'ಬಲದಂಡೆ ನಾಲೆ ನೀರು ನಿಲ್ಲಿಸಬೇಡಿ'
ರಾಮನಗರ: ಬೈರಮಂಗಲ ಬಲದಂಡೆ ನಾಲೆಯಲ್ಲಿ ಏಕಾಏಕಿ ನೀರು ನಿಲುಗಡೆಗೆ ಮುಂದಾಗಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಚ್ಚುಕಟ್ಟು ಪ್ರದೇಶದ ರೈತರು ಇದೀಗ ಹೋರಾಟದ ಹಾದಿ ಹಿಡಿದಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಸಣ್ಣ ನೀರಾವರಿ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತರು, ನೀರು ನಿಲುಗಡೆ ಕ್ರಮ ಅವೈಜ್ಞಾನಿಕವಾಗಿದೆ. ಇದರಿಂದ ಅಚ್ಚುಕಟ್ಟು ಪ್ರದೇಶದ 30ಕ್ಕೂ ಹೆಚ್ಚು ಗ್ರಾಮಗಳ ರೈತರು ಬೆಳೆ ನಷ್ಟಕ್ಕೆ ಒಳಗಾಗುತ್ತಾರೆ ಎಂದು ದೂರಿದರು.
ಬೈರಮಂಗಲ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ಹಲವಾರು ಬೆಳೆಗಳನ್ನು ಬಿತ್ತಲಾಗಿದೆ. ಏಕಾಏಕಿ ನೀರು ನಿಲ್ಲಿಸಿದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿರುವ ಕಬ್ಬು, ರೇಷ್ಮೆ, ಜೋಳ ಹಾಗೂ ಮೇವಿನ ಹುಲ್ಲು ಸಂಪೂರ್ಣ ನಾಶವಾಗುವ ಸಂಭವವಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಈ ಜಿಲ್ಲೆಯ ರೈತರು ಭೀಕರ ಬರದಿಂದ ಮೊದಲೇ ಕಂಗೆಟ್ಟಿದ್ದಾರೆ. ಈ ಮಧ್ಯೆ, ನಾಲೆಯಲ್ಲಿ ನೀರು ನಿಲುಗಡೆ ಮಾಡಿದಲ್ಲಿ ಜಾನುವಾರುಗಳ ಮೇವಿಗೂ ಅಭಾವ ತಲೆದೋರುತ್ತದೆ. ಇಷ್ಟಕ್ಕೂ ನೀರು ಪೂರೈಕೆಯಲ್ಲಿ ಕೊರತೆ ಎದುರಾಗಿಲ್ಲ. ದುರಸ್ತಿ ನೆಪದಲ್ಲಿ ಹಣ ಲೂಟಿಗಾಗಿ ಅಧಿಕಾರಿಗಳು ಈ ಕುತಂತ್ರ ನಡೆಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಕಳೆದ ಜೂನ್, ಜುಲೈನಲ್ಲಿ ನಾಲೆ ದುರಸ್ತಿಪಡಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು. ಆಗ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳದ ಇಲಾಖೆ ಅಧಿಕಾರಿಗಳು ಈಗ ಏಕಾಏಕಿ ದುರಸ್ತಿ ನೆಪ ಹೇಳಿ, ನೀರು ನಿಲ್ಲಿಸಲು ಹೊರಟಿದ್ದಾರೆ. ಇದನ್ನು ಗಮನಿಸಿದರೆ, ಅಧಿಕಾರಿಗಳಿಗೆ ಇರುವ ರೈತಪರ ಕಾಳಜಿ ಅರ್ಥವಾಗುತ್ತದೆ ಎಂದು ಛೇಡಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಅಚ್ಚಕಟ್ಟು ಪ್ರದೇಶದ ವ್ಯಾಪ್ತಿಯ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ, ರೈತರ ಸಭೆ ನಡೆಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವವರೆಗೂ ನಾಲೆ ದುರಸ್ತಿ ಕಾರ್ಯ ಆರಂಭಿಸಬಾರದು ಹಾಗೂ ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡಬಾರದು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಲಕ್ಷ್ಮಣಸ್ವಾಮಿ, ಶಿವಮಾದೇಗೌಡ, ಪರಮೇಶ, ಕೃಷ್ಣೇಗೌಡ, ಪುಟ್ಟಸ್ವಾಮಿಗೌಡ, ರಾಮು, ರಾಮಕೃಷ್ಣಯ್ಯ, ನಾಗರಾಜು, ಬಾಬುರಾವ್, ಅಮರನಾರಾಯಣ, ವೆಂಕಟೇಶ, ಕೃಷ್ಣ, ಹೊನ್ನಸಿದ್ದಯ್ಯ, ಅನಂತರಾಮ್ ಪ್ರಸಾದ್ ಭಾಗವಹಿಸಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

