ಸಮ್ಮೇಳನ ಯಶಸ್ವಿಗೊಳಿಸಿ: ಯೋಗೇಶ್ವರ್
ರಾಮನಗರ: ಸಂಪನ್ಮೂಲದ ಚಿಂತೆ ಬಿಡಿ. ಸಕ್ರಿಯ ಪಾಲ್ಗೊಳ್ಳುವಿಕೆ ಮೂಲಕ ಸಮ್ಮೇಳನ ಯಶಸ್ವಿಗೊಳಿಸಿದರೆ ಸಾಕೆಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ನೀಡಿದ ಸಂದೇಶ ಅಧಿಕಾರಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತು.
ರಾಮನಗರ ಜಿಲ್ಲಾ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಬಂಧ ಚನ್ನಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಇಂಥದ್ದೊಂದು ಪ್ರಸಂಗ ನಡೆಯಿತು. ಕಿಸೆಗೆ ಕತ್ತರಿ ಭೀತಿಗೆ ಒಳಗಾಗಿದ್ದ ಅಧಿಕಾರಿಗಳು ಸಭೆ ಅಧ್ಯಕ್ಷತೆ ವಹಿಸಿದ್ದ ಸಚಿವರ ಮಾತಿನಿಂದ ನಿರುಮ್ಮಳರಾದರು.
ಸಭೆ, ಸಮಾರಂಭ, ಸಮಾವೇಶಗಳೆಂದರೆ ಅಧಿಕಾರಿಗಳು ಬೆಚ್ಚಿ ಬೀಳುವುದು ಸಹಜ. ಅದರಲ್ಲೂ ಸಚಿವರು, ಪ್ರಭಾವಿಗಳು, ಜಿಲ್ಲಾಡಳಿತವೇ ಖುದ್ದು ನಿಂತು ನಡೆಸಲು ಮುಂದಾಗಿರುವ ಈ ಕಾರ್ಯಕ್ರಮಕ್ಕೆ ತಮ್ಮಿಂದ ಎಷ್ಟು ದೇಣಿಗೆ ಬಯಸುವರೋ ಎನ್ನುವ ಚಿಂತೆಯಲ್ಲೇ ಅಧಿಕಾರಿಗಳು ಮುಳುಗಿದ್ದರು.
ಈ ಪೂರ್ವಭಾವಿ ಸಭೆಗೆ ರಾಮನಗರ ಮತ್ತು ಚನ್ನಪಟ್ಟಣದ ಆಯಕಟ್ಟಿನ ಹುದ್ದೆಗಳಲ್ಲಿರುವ ಅಧಿಕಾರಿಗಳೆಲ್ಲರ ಕಡ್ಡಾಯ ಹಾಜರಾತಿಗೆ ಸೂಚಿಸಲಾಗಿತ್ತು. ಒಂದೆಡೆ ಜಿಲ್ಲಾಡಳಿತ, ಇನ್ನೊಂದೆಡೆ ಸಚಿವರ ಆಪ್ತ ಸಿಬ್ಬಂದಿ ಸಭೆಯಲ್ಲಿ ಯಾರಿದ್ದಾರೆ, ಯಾರಿಲ್ಲವೆಂದು ದೃಷ್ಟಿ ಹಾಯಿಸಿದ್ದೂ ಉಂಟು.
ಇಷ್ಟೆಲ್ಲವನ್ನೂ ಗಮನಿಸಿದ ಅಧಿಕಾರಿಗಳು ತಮಗೆ ಈ ಸಭೆಯಲ್ಲೇ ದೇಣಿಗೆ ನಿಗದಿ ಆಗುತ್ತದೆ ಅಂದುಕೊಂಡು ವಿಲವಿಲ ಒದ್ದಾಡುತ್ತಿದ್ದರು. ಆದರೆ, ಯೋಗೇಶ್ವರ್ ಮಾತಿನಿಂದ ಚಿಂತೆ ದೂರವಾಗಿ ಅಧಿಕಾರಿಗಳು ಫುಲಲ್ಖುಷ್ ಆದರು.
ಬದ್ಧತೆ ಪ್ರದರ್ಶಿಸಿ: ಸಾಹಿತ್ಯ ಸಮ್ಮೇಳನಕ್ಕೂ ನಮಗೂ ಸಂಬಂಧವಿಲ್ಲವೆನ್ನುವಂತೆ ಅಧಿಕಾರಿಗಳು ವರ್ತಿಸಬಾರದು. ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ನಾಡು-ನುಡಿಯ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಬೇಕು. ಸಮ್ಮೇಳನವು ನಾಡ ಹಬ್ಬದಂತೆ ವಿಜೃಂಭಣೆಯಿಂದ ನಡೆಯಬೇಕು ಎಂದು ಯೋಗೇಶ್ವರ್ ಕಿವಿಮಾತು ಹೇಳಿದರು.
ಫೆ.22 ಮತ್ತು 23ರಂದು ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಅದರಲ್ಲಿ ಅಧಿಕಾರಿಗಳು ತಮ್ಮಲ್ಲಿರುವ ಸಾಹಿತ್ಯ, ಕಲೆಯ ಪ್ರತಿಭೆ ಹೊರಸೂಸಬೇಕು. ಇಲಾಖೆಗಳು ಕೈಗೊಂಡಿರುವ ಜನಪರ ಕಾರ್ಯಕ್ರಮಗಳು, ಅಭಿವೃದ್ಧಿ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಬೇಕು ಎಂದು ಸೂಚಿಸಿದರು.
ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖಾಧಿಕಾರಿಗಳನ್ನು ಒಳಗೊಂಡ ಉಪ ಸಮಿತಿಗಳನ್ನು ರಚಿಸಲಾಗುವುದು. ಸಮಿತಿಗಳಿಗೆ ವಹಿಸುವ ಕೆಲಸವನ್ನು ಎಲ್ಲರೂ ನಿಷ್ಠೆಯಿಂದ ನಿರ್ವಹಿಸಬೇಕು. ಇನ್ನೊಂದು ವಾರದಲ್ಲಿ ಮತ್ತೊಂದು ಸಭೆ ಕರೆಯಲಾಗುವುದು ಎಂದು ಅವರು ತಿಳಿಸಿದರು.
20 ಲಕ್ಷ ಅಂದಾಜು: ಸಿದ್ಧಪಡಿಸಿರುವ ಅಂದಾಜು ಪ್ರಕಾರ ಸಮ್ಮೇಳನಕ್ಕೆ 15 ರಿಂದ 20 ಲಕ್ಷ ವೆಚ್ಚವಾಗಲಿದೆ. ಸಾಹಿತ್ಯಾಸಕ್ತರು, ಸಂಘ-ಸಂಸ್ಥೆಗಳು, ಕೈಗಾರಿಕೆಗಳ ಮಾಲೀಕರಿಂದ ಸಂಪನ್ಮೂಲ ಸಂಗ್ರಹಿಸೋಣ. ಅಧಿಕಾರಿಗಳು ಖುದ್ದು ನಿಂತು ಸಮ್ಮೇಳನ ಯಶಸ್ವಿಗೊಳಿಸಿ ಎಂದು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ಸು.ತ.ರಾಮೇಗೌಡ, ಬಿ.ಟಿ.ಚಿಕ್ಕಪುಟ್ಟೇಗೌಡ, ಕೆಂಪಯ್ಯ ಮಾತನಾಡಿದರು. ಎಸ್ಪಿ ಅನುಪಮ್ ಅಗ್ರವಾಲ್, ಉಪ ವಿಭಾಗಾಧಿಕಾರಿ ಡಾ.ಸ್ನೇಹ, ತಹಸೀಲ್ದಾರ್ ಅರುಣ ಪ್ರಭ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸಿ.ರಾಜಶೇಖರ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

