ಹೋರಾಟದ ದಿಕ್ಕು ತಪ್ಪಿಸುವ ಕುತಂತ್ರ ಬೇಡ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ್ಣ ಡಿ.25
ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ದೊಡ್ಡಬಳ್ಳಾಪುರ ತಾಲೂಕು ಮತ್ತು ಮಧುರೆ ಹೋಬಳಿ ಶಾಶ್ವತ ನೀರು ಹೋರಾಟ ಸಮಿತಿ ಆಶ್ರಯದಲ್ಲಿ ತಾಲೂಕು ಮಟ್ಟದ ಸಮಾವೇಶ
ಕನಸವಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಆಂಜನೇಯರೆಡ್ಡಿ, ಚೌಡಪ್ಪ, ಆರ್. ಚಂದ್ರತೇಜಸ್ವಿ ಮತ್ತಿತರರು ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಒದಗಿಸುವ ನಿಟ್ಟಿನಲ್ಲಿ ರಾಜಕಾರಣಿಗಳು ಹೊಣೆಯಾಧಾರಿತ ಕರ್ತವ್ಯ ನಿರ್ವಹಿಸಬೇಕು. ಭಿನ್ನ ಆಲೋಚನೆಗಳ ಮೂಲಕ ಹೋರಾಟಗಳ ದಿಕ್ಕು ತಪ್ಪಿಸುವ ಪ್ರಯತ್ನ ಕೈಬಿಟ್ಟು ಜನರ ಒತ್ತಾಯಕ್ಕೆ ಬೆಲೆ ಕೊಡಬೇಕು. ಆಂಧ್ರಪ್ರದೇಶದಲ್ಲಿ ಶ್ರೀಶೈಲ ಬಳಿಯಿರುವ ಅಣೆಕಟ್ಟೆಯಿಂದ ನೀರು ಹರಿಸಿ ಹಿಂದುಪುರದವರೆಗೆ ನೀರು ಕೊಡಲು ಸಾಧ್ಯವಾಗಿದೆ ಎನ್ನುವುದಾದರೆ ನಮ್ಮಲ್ಲಿ ಸಕಲೇಶಪುರ ಸಮೀಪದಿಂದ ಬಯಲುಸೀಮೆಗೆ ನೀರು ತರಲು ಸಾಧ್ಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಶಾಶ್ವತ ನೀರಾವರಿ ದನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕುತಂತ್ರಗಳು ನಡೆಯುತ್ತಿವೆ. ಸ್ಥಳೀಯ ರಾಜಕಾರಣಿಗಳು ಎತ್ತಿನಹೊಳೆ ಎಂಬ ಅವೈಜ್ಞಾನಿಕ ಯೋಜನೆ ಮುಂದಿಟ್ಟುಕೊಂಡು ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಎತ್ತಿನಹೊಳೆ ಬಾಯಿ ಮಾತಿನಲ್ಲಿ ಮಾತ್ರ ಅನುಷ್ಠಾನಗೊಂಡಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳು, ಸಮಸ್ಯೆಗಳನ್ನು ಬಂಡವಾಳ ಮಾಡಿಕೊಳ್ಳುವುದು ತಪ್ಪು. ಬರಪೀಡಿತ 6 ಜಿಲ್ಲೆಗಳ 2 ಕೋಟಿ ಜನರಿಗೆ ಕುಡಿಯುವ ನೀರು, ಕೃಷಿಗೆ ನೀರು ಕೊಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಪರಿಣಾಮಕಾರಿಯಾಗಬಲ್ಲ ಯೋಜನೆ ಜಾರಿಗೆ ತರಲು ಉಭಯ ಸದನಗಳಲ್ಲಿ ಚರ್ಚೆಯಾದರೂ ಪ್ರಯೋಜನವಾಗಿಲ್ಲ. ಕೂಡಲೇ ಪರಮಶಿವಯ್ಯ ವರದಿ ಜಾರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಪಂಚವಾರ್ಷಿಕ ಯೋಜನೆ (2013-18)ರಲ್ಲಿ ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರ ಒತ್ತಾಯಿಸಬೇಕು. ನೀರಾವರಿ ಯೋಜನೆಯ ಪ್ರಸ್ತಾವನೆಯನ್ನು ಕೂಡಲೇ ಕೇಂದ್ರಕ್ಕೆ ರವಾನಿಸಬೇಕು ಎಂದು ಆಗ್ರಹಿಸಿದರು.
ವಿಷಯುಕ್ತ ನೀರು: ದೊಡ್ಡಬಳ್ಳಾಪುರದಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಜಿಲ್ಲೆಯಲ್ಲಿ ಕೊಳವೆ ಬಾವಿಗಳಲ್ಲಿ ಸಿಗುತ್ತಿರುವ ನೀರು ವಿಷಯುಕ್ತವಾಗಿದೆ. ಕೃಷಿ, ಸಾಮಾಜಿಕ ಬದುಕು ಬೀದಿಗೆ ಬಿದ್ದಿದೆ. ಕೂಡಲೇ ಆಡಳಿತ ಯಂತ್ರ ಗಂಭೀರ ಕ್ರಮ ಕೈಗೊಳ್ಳಬೇಕು. ನೇತ್ರಾವತಿ ನದಿಯಿಂದ ವಾರ್ಷಿಕ ಪೋಲಾಗುತ್ತಿರುವ ನೀರಿನ ಶೇ.18ರಷ್ಟು ನೀರನ್ನು ಬಯಲು ಸೀಮೆಗೆ ತಂದರೆ ಇಡೀ ಪ್ರದೇಶದ ಸ್ಥಿತಿಗತಿಯೇ ಬದಲಾಗುತ್ತದೆ ಎಂದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಶಾಶ್ವತ ನೀರಾವರಿ ಯೋಜನೆಗೆ ಇಂದಲ್ಲ ನಾಳೆ ಜಾರಿಗೆ ಬರಬೇಕು ಎಂದರೆ ಅದು ಹೋರಾಟದಿಂದ ಮಾತ್ರ. ಹೋರಾಟದ ಕಿಚ್ಚು ಜೀವಂತವಾಗಿರಬೇಕು. ಎತ್ತಿನಹೊಳೆ ಯೋಜನೆ ತ್ವರಿತಗತಿಯಲ್ಲಿ ನೀರು ಒದಗಿಸುವ ಯೋಜನೆಯಾಗಿದೆ. ಇದರ ಜಾರಿ ಸದ್ಯದಲ್ಲೇ ಆಗುವ ನಿರೀಕ್ಷೆ ಇದೆ. ಅದೂ ಬರಲಿ. ಜೊತೆಗೆ ಶಾಶ್ವತ ನೀರಾವರಿ ನಮ್ಮ ಹಕ್ಕು. 6 ಜಿಲ್ಲೆಗಳ ಎಲ್ಲ ಶಾಸಕರು, ಸಂಸದರೂ ಈ ಬಗ್ಗೆ ದನಿಯೆತ್ತಿದ್ದಾರೆ. ಸರ್ಕಾರ ಕೂಡ ಉತ್ತಮ ನಿರ್ಧಾರ ಕೈಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷಾತೀತ ಹೋರಾಟ: ಹೋರಾಟವನ್ನು ಪಕ್ಷಾತೀತವಾಗಿ ಸಂಘಟಿಸಲಾಗುತ್ತಿದೆ. ಬುಧವಾರ ನಡೆದ ತಾಲೂಕು ಸಮಾವೇಶದಲ್ಲಿ ವಿವಿಧ ರಾಜಕೀಯ ಮುಖಂಡರು, ಸಂಘಟನೆಗಳ ನೂರಾರು ಪದಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

