ದಲಿತರೊಂದಿಗೆ ವೈವಾಹಿಕ ಸಂಬಂಧ ಹೊಂದಿದಾಗ ಸಮಾನತೆ ಸಾಧ್ಯ
ಕ.ಪ್ರ.ವಾರ್ತೆ ರಾಮನಗರ ಡಿ.29
ನಾಲ್ಕಾರು ದಲಿತರಿಗೆ ಸರ್ಕಾರಿ ಹುದ್ದೆ ನೀಡಿದರೆ, ನಾಲ್ಕಾರು ಮಂದಿ ವೈದ್ಯರು, ಎಂಜಿನಿಯರ್ಗಳಾದ ಮಾತ್ರಕ್ಕೆ ಈ ವರ್ಗ ಅಭಿವೃದ್ಧಿ ಹೊಂದಿದೆ ಎಂದು ಹೇಳಲಾಗದು. ಇತರೆ ವರ್ಗದವರು ದಲಿತರೊಂದಿಗೆ ವೈವಾಹಿಕ ಸಂಬಂಧ ಹೊಂದಿ, ಸಹಭೋಜನ ನಡೆಸಿದಾಗ ಮಾತ್ರ ಸಮಾನತೆ ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸಮಾನ ಮನಸ್ಕರ ನೌಕರರ ವೇದಿಕೆ ಮತ್ತು ಜಿಲ್ಲೆಯ ವಿವಿಧ ಇಲಾಖೆಗಳ ಎಸ್ಸಿ, ಎಸ್ಟಿ ನೌಕರರ ಸಂಘ ಹಾಗೂ ವಿವಿಧ ದಲಿತ ಸಂಘಟನೆಗಳಿಂದ ಭಾನುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 57ನೇ ಪುಣ್ಯಸ್ಮರಣೆ, ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೋಷಿತ ಜನಾಂಗಗಳಿಗೆ ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಹಕ್ಕುಗಳನ್ನು ದೊರಕಿಸಿಕೊಟ್ಟರು. ಇದರಿಂದ ಈ ವರ್ಗಗಳ ಸ್ಥಿತಿ ಅಲ್ಪಮಟ್ಟಿಗೆ ಬದಲಾವಣೆ ಆಗಿದೆ. ಆದರೆ ಸಮಾಜ ತಾನೆ ಸ್ವಯಂ ಒಪ್ಪಿ ಸಮಾನ ಸ್ಥಾನ ದೊರಕಿಸಿಕೊಟ್ಟ ಮೇಲಷ್ಟೆ ಶೋಷಣೆ ನಿಂತಿದೆ ಎಂದು ಹೇಳಲು ಸಾಧ್ಯ ಎಂದರು. ಪ್ರಾಣಿಗಳಿಗಿಂತ ಕೀಳಾಗಿ ಬದುಕುತ್ತಿದ್ದ ದಲಿತರನ್ನು ಮುಖ್ಯವಾಹಿನಿಗೆ ತರಲು ಅಂಬೇಡ್ಕರ್ ನಡೆಸಿದ ಹೋರಾಟ ನಾಗರಿಕ ಪ್ರಪಂಚ ಮೆಚ್ಚುವಂತದ್ದು. ದಲಿತೋದ್ಧಾರಕ್ಕೆ ಅಂಬೇಡ್ಕರ್ ಸಾಕಷ್ಟು ಶ್ರಮ ಪಟ್ಟಿದ್ದಾರೆ. ದಲಿತ ಜನಾಂಗಕ್ಕೆ ಅಂಬೇಡ್ಕರ್ ದೇವರಂತೆ ಕಂಗೊಳಿಸುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಸಾಧ್ಯವಾಗಲಿಲ್ಲ: ದಲಿತರಲ್ಲಿ ಶಕ್ತಿ, ಸಾಮರ್ಥ್ಯವಿದ್ದರೂ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗಲಿಲ್ಲ. ದಲಿತ ಸಮಾಜದ ಶಾಸಕರು ತಮ್ಮ ಪಕ್ಷ ಭೇದ ಮರೆತು ಸಂಘಟಿತರಾಗಿದ್ದಿದ್ದರೆ ಬಹುಶಃ ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಬಹುದಿತ್ತು ಎಂದು ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಸಮಾನ ಮನಸ್ಕ ನೌಕರರ ಸಂಘದ ಅಧ್ಯಕ್ಷ ಎಂ. ನಾಗರಾಜ್ ತಿಳಿಸಿದರು.
ಕುತಂತ್ರದಿಂದ ಸೋಲು: ಜಿ.ಪರಮೇಶ್ವರ ಅವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲೆಂದೇ ಅವರನ್ನು ಕುತಂತ್ರದಿಂದ ಚುನಾವಣೆಯಲ್ಲಿ ಸೋಲಿಸಲಾಯಿತು. ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ ದಲಿತರು ತಮ್ಮ ರಕ್ತ ಹಸ್ತಾಕ್ಷರದ ಮನವಿಯನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಅವರಿಗೆ ರವಾನಿಸಿ ಎಂದು ಕರೆ ನೀಡಿದರು.
ಸಮಾರಂಭಕ್ಕೆ ಗೈರಾಗಿದ್ದ ಡಿ.ಕೆ.ಸುರೇಶ್ ಅವರ ವಿರುದ್ಧ ಪರೋಕ್ಷ ಟೀಕಾಪ್ರಹಾರ ನಡೆಸಿದ ಅವರು ಅಂಬೇಡ್ಕರ್ ಅವರನ್ನು ಕಡೆಗಣಿಸಿದ ಯಾರೊಬ್ಬರೂ ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ದಲಿತ ಜನಾಂಗ ಅವರಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಇತ್ತೀಚೆಗೆ ಕನಕಪುರದಲ್ಲಿ ನಡೆದ ದಲಿತರ ಬೃಹತ್ ಸಮಾವೇಶಕ್ಕೂ ಸಂಸದ ಡಿ.ಕೆ. ಸುರೇಶ್ ಗೈರಾಗಿದ್ದರು. ಇದೀಗ ಈ ಕಾರ್ಯಕ್ರಮಕ್ಕೂ ಗೈರಾಗಿರುವುದು ಅವರಿಗೆ ದಲಿತರ ಬಗ್ಗೆ ಇರುವ ಕಾಳಜಿಯನ್ನು ನಿರೂಪಿಸುತ್ತದೆ ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಜಿ. ಗೋವಿಂದಯ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

