವಾಡಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶಾಮೀಲಾಗಿ ನರೇಗಾ ಯೋಜನೆಯ ಹಣ ಕಬಳಿಸಿದ್ದಾರೆ ಎಂದು ಗ್ರಾಮಸ್ಥ ಉಮೇಶ್ ಆರೋಪಿಸಿದ್ದಾರೆ.
ಗ್ರಾಮದ ಬಹುತೇಕ ಜನರು ಅವಿದ್ಯಾವಂತರಾಗಿದ್ದಾರೆ. ಇವರಿಗೆ ಉದ್ಯೋಗ ಚೀಟಿ ಪಡೆದುಕೊಂಡು, ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದೇ ತಿಳಿದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಸ್ಥರ ಹೆಸರಿನಲ್ಲಿ ಜಾಬ್‌ಕಾರ್ಡ್ ಸೃಷ್ಟಿಸುತ್ತಾರೆ. ಅವರ ಖಾತೆಗೆ ಹಣ ಜಮಾವಣೆ ಮಾಡಿ, ಅಚಾನಕ್ಕಾಗಿ ಪಂಚಾಯಿತಿ ಹಣ ತಮ್ಮ ಖಾತೆಗೆ ಬಂದಿದೆ ಎಂದು ನಂಬಿಸುತ್ತಾರೆ. ಬಳಿಕ ರು.50 ರಿಂದ 100 ನೀಡಿ ಅವರಿಂದ ಸಹಿ ಪಡೆದು ಹಣ ಲಪಟಾಯಿಸಿದ್ದಾರೆ ಎಂದು ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೂರಿದರು.
ನರೇಗಾ ಯೋಜನೆಯಲ್ಲಿ ಗ್ರಾಮಸ್ಥರಾದ ಮಹದೇವಮ್ಮ, ಉಮೇಶ್, ಜ್ಯೋತಿ ಅವರ ಹೆಸರಿಗೆ ಎನ್‌ಎಂಆರ್ ತೆಗೆದಿದ್ದಾರೆ. ಅವರ ಕುಟುಂಬದ ಜಂಟಿ ಖಾತೆಗೆ ರು.12 ಸಾವಿರಕ್ಕೂ ಹೆಚ್ಚು ಹಣವನ್ನು ವರ್ಗಾಯಿಸಿದ್ದಾರೆ. ನಂತರ ಮಹದೇವಮ್ಮ ಅವರಿಂದ ಸಹಿ ಪಡೆದು ಗ್ರಾ.ಪಂ. ಸದಸ್ಯ ಮಹದೇವಯ್ಯ ರು.7ಸಾವಿರ ಹಾಗೂ ಡಿ.ಎಂ.ಗೋಪಾಲ್ 5 ಸಾವಿರ ಹಣ ಡ್ರಾ ಮಾಡಿ ವಂಚಿಸಿದ್ದಾರೆ ಎಂದರು.
2013ರ ಮಾರ್ಚ್ ತಿಂಗಳಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಕೇಳಿ ಅರ್ಜಿ ಹಾಕಿದ್ದೆ. ಅರ್ಜಿ ಹಾಕಿ 10 ತಿಂಗಳಾದರೂ ಕೆಲಸ ನೀಡಿಲ್ಲ. 100 ದಿನದೊಳಗೆ ಕೆಲಸ ನೀಡದಿದ್ದರೆ ಕಾನೂನಿನ ಪ್ರಕಾರ ನಿರುದ್ಯೋಗ ಭತ್ಯೆ ನೀಡಬೇಕು. ನಿರುದ್ಯೋಗ ಭತ್ಯೆ ನೀಡುವಂತೆ ಅರ್ಜಿ ಹಾಕಿದ್ದರೂ ಅದನ್ನೂ ನೀಡದ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ ಎಂದು ಉಮೇಶ್ ಹೇಳಿದರು.
ವರದಿ ನೀಡಿಲ್ಲ: ಈ ಕುರಿತು ತಾ.ಪಂ. ಇಒ ಮತ್ತು ಜಿ.ಪಂ. ಸಿಇಒ ಅವರಿಗೂ ದೂರು ನೀಡಿದ್ದೇನೆ. ಸಿಇಒ ಅವರು ನರೇಗಾ ಓಂಬುಡ್ಸ್‌ಮನ್ ಈಶ್ವರಪ್ಪ ಅವರನ್ನು ತನಿಖೆಗಾಗಿ ನೇಮಿಸಿದ್ದಾರೆ. ವಂಚಕರ ಜತೆ ಶಾಮೀಲಾಗಿರುವ ಈಶ್ವರಪ್ಪ ಅವರು ಎರಡೂವರೆ ತಿಂಗಾದರೂ ತನಿಖೆ ಮುಗಿಸಿ ವರದಿ ನೀಡಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನರೇಗಾ ಯೋಜನೆಯು ಜಾರಿಗೆ ಬಂದಾಗಿನಿಂದ ದೊಡ್ಡಗಂಗವಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಬ್ಬ ಅರ್ಹ ಕೂಲಿ ಕಾರ್ಮಿಕನಿಗೂ ಕೂಡ ಯೋಜನೆಯನ್ನು ತಲುಪಿಸಿಲ್ಲ. ಉದ್ಯೋಗ ಚೀಟಿ ನೊಂದಣಿ ಮಾಡಿಸಿದ ನೊಂದಣಿದಾರರಿಗೆ ಕೆಲಸ ನೀಡುವ ಬದಲು ಗ್ರಾ.ಪಂ. ಸದಸ್ಯರೇ ನಡೆಯದ ಕಾಮಗಾರಿ ಹೆಸರಿನಲ್ಲಿ ಹಣ ಪಡೆದಿದ್ದಾರೆ ಎಂದರು.
ಆರೋಪ: ಈ ಹಿಂದೆ ಗ್ರಾ.ಪಂ.ನ ಅಧ್ಯಕ್ಷರಾಗಿದ್ದ ಸುಮಂಗಲಾ ಅವರು ತಮ್ಮ ಹೆಸರಿನಲ್ಲಿ ಅಕ್ರಮವಾಗಿ ಎರಡೆರಡು ಉದ್ಯೋಗ ಚೀಟಿ ಹೊಂದಿದ್ದಾರೆ. ಯಾವುದೇ ಕೆಲಸವನ್ನು ಮಾಡದೆ ತಮ್ಮ ಪದವಿಯ ಲಾಭ ಪಡೆದು ಲಕ್ಷಾಂತರ ರು. ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.
ಈ ಎಲ್ಲಾ ಅಕ್ರಮಗಳನ್ನು ಬಯಲಿಗೆಳೆಯುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೆ. ಪಿಡಿಒ ನಾಗರಾಜು ಮತ್ತು ಕಾರ್ಯದರ್ಶಿ ರಾಮಕೃಷ್ಣಯ್ಯ ಅವರು ಕುಂಟು ನೆಪ ಹೇಳುತ್ತಿದ್ದಾರೆಯೇ ವಿನಃ ಮಾಹಿತಿ ನೀಡಿಲ್ಲ. ಅಲ್ಲದೆ ಕೆಲ ಪ್ರಭಾವಿಗಳು ಮಾಹಿತಿ ಕೇಳಿ ನೀಡಿರುವ ಅರ್ಜಿಯನ್ನು ಹಿಂಪಡೆಯುವಂತೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದರು.
ಮೀಸಲಿಡಿ: ದೊಡ್ಡಗಂಗವಾಡಿ ಗ್ರಾ.ಪಂ. ಸಂಗ್ರಹಿಸುವ ತೆರಿಗೆ ಹಣದಲ್ಲಿ ಶೇ.22.75ರಷ್ಟನ್ನು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಅಭಿವೃದ್ಧಿ ಯೋಜನೆಗೆ ಮೀಸಲಿಡಬೇಕು ಎಂಬುದು ಸರ್ಕಾರದ ನಿಯಮ. ಆದರೆ ವಾರ್ಷಿಕ ಕ್ರಿಯಾ ಯೋಜನೆ ರೂಪಿಸುವ ವೇಳೆ ಈ ಹಣವನ್ನು ಮೀಸಲಿಡದೆ ಸರ್ಕಾರಿ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದರು.
ಉದ್ಯೋದಮಿತ್ರ ನೇಮಿಸಿಕೊಳ್ಳಿ: ಉದ್ಯೋಗ ಖಾತ್ರಿ ಯೋಜನೆಯನ್ನು ಸಮಗ್ರವಾಗಿ ಅನುಷ್ಠಾನಗೊಳ್ಳಲು ಗ್ರಾ.ಪಂ.ಗಳು ಉದ್ಯೋಗ ಮಿತ್ರನನ್ನು ನೇಮಿಸಿಕೊಳ್ಳಬೇಕು. ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರ ಯೋಗಕ್ಷೇವು ವಿಚಾರಿಸುವುದು ಉದ್ಯೋಗ ಮಿತ್ರನ ಪ್ರಮುಖ ಕೆಲಸ. ಆದರೆ, ಈ ಪಂಚಾಯಿತಿಯಲ್ಲಿ ಇದುವರೆಗೂ ಉದ್ಯೋಗ ಮಿತ್ರನನ್ನು ನೇಮಿಸಿಕೊಂಡಿಲ್ಲ ಎಂದು ಹೇಳಿದರು.
2012-13ನೇ ಸಾಲಿನಲ್ಲಿ 6 ಕೊಳವೆ ಬಾವಿಗಳನ್ನು ಕೊರೆದು ಹೊಸ ಪಂಪ್ ಮೋಟಾರ್ ಅಳವಡಿಸಲಾಗಿದೆ. ಆದರೆ, ಈ ಪಂಪ್, ಮೋಟಾರ್‌ಗಳ ರಿಪೇರಿಗಾಗಿ ರು.1.31 ಲಕ್ಷ ಖರ್ಚು ಮಾಡಲಾಗಿದೆ. ಅಲ್ಲದೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ನೆಪದಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ತಿಳಿಸಿದರು.
ಈ ಎಲ್ಲಾ ಅಕ್ರಮಗಳಿಗೆ ಅಧ್ಯಕ್ಷ ಮಹದೇವಯ್ಯ, ಪಿಡಿಒ ನಾಗರಾಜು ಹಾಗೂ ಕಾರ್ಯದರ್ಶಿ ರಾಮಕೃಷ್ಣಯ್ಯ ಅವರೇ ಸೂತ್ರದಾರರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಮೇಶ್ ಆಗ್ರಹಿಸಿದರು. ಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಸುಂದರೇಶ್, ಜೀವಿಕಾ ಸಂಘಟನೆಯ ಅಧ್ಯಕ್ಷ ಗೋವಿಂದರಾಜು, ಸುರೇಂದ್ರ ಮತ್ತು ಗೋವಿಂದರಾಜು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.