ಮಧುರೆ ಹೆದ್ದಾರಿ ಧೂಳೋ...ಧೂಳು..
ಕೆ.ಆರ್. ರವಿಕಿರಣ್
ದೊಡ್ಡಬಳ್ಳಾಪುರ: ಯಾವುದೇ ಸಮಸ್ಯೆ ಬಗೆಹರಿಯಬೇಕಿದ್ದರೂ ಅದಕ್ಕೆ ಹೋರಾಟಗಳು ನಡೆದ ಮೇಲಷ್ಟೇ ಎಚ್ಚರಗೊಳ್ಳುವುದು ಜಡ್ಡುಗಟ್ಟಿದ ವ್ಯವಸ್ಥೆಯ ಪರಿಪಾಠವಾಗಿಬಿಟ್ಟಿದೆ.
ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ದೊಡ್ಡಬಳ್ಳಾಪುರದಿಂದ ಕನಸವಾಡಿ ಮೂಲಕ ನೆಲಮಂಗಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ರಸ್ತೆಯ ಕೆಲಭಾಗ ಹದಗೆಟ್ಟು ವರ್ಷಗಳೇ ಉರುಳಿದರೂ ದುರಸ್ಥಿಯಾಗಿಲ್ಲ.
ಕಳೆದ 4 ವರ್ಷಗಳ ಹಿಂದೆ ಕನಸವಾಡಿಯಿಂದ ದೊಡ್ಡಬಳ್ಳಾಪುರದವರೆಗೆ ಡಾಂಬರೀಕರಣ ಕಾಮಗಾರಿ ನಡೆಯಿತು. ತುಂಡು ಗುತ್ತಿಗೆ ಕಾಮಗಾರಿ ನೀಡಿದ ಇಲ್ಲಿನ ಆಡಳಿತ 4 ಮಂದಿ ಗುತ್ತಿಗೆದಾರರಿಗೆ ಈ ರಸ್ತೆಯ ಡಾಂಬರೀಕರಣ ಕಾಮಗಾರಿ ವಹಿಸಿತ್ತು. ಆಗ ಚನ್ನಾದೇವಿ ಅಗ್ರಹಾರದಿಂದ ಕೋಡಿಪಾಳ್ಯದವರೆಗಿನ 2 ಕಿ.ಮೀ ರಸ್ತೆಗೆ ಡಾಂಬರು ಭಾಗ್ಯ ಸಿಗಲಿಲ್ಲ. ಇದಕ್ಕೆ ಕಾರಣ ಕೂಡ ನಿಗೂಢ. ಪರಿಣಾಮ ದೊಡ್ಡಬಳ್ಳಾಪುರದಿಂದ ಬರುವ ಹೆದ್ದಾರಿ ಮಧ್ಯೆ 2 ಕಿ.ಮೀ ರಸ್ತೆ ಅದ್ವಾನದ ಹೆದ್ದಾರಿಯಾಗಿ ಪ್ರಯಾಣಿಕರಿಗೆ ನರಕ ಸದೃಶವಾಗಿದೆ.
ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಲಾರಿಗಳೇ ಹೆಚ್ಚಾಗಿ ಓಡಾಡುತ್ತವೆ. ಅದರಲ್ಲೂ ಅಡುಗೆ ಅನಿಲ ಸಿಲಿಂಡರ್ ಸಾಗಿಸುವ ಲಾರಿಗಳು, ಪೆಟ್ರೋಲ್-ಡೀಸೆಲ್ ಸಾಗಿಸುವ ಲಾರಿಗಳು, ಗ್ಯಾಸ್ ಟ್ಯಾಂಕರ್ಗಳು ಹೆಚ್ಚಾಗಿ ಸಂಚರಿಸುವ ಈ ರಸ್ತೆ ಸಂಪೂರ್ಣ ಹಳ್ಳಕೊಳ್ಳಗಳಿಂದ ತುಂಬಿತ್ತು. ನಾಗರೀಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ರಸ್ತೆಗೆ ಕಲ್ಲಿನ ಪುಡಿ ಮತ್ತು ಜಲ್ಲಿಕಲ್ಲುಗಳನ್ನು ತಂದು ಸುರಿದು ಮಟ್ಟ ಮಾಡಲಾಗಿದೆ. ಈಗ ಇದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಧೂಳಿನ ಹೆದ್ದಾರಿ: ರಸ್ತೆಯ ತುಂಬಾ ಧೂಳು ಪ್ರಯಾಣಿಕರಿಗೆ ನರಕಯಾತನೆ ಅನುಭವಿಸುವಂತೆ ಮಾಡುತ್ತಿದೆ. ದೊಡ್ಡಬಳ್ಳಾಪುರದಿಂದ ನೆಲಮಂಗಲಕ್ಕೆ ದಿನನಿತ್ಯ ಸಂಚರಿಸುವ ನೂರಾರು ವಾಹನಗಳು, ಬಸ್ಸುಗಳಲ್ಲಿ ಜನ ಮೂಗು ಮುಚ್ಚಿಕೊಂಡು ಪ್ರಯಾಣಿಸುವ ಅನಿವಾರ್ಯತೆ ಬಂದೊದಗಿದೆ. ಜೊತೆಗೆ ದ್ವಿಚಕ್ರವಾಹನ ಸವಾರರಿಗಂತೂ ರಸ್ತೆ ನರಕದ ಹಾದಿಯಾಗಿದೆ. ಪಕ್ಕದಲ್ಲಿ ದೊಡ್ಡ ವಾಹನ ಹೋಗುತ್ತಿದ್ದರೆ ಹಿಂದೆಯೂ ಹೋಗಲು ಸಾಧ್ಯವಿಲ್ಲ. ಪಕ್ಕದಲ್ಲೂ ಸಂಚರಿಸಲು ಆಗಲ್ಲ. ವಾಹನಗಳು ಓಡಾಡುವಾಗ ಏಳುವ ಧೂಳು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಅಪಘಾತಗಳಿಗೂ ಆಹ್ವಾನ ನೀಡುತ್ತಿರುವ ಈ 2 ಕಿ.ಮೀ ರಸ್ತೆ ಮೃತ್ಯುಕೂಪವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕನಸವಾಡಿಯ ಮಧುರೆ ಶ್ರೀಶನಿದೇವರ ದೇವಾಲಯಕ್ಕೆ ದಿನನಿತ್ಯ ನೂರಾರು ಭಕ್ತಾದಿಗಳು ರಾಜ್ಯದ ವಿವಿಧ ಭಾಗಗಳಿಂದ ಬರುತ್ತಾರೆ. ಅವರು ದೊಡ್ಡಬಳ್ಳಾಪುರ ಮಾರ್ಗದಲ್ಲಿ ಬಂದರೆ ಈ ರಸ್ತೆಯ ದರ್ಶನ ಪಡೆದೇ ದೇವರ ದರ್ಶನ ಪಡೆಯಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಜನಪ್ರತಿನಿಧಿಗಳೂ ಈ ಬಗ್ಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
ರಸ್ತೆ ಕಾಮಗಾರಿ ಯಾವಾಗ: ಕಳೆದ 4 ವರ್ಷಗಳಿಂದ ನಿರಂತರವಾಗಿ ಇಲ್ಲಿನ ಜನ ತೊಂದರೆ ಅನುಭವಿಸುತ್ತಿದ್ದಾರೆ.
ಬಂದ ಜನಪ್ರತಿನಿಧಿಗಳೆಲ್ಲಾ ಸದ್ಯದಲ್ಲೇ ಕಾಮಗಾರಿ ಆರಂಭವಾಗುತ್ತೆ ಎಂಬ ಭರವಸೆ ಕೊಡುತ್ತಾರೆ. ಆದರೆ ಕೆಲಸವಂತೂ ಆಗಿಲ್ಲ. ಆದರೆ ಈಗ ನೆಲಮಂಗಲದಿಂದ ಚಿಕ್ಕಬಳ್ಳಾಪುರಕ್ಕೆ ದೊಡ್ಡಬಳ್ಳಾಪುರದ ಮೂಲಕ ಸಂಪರ್ಕ ಕಲ್ಪಿಸುವ 60 ಕಿ.ಮೀ ರಸ್ತೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ ಎನ್ನಲಾಗುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಯೋಜನೆಗೆ ಹಣ ಮಂಜೂರಾಗಿರುವ ಕುರಿತು ಪ್ರಸ್ತಾಪಿಸಿರುವ ಸ್ಥಳೀಯ ಶಾಸಕರು ಸದ್ಯದಲ್ಲೇ ಯೋಜನೆ ಮುಖ್ಯಮಂತ್ರಿಗಳಿಂದ ಚಾಲನೆಗೊಳ್ಳಲಿದೆ ಎಂಬ ಮಾತನ್ನಾಡಿದ್ದಾರೆ. ಆದರೆ ಯಾವಾಗ ಆರಂಭವಾಗುತ್ತದೆ ಎಂಬುದು ಜನರ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

