ಬೆಂಗಳೂರು ಗ್ರಾಮಾಂತರ

ಪ್ರಮುಖ ರಸ್ತೆ ಅಗಲೀಕರಣ ಹಣ ಕೃಷ್ಣಾರ್ಪಣ

Published On :

ದೊಡ್ಡಬಳ್ಳಾಪುರ: ನಗರದ ಪ್ರಮುಖ ರಸ್ತೆಗಳ ಅಗಲೀಕರಣ ಸದ್ಯಕ್ಕೆ ಯಾರಿಗೂ ಬೇಡದ ವಿಚಾರವಾಗಿದೆ. ಅಗಲೀಕರಣದ ಬೆದರು ಬೊಂಬೆಗೆ ಬೆದರಿ ಆಸ್ತಿಪಾಸ್ತಿಗಳನ್ನು ನಷ್ಟ ಮಾಡಿಕೊಂಡವರು, ಸೂರು ಕಳೆದುಕೊಂಡು ಕಂಗಾಲಾದವರು ನಗರಸಭೆ ಉದಾಸೀನ ಧೋರಣೆಗೆ ಹಿಡಿಶಾಪ ಹಾಕುತ್ತಿದ್ದರೆ, ಮತ್ತೊಂದೆಡೆ ನಗರಸಭೆ ನಿಧಿಯಲ್ಲಿ ಅಗಲೀಕರಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಲು ಸ್ವತಃ ನಗರಸಭೆಯೇ ನಿರ್ಣಯ ಕೈಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಂದಹಾಗೆ ಕಳೆದ ಡಿಸೆಂಬರ್‌ನಲ್ಲೇ ಈ ನಿರ್ಣಯವಾಗಿದ್ದು, ಸಾಮಾನ್ಯಸಭೆಯಲ್ಲಿ ಹಾಜರಿದ್ದ 27 ಸದಸ್ಯರೂ ನಡಾವಳಿಗೆ ಸಹಿ ಮಾಡಿದ್ದಾರೆ. ತೀರ್ಮಾನ ಸಂಖ್ಯೆ 1ರಲ್ಲಿ ದಾಖಲಿಸಿರುವಂತೆ ಮಳೆ ಇಲ್ಲದ ಕಾರಣ, ನೀರಿನ ಬವಣೆ ನಿವಾರಿಸುವ ಸಲುವಾಗಿ, ಜತೆಗೆ ತೆರಿಗೆ ಪಾವತಿ ಸರಿಯಾಗಿ ಆಗದ ಕಾರಣ ನೀಡಲಾಗಿದೆ. ಹೀಗಾಗಿ ನಗರಸಭಾ ನಿಧಿಯಡಿ ಕೈಗೊಂಡಿರುವ ಕಾಮಗಾರಿಗಳಿಗೆ ಬಿಲ್ಲುಗಳನ್ನು ಪಾವತಿಸಲು ತೊಂದರೆಯಾಗುತ್ತಿರುವುದರಿಂದ ರಸ್ತೆಗಳ ಅಭಿವೃದ್ಧಿ ಕೆಲಸಕ್ಕೂ ಹಣ ಬೇಕಿರುವುದರಿಂದ ಅಗಲೀಕರಣಕ್ಕೆ ಮೀಸಲಿಟ್ಟಿದ್ದ ಕ್ರೋಢಿಕೃತ ಹಣವನ್ನು ವಿನಿಯೋಗಿಸಲು ಒಪ್ಪಿಗೆ ಪಡೆಯಲಾಗಿದೆ.
ಅಗಲೀಕರಣಕ್ಕೆ ಗ್ರಹಣ: ರಸ್ತೆ ಅಗಲೀಕರಣಕ್ಕೆ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುವ ಲಕ್ಷಣ ಕಾಣುತ್ತಿಲ್ಲ. ಸ್ವಾಧೀನ ಮಾಡಿಕೊಳ್ಳುವ ಸ್ವತ್ತುಗಳಿಗೆ ಸರ್ಕಾರಿ ಕಾನೂನಿನಂತೆ ಪರಿಹಾರ ನೀಡಿ ಅಗಲೀಕರಣ ಮಾಡಿಕೊಳ್ಳಬಹುದು ಎಂಬುದಾಗಿ ಕೋರ್ಟ್ ಮಾರ್ಗದರ್ಶನವಿದ್ದರೂ, ನಗರಸಭೆ ಹಲವು ನೆಪ ಹೇಳಿಕೊಂಡು ತೂಕಡಿಸುತ್ತಿದೆ. ರಸ್ತೆ ಅಗಲೀಕರಣವನ್ನು ತರಾತುರಿಯಲ್ಲಿ ನಡೆಸುವ ಆತುರ ತೋರಿ ನಗೆಪಾಟಲಿಗೀಡಾದ ನಗರಸಭೆ ನಂತರ ತನ್ನನ್ನು ತಾನು ಸಮರ್ಥಿಸಿಕೊಳ್ಳುವಲ್ಲಿಯೂ ವೈಫಲ್ಯ ಅನುಭವಿಸಿತು. ಇದಕ್ಕೆ ಸ್ವಯಂಕೃತ ತಪ್ಪು ನೇರ ಕಾರಣ. ಆದರೆ ಈ ಹುಡುಗಾಟದಲ್ಲಿ ಬಲಿಪಶುವಾದವರು ಮಾತ್ರ ಅಮಾಯಕ ಜನ. ಅಕ್ಷರಶಃ ಇಲ್ಲಿನ ಕೊಂಗಾಡಿಯಪ್ಪ ಮುಖ್ಯರಸ್ತೆ ಮತ್ತು ಅನಕೃ ರಸ್ತೆಯ ಜನರ ಬದುಕು ಬೀದಿಗೆ ಬಿದ್ದಿದೆ.
ಭರವಸೆ ಈಡೇರಲಿಲ್ಲ: ಇನ್ನು ಶತಾಯಗತಾಯ ಅಗಲೀಕರಣ ಮಾಡಿಯೇ ತೀರುವ ಭರಾಟೆ ತೋರಿದ ಜನ ಈಗ ಈ ಬಗ್ಗೆ ಮಾತನಾಡುತ್ತಿಲ್ಲ. ಯೋಜನೆಗೆ ಸಿಎಂ ವಿಶೇಷ ನಿಧಿಯಿಂದ 23 ಕೋಟಿ ತರುವುದಾಗಿ ಹೇಳಿದ್ದ ಶಾಸಕರು ಈ ಬಗ್ಗೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ. ನಗರಸಭೆಯವರು ಸಿಎಂಗೆ ಮನವಿ ಕೊಟ್ಟರೇ ವಿನಃ ಅದನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆ ಪ್ರದರ್ಶಿಸುವ ಪ್ರಾಮಾಣಿಕ ಯತ್ನವನ್ನಂತೂ ಮಾಡಲೇ ಇಲ್ಲ. ಸಿಎಂ ವಿಶೇಷ ನಿಧಿ ಪ್ರಕಟವಾಗಬೇಕಾದದ್ದು ಬಜೆಟ್‌ನಲ್ಲಿ. ಆದರೆ ಕಳೆದ ಬಾರಿಯ ಬಜೆಟ್‌ಗೆ ಮುನ್ನ ಸಿಎಂರನ್ನು ಭೇಟಿ ಮಾಡಿ ಈ ಬಗ್ಗೆ ಒತ್ತಡ ಹೇರುವ ಪ್ರಯತ್ನ ನಡೆಯಲಿಲ್ಲ. ಅದೇ ಚಾಳಿ ಈ ಬಾರಿಯೂ ಮುಂದುವರೆದಿದೆ. ಈ ಬಾರಿಯ ರಾಜ್ಯ ಬಜೆಟ್‌ನಲ್ಲೂ ಈ ಬಗ್ಗೆ ಯಾವುದೇ ಹೊಸ ಆಶಾಭಾವನೆ ಮೂಡುವುದಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
ಪ್ರಜ್ಞಾಶೂನ್ಯ: ಈ ಬಗ್ಗೆ ವ್ಯಾಪಕ ಟೀಕೆಗಳೂ ಕೇಳಿಬಂದಿದ್ದು ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿರುವ ಜನರಿಗೆ ಪ್ರಜ್ಞಾಶೂನ್ಯತೆ ಕಾಡುತ್ತಿದೆ. ಮುನ್ನೋಟದ ಪರಿಕಲ್ಪನೆಯೇ ಇಲ್ಲದಂತೆ ಇದ್ದುದರಲ್ಲಿ ತೂಗಿಸಿಕೊಂಡು ಹೋಗಿಬಿಡುವ ಆತುರದಲ್ಲಿ ನಗರದ ಭವಿಷ್ಯ ಡೋಲಾಯಮಾನವಾಗಿದೆ.
ಬೆಳೆಯುತ್ತಿರುವ ನಗರಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಚಿಂತನೆ ಬೇಕಿದೆ. ಜಡ್ಡುಗಟ್ಟಿರುವ ನಗರಸಭೆಯ ದೃಷ್ಟಿಕೋನ ಬದಲಾಗಬೇಕಿದೆ. ಸರಿಯಾಗಿ ತೆರಿಗೆ ಪಾವತಿ ಮಾಡಲಾಗದ ದುಸ್ಥಿತಿ ಏಕೆ ಬಂದಿದೆ ಎಂಬುದರ ಬಗ್ಗೆ ಚಿಂತನೆ ನಡೆಯಬೇಕು. ಸಾರ್ವಜನಿಕ ಹಿತಾಸಕ್ತಿಯ ಕಡೆಗಣನೆ ಮತ್ತು ತಕ್ಷಣದ ಅಭಿವೃದ್ಧಿಯ ಮುಖವಾಡದಲ್ಲಿ ಶಾಶ್ವತ ಅಭಿವೃದ್ಧಿ ಮರೆತಿರುವ ಜನ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.
-ಕೆ.ಆರ್. ರವಿಕಿರಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.