ಬೆಂಗಳೂರು ಗ್ರಾಮಾಂತರ

ಉನ್ನತ ಸಾಧನೆಗೆ ಶಿಸ್ತು, ಸಂಯಮ ಅಗತ್ಯ

Published On :

ಚನ್ನಪಟ್ಟಣ: ಜೀವನದಲ್ಲಿ ಉನ್ನತವಾದ ಸಾಧನೆ ಮಾಡಬೇಕಾದರೆ ಶಿಸ್ತು ಮತ್ತು ಸಮಯ ಪಾಲನೆ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಇದನ್ನು  ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕೆಂದು ನಾಡೋಜ ದೇ. ಜವರೇಗೌಡ ಕರೆನೀಡಿದರು.
ತಾಲೂಕಿನ ಮತ್ತೀಕೆರೆ ಶೆಟ್ಟಿಹಳ್ಳಿ ಸರ್ಕಾರಿಶಾಲೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕುವೆಂಪು ತಮ್ಮ ಮಹತ್ತರವ್ಯಕ್ತಿಯಾಗಿ ಬೆಳೆದಿದ್ದು  ಶಿಸ್ತುಬದ್ದ ಜೀವನಶೈಲಿಯಿಂದಲೇ, ನಮಗೆಲ್ಲ ಕುವೆಂಪುರವರ ಜೀವನವೇ ಆದರ್ಶವಾಗಬೇಕಿದೆ ಎಂದರು.
ಕುವೆಂಪು ರೈತಸಂಕುಲ ಮತ್ತು ಅದರ ಸುತ್ತ ನಿರ್ಮಾಣ ಗೊಂಡ ಸಮಾಜದ ಪರವಾಗಿ ದನಿ ಎತ್ತಿದ ಸಾಹಿತಿ. ದೇಶದ ಜೀವಾಳವೆನಿಸಿದ ರೈತಸಂಕುಲ ಹಾಗೂ ಶ್ರಮಿಕವರ್ಗ ಜಗತ್ತಿಗೆ ಆಧಾರ ಎಂಬುದನ್ನು ತಮ್ಮ ಸಾಹಿತ್ಯ ಕೃತಿಗಳ ಮೂಲ ಅಕ್ಷರಸ್ಥರ ಪ್ರಪಂಚಕ್ಕೆ ಸಾರಿದ ಮಹಾನ್ ತಪಸ್ವಿ. ಇಂತಹ ಮಹನೀಯರ ವಿಚಾರಗಳನ್ನು ಯುವಸಮುದಾಯಕ್ಕೆ ಬಿತ್ತ ಬೇಕಾದುದು ಅತ್ಯಗತ್ಯವಾಗಿದೆ ಎಂದರು.
ಕುವೆಂಪು ಆಧ್ಯಾತ್ಮ ಜೀವಿ: ರಾಷ್ಟ್ರಕವಿ ಕುವೆಂಪು ಪೌರೋಹಿತ ಶಾಹಿಯನ್ನು ವಿರೋಧಿಸಿದರೇ ವಿನಾ ಆಧ್ಯಾತ್ಮಿಕತೆಯನ್ನಲ್ಲ, ಅವರು ಶ್ರೇಷ್ಠ ಆಧ್ಯಾತ್ಮಿಕ ಜೀವಿಯಾಗಿದ್ದು  ಅವರ ಆಧ್ಯಾತ್ಮಿಕ ಜ್ಞಾನಕ್ಕೆ ಶ್ರೀರಾಮಾಯಣ ದರ್ಶನಂ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ಅವರು ರಚಿಸಿದ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಓದಲೇ ಬೇಕಿದೆ ಎಂದರು. ಕುವೆಂಪು ಯಾವುದೇ ಒಂದು ವರ್ಗವನ್ನಾಗಲಿ, ಜಾತಿಯನ್ನಾಗಲಿ ನಿಂದಿಸಿದವರಲ್ಲ, ಸಾಮಾಜಿಕ ಅನಿಷ್ಟಗಳ ವಿರುದ್ಧ ಸಮರ ಸಾರಿದರು. ವೈಚಾರಿಕತೆಯನ್ನು  ನಂಬಿದ್ದ ಅವರು ಅಜ್ಞಾನದಿಂದ ಆಚರಿಸಿಕೊಂಡು ಬರುತ್ತಿದ್ದ ಕಂದಾಚಾರಗಳನ್ನಷ್ಟೇ ವಿರೋಧಿಸುತ್ತಿದ್ದರು ಎಂದರು.
ಅಜರಾಮರವಾಗಲಿ: ಗ್ರಾಮೀಣ ಭಾಗದಲ್ಲಿ ಸಹಸ್ತ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಅವರ ಬದುಕನ್ನು ಹಸನು ಮಾಡಿದ ಈ ಶಾಲೆಯ ಕೊರತೆ ನಿಜಕ್ಕೂ ಮಹತ್ವಪೂರ್ಣವಾಗಿದ್ದು ಇಂತಹ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನಾನು ಸಂತಸ ಪಡುತ್ತೇನೆ. ಈ ಶಾಲೆಯ ಕೀರ್ತಿ ಅಜರಾಮರವಾಗಲಿ  ಎಂದು ಹಾರೈಸಿದರು.
ಕೊಡುಗೆ ಅಪಾರ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಾಲೆಯ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾಸಿದ ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಶತಮಾನದ ಇತಿಹಾಸ ಹೊಂದಿರುವ ಎರಡನೇ ಶಾಲೆ ಇದಾಗಿದ್ದು ಈ ಶಾಲೆಯಲ್ಲಿ ನಾನು ಕೆಲಕಾಲ ವಿದ್ಯಾರ್ಥಿಯಾಗಿ ಓದಿದ್ದು  ಈ ಶಾಲೆ ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದುದು ಎಂದರು.
ಈ ಶಾಲೆಗೆ ಸರ್ಕಾರ ಸಾಕಷ್ಟು ಸಹಕಾರ ನೀಡುತ್ತಿದ್ದು 70 ಲಕ್ಷರು. ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಈ ಶಾಲಾ ಆವರಣದಲ್ಲಿ ಆದರ್ಶ ವಿದ್ಯಾಲಯವನ್ನು ನಾಲ್ಕುಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.  ಈ ಶಾಲೆಯ ಇತಿಹಾಸ ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು ನಾನೂ  ಸರ್ಕಾರದಿಂದ ಈ ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು  ಕೊಡಿಸುತ್ತಿರುವುದಾಗಿ ಅವರು ತಿಳಿಸಿದರು.
ಸನ್ಮಾನ: ನಾಡೋಜ ದೇ. ಜವರೇಗೌಡ, ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸುಧಾ, ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೆ.ರಾಮಸ್ವಾಮಿ, ನಿವೃತ್ತ ಶಿಕ್ಷಕ ಕೆ.ತಿಮ್ಮೇಗೌಡ, ಪತ್ರಕರ್ತ ಮತ್ತೀಕೆರೆ ಜಯರಾಂ, ಎಸ್.ಟಿ.ಶ್ರೀನಿವಾಸ್, ಸಾಹಿತಿ ಮತ್ತೀಕೆರೆ ಚಲುವರಾಜು, ತೋಟದಮನೆ ಕೃಷ್ಣೇಗೌಡ ಮೊದಲಾದವರನ್ನು ಸನ್ಮಾನಿಸಲಾಯಿತು.
 ಜಿ.ಪಂ ಅಧ್ಯಕ್ಷ ಎಚ್.ಸಿ.ರಾಜಣ್ಣ, ತಾ.ಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ವೆಂಕಟೇಶ್, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ರಘುಕುಮಾರ್, ಜಿ.ಪಂ ಸದಸ್ಯೆ ನಾಗೇಶ್ವರಿ, ತಾ.ಪಂ ಸದಸ್ಯ ಹನುಮಂತು, ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪ್ರಹ್ಲಾದ್ಗೌಡ, ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ, ಗ್ರಾ.ಪಂ ಅಧ್ಯಕ್ಷ ಉಮೇಶ್, ಎಸ್ಡಿಎಂಸಿ ಅಧ್ಯಕ್ಷ ಎಸ್.ಉಮೇಶ್, ವಿಎಸ್ಎಸ್ಎನ್ ಅಧ್ಯಕ್ಷ ಮೆಹರೀಶ್, ಎಂಪಿಸಿಎಸ್ ಅಧ್ಯಕ್ಷ ಧರ್ಮನಂದನ್, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಪಿ. ಪುಟ್ಟೇಗೌಡ ಮುಂತಾದವರು ಉಪಸ್ಥಿತರಿದ್ದರು.


ಕುವೆಂಪು ರೈತಸಂಕುಲ ಮತ್ತು ಅದರ ಸುತ್ತ ನಿರ್ಮಾಣಗೊಂಡ ಸಮಾಜದ ಪರವಾಗಿ ದನಿ ಎತ್ತಿದ ಸಾಹಿತಿ. ದೇಶದ ಜೀವಾಳವೆನಿಸಿದ ರೈತಸಂಕುಲ ಹಾಗೂ ಶ್ರಮಿಕವರ್ಗ ಜಗತ್ತಿಗೆ ಆಧಾರ ಎಂಬುದನ್ನು ತಮ್ಮ ಸಾಹಿತ್ಯ ಕೃತಿಗಳ ಮೂಲ ಅಕ್ಷರಸ್ಥರ ಪ್ರಪಂಚಕ್ಕೆ ಸಾರಿದ ಮಹಾನ್ ತಪಸ್ವಿ.
ಟಿ ನಾಡೋಜ ದೇ. ಜವರೇಗೌಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.