ಡಿಕೆಶಿಯಿಂದ ಶುದ್ಧ ನೀರು ಆಂದೋಲನ
ಕನಕಪುರ: ಉಳ್ಳವರ ಸ್ವತ್ತಾಗಿದ್ದ ಪರಿಶುದ್ಧ ನೀರಿನ ಬಳಕೆಯನ್ನು ಬಡಜನರಿಗೆ ತಲುಪಿಸಬೇಕೆನ್ನುವ ಹಂಬಲ ಗದಗ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು ರಾಜ್ಯದಾದ್ಯಂತ ಜನಾಂದೋಲನವಾಗಿ ರೂಪುಗೊಳ್ಳಬೇಕು. ಶಾಸಕ ಡಿ.ಕೆ. ಶಿವಕುಮಾರ್ ಕನಕಪುರ ತಾಲೂಕಿನಾದ್ಯಂತ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಆಂದೋಲನಕ್ಕೆ ಭೀಮಬಲ ತಂದಿತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಅವರು ಕನಕಪುರದ ರೂರಲ್ ಪೋಲೀಸ್ ಠಾಣೆ ಸಮೀಪ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಪರಿಶುದ್ಧ ನೀರು ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಸಾನ್ನಿಧ್ಯ ವಹಿಸಿದ್ದ ದೇಗುಲಮಠದ ಮುಮ್ಮಡಿ ನಿರ್ವಾಣಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಧಾನಿ ಉಪಯೋಗಿಸುವಂತಹ ಶುದ್ಧವಾದ ನೀರು ಒದಗಿಸಬೇಕು. ಜನರ ಬಹುಪಾಲು ರೋಗಗಳಿಗೆ ಕಲುಷಿತ ನೀರೇ ಕಾರಣವಾಗಿದ್ದು ಶುದ್ಧ ನೀರಿನ ಬಳಕೆ ಆರೋಗ್ಯವಂತ ಸಮುದಾಯ ರೂಪಿಸುವುದಲ್ಲದೆ, ಸಮಾನತೆ, ಸ್ವಾಭಿಮಾನಗಳನ್ನು ಮೂಡಿಸುತ್ತದೆ. ಇಂದಿಗೂ ಭಾರತದಲ್ಲಿ 26 ಕೋಟಿ ಜನರು ಅಶುದ್ಧ ನೀರು ಸೇವಿಸುತ್ತಿದ್ದಾರೆ. ಸುಮಾರು 6 ಕೋಟಿ ಮಂದಿ ಫ್ಲೋರೈಡ್ ಯುಕ್ತ ನೀರಿನ ಸೇವನೆಯಿಂದ ಬಳಲುತ್ತಿದ್ದಾರೆ. ವಿಪರ್ಯಾಸವೇನೆಂದರೆ ಶುದ್ಧ ನೀರು ಮೂಲಭೂತ ಹಕ್ಕು ಎಂಬುದನ್ನೇ ಜನರು ಪರಿಗಣಿಸಿಲ್ಲ ಎಂದು ಎಚ್.ಕೆ.ಪಾಟೀಲ್‌ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಡಿ.ಕೆ. ಸುರೇಶ್ ಮಾತನಾಡುತ್ತಾ, ಕನಕಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆ 35 ಪರಿಶುದ್ಧ ನೀರುಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಒಂದು ಘಟಕಕ್ಕೆ 13 ಲಕ್ಷ ವ್ಯಯಿಸಲಾಗುತ್ತಿದೆ. ಟ್ರಸ್ಟ್ ವತಿಯಿಂದಲೇ ಎಲ್ಲಾ ಖರ್ಚುಗಳನ್ನು ಭರಿಸುತ್ತಿದ್ದು ನಿರ್ವಹಣೆಯ ಹೊಣೆಗಾರಿಕೆನ್ನೂ ನಿಭಾಯಿಸುತ್ತಿದೆ.
ಈ ತಿಂಗಳಾಂತ್ಯಕ್ಕೆ 20 ಘಟಕಗಳು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳ್ಳಲಿವೆ. ಟ್ರಸ್ಟ್ ವತಿಯಿಂದ ಪ್ರತಿ ಕುಟುಂಬಕ್ಕೂ ಉಚಿತವಾಗಿ ನೀರುಸಂಗ್ರಹಣಾ ಕ್ಯಾನ್‌ಗಳನ್ನು ವಿತರಿಸಲಾಗುತ್ತಿದೆ. ಜನರು 2ರು. ನೀಡಿದರೆ 20 ಲೀಟರ್ ಪರಿಶುದ್ಧ ನೀರು ದೊರೆಯುತ್ತದೆ ಎಂದು ವಿವರಗಳನ್ನು ನೀಡಿದರು.
ಯೋಜನೆ ಸದುಪಯೋಗ ಪಡಿಸಿಕೊಳ್ಳಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಕೆ. ಶಿವಕುಮಾರ್, ಎಚ್.ಕೆ.ಪಾಟೀಲರ ಯೋಜನೆಯಿಂದ ಉತ್ತೇಜಿತರಾಗಿ ಪ್ರಾರಂಭಿಸುತ್ತಿರುವ ಈ ಯೋಜನೆಯು ಜನರ ಆರೋಗ್ಯ, ಜೀವನಮಟ್ಟಗಳ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಎಲ್ಲರೂ ಪ್ರಯೋಜನ ಹೊಂದಬೇಕು ಎಂದರು.
ತಾಲೂಕಿನ ಸುಮಾರು 280 ಗ್ರಾಮಗಳಿಗೆ 150 ಕೋಟಿ ವೆಚ್ಚದಲ್ಲಿ ಕುಡಿಯಲು ಕಾವೇರಿ ನೀರು ಸರಬರಾಜು ಯೋಜನೆ ಪ್ರಗತಿಯ ಹಂತದಲ್ಲಿದ್ದು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ತಾಲೂಕಿನಲ್ಲಿ 60 ಕಿಮೀ ಉದ್ದ ಅರ್ಕಾವತಿ, ಕಾವೇರಿ ನದಿಗಳು ಹರಿದರೂ ಕಲುಷಿತ ನೀರಿನಿಂದಾಗಿ ಜನ, ಜಾನುವಾರು ಬಳಕೆಗೆ ಬಾರದಂತಾಗಿದೆ. ಅಲ್ಲಿಯವರೆಗೆ ಜನರಿಗೆ ಕುಡಿಯಲು ಪರಿಶುದ್ಧ ನೀರು ಒದಗಿಸಲು ಯೋಜನೆ ಸಹಾಯಕವಾಗಿದೆ ಎಂದು ಶಿವಕುಮಾರ್ ನುಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಜಿ ವಿಪ ಸದಸ್ಯ ಎಸ್.ರವಿ, ಪುರಸಭಾಧ್ಯಕ್ಷ ಆರ್.ಕೃಷ್ಣಮೂರ್ತಿ, ಉಪಾಧ್ಯಕ್ಷೆ ನಿರ್ಮಲಾ, ತಾಪಂ ಅಧ್ಯಕ್ಷೆ ನಾಗರತ್ನ, ಮಾಜಿ ಅಧ್ಯಕ್ಷ ಪುರುಷೋತ್ತಮ್, ಉಪಾಧ್ಯಕ್ಷ ಬಿ.ಎಸ್.ರವಿಕುಮಾರ್, ಜಿಪಂ ಸದಸ್ಯೆ ನಳಿನಾ ರವಿಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ವಿಜಯದೇವ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಕೆಂಪರಾಜು, ಶ್ರೀನಿವಾಸ್, ತಹಸೀಲ್ದಾರ್ ಡಾ.ದಾಕ್ಷಾಯಣಿ, ಬೆಂಮಪಾ ಉಪಮಹಾಪೌರ ಸುಂದರಾಜ್, ಮಹಾಬಲೇಶ್, ವೈ.ಶ್ರೀನಿವಾಸ್, ಮುನಿಯಪ್ಪ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್‌ರವರನ್ನು ಸನ್ಮಾನಿಸಲಾಯಿತು.
ಮುಖಂಡ ಎಸ್.ವಿ. ಗೋವಿಂದರಾಜು ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಚಿನ್ನರಾಜು ನಿರೂಪಿಸಿದರು. ಜಿಪಂ ಸದಸ್ಯ ವೆಂಕಟೇಶಯ್ಯ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

