ಸ್ವಂತ ಬಲದಿಂದ ಮಾದರಿ ಮಾಗಡಿ: ಕೃಷ್ಣಮೂರ್ತಿ
ಮಾಗಡಿ: ಆರು ದಶಕಗಳು ಕಳೆದರೂ ಏಳಿಗೆಯಾಗದ ಕ್ಷೇತ್ರ ಎಂದರೆ ಮಾಗಡಿ. ನನ್ನನ್ನು ಕೇವಲ 5 ವರ್ಷ ಶಾಸಕನನ್ನಾಗಿ ಮಾಡಿ, ಸರ್ಕಾರದ ಹಣ ಬೇಕಿಲ್ಲ, ಸ್ವಂತ ಬಲದಿಂದಲೇ ಅಳಿವಿನಂಚಿನಲ್ಲಿರುವ ಮಾಗಡಿ ಕೆಂಪೇಗೌಡರ ನಾಡನ್ನು ಪುನರ್ ನಿರ್ಮಾಣ ಮಾಡಿ ತೋರಿಸುತ್ತೇನೆ ಎಂದು ರಾಜ್ಯ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಅವರು ಘೋಷಿಸಿದರು.
ಅವರು ಮಾಗಡಿ ಐತಿಹಾಸಿಕ ಕೆಂಪೇಗೌಡ ಕೋಟೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 503ನೇ ಅದ್ದೂರಿ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಆರು ದಶಕಗಳು ಕಳೆದರೂ ನಂಜುಂಡಪ್ಪ ವರದಿಯಂತೆ ತೀರಾ ಹಿಂದುಳಿದ ಗುಡ್ಡಗಾಡು ಮಾಗಡಿಗೆ ನೀರಾವರಿ ಯೋಜನೆಗಳಿಲ್ಲ, ಜನತೆಗೂ ಕುಡಿಯಲು ನೀರಿಲ್ಲ. ಗ್ರಾಮೀಣ ನಿರುದ್ಯೋಗಿಗಳು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಕೈಗಾರಿಕೆಗಳಿಲ್ಲ. ಜನಸೇವೆ ಮಾಡುತ್ತೇನೆ ಎಂದು ಚಂದಾ ವಸೂಲಿ ಮಾಡಿಕೊಂಡು ಶಾಸಕರಾದವರು ಹಣ, ಆಸ್ತಿ ಗಳಿಸಿಕೊಂಡರು. ಕಿಡ್ನಿ, ಕಣ್ಣು ಮಾರಿ ಜೀವನ ಮಾಡುವಂತಹ ಪರಿಸ್ಥಿತಿಗೆ ಇಲ್ಲಿನ ಜನತೆ ತಲುಪಿದ್ದಾರೆ ಎಂದು ವಿಷಾದಿಸಿದರು.
ಕ್ಷೇತ್ರಕ್ಕೆ ಬಂದ ಸರ್ಕಾರಿ ಸವಲತ್ತುಗಳು ಎಲ್ಲಿಗೆ ಹೋದವು. ಕೆಂಪೇಗೌಡರು ಕಟ್ಟಿದ ಕರೆ, ಕಟ್ಟೆಗಳು ಏನಾದವು ಎಂದು ಎಚ್.ಎಂ. ಕೃಷ್ಣಮೂರ್ತಿ ಹೆಸರೇಳದೆ ಶಾಸಕ ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಅಂತರ್ಜಲ ಸಮತೋಲನ ಕಾಪಾಡಿಕೊಳ್ಳಲು ನಾಡಪ್ರಭು ಕೆಂಪೇಗೌಡರು ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದರು. ಕೋತಿಕಟ್ಟೆ ಎಚ್.ಸಿ. ಬಾಲಕೃಷ್ಣ ಉದ್ಯಾನವನವಾಗಿದೆ, ಗೌರಮ್ಮನಕೆರೆ ಶೌಚಾಲಯ ಗುಂಡಿಯಾಗಿದೆ. ಹೊಂಬಾಳಮ್ಮನಕೆರೆಯಲ್ಲಿ ಜಂಡು ಬೆಳೆದು ನಿಂತಿದೆ. ನೀರಾವರಿ ಬಗ್ಗೆ ಕಾಳಜಿಯಿಲ್ಲದ ನಾಯಕ ನಿಮಗೆ ಬೇಕೆ ಎಂದು ಜನತೆಯನ್ನು ಪ್ರಶ್ನಿಸಿದರು.
ದರ್ಪ ದೌರ್ಜನ್ಯ ನಡೆಸುತ್ತಿರುವ ಶಾಸಕರಿಗೆ ಅಂತ್ಯಕಾಲವೂ ಹತ್ತಿರವಿದೆ. ನಾವ್ಯೂರು ಹೇಡಿಗಳಲ್ಲ, ರಾಜಕಾರಣ ನನ್ನ ಜೀವನವಲ್ಲ, ಜನಸೇವೆಯೇ ನನ್ನ ಜೀವನ. ಕ್ಷೇತ್ರದಲ್ಲಿನ ಗಂಡ, ಹೆಂಡತಿಯರು ಮಾತ್ರ ಮತ ಹಾಕಿದರೆ ಸಾಕು 25 ಸಾವಿರ ಮತಗಳ ಅಂತರದಿಂದ ಜಯಗಳಿಸುತ್ತೇನೆ.ಮಾಗಡಿಯನ್ನು ಮಾದರಿಯನ್ನಾಗಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಂಸದೆ ತೇಜಸ್ವಿನಿಗೌಡ ಮಾತನಾಡಿ, ನಾನು ಪೂಜಿಸುವ ಚಾಮುಂಡೇಶ್ವರಿ, ಸೋನಿಯಾಗಾಂಧಿ, ನಾಯಕರಾದ ಆಸ್ಕರ್, ಮಿಸ್ತ್ರಿ, ಜಿ.ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದೇನೆ. ಎಚ್.ಎಂ.ಕೃಷ್ಣಮೂರ್ತಿಗೆ ಟಿಕೇಟ್ ನೀಡಿದ್ದೆ ಆದರೆ ಮಾಗಡಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗುತ್ತದೆ. ಬಿಜೆಪಿ ಮಂತ್ರಿ, ಎಂಎಲ್ಎ ಗಳಿಗೆ ನಾಚಿಕೆ ಇಲ್ಲ, ಮಾನಮರ್ಯಾದೆ ಇದ್ದಿದ್ದರೆ ರಾಜಿನಾಮೆ ಕೊಟ್ಟು ಹೊರಬರುತ್ತಿದ್ದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿದ್ದರು. ಸುತ್ತೂರು ಮಠದ ಶ್ರೀಗಳು, ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥಸ್ವಾಮೀಜಿ, ಹರಗುರುಚರಮೂರ್ತಿ ಭಾಗವಹಿಸಿದ್ದರು.
ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿಯನ್ನು ಮಾಗಡಿ ಕ್ಷೇತ್ರಕ್ಕೆ ಎಂಎಲ್ಎ ಮಾಡದರೆ ನೂರು ಎಂಎಲ್ಎಗೆ ಸಮನಾಗಿ ನಿಲ್ಲುತ್ತಾರೆ ಎಂದ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ, ಎಚ್.ಎಂ.ಕೃಷ್ಣಮೂರ್ತಿ ಕೈಗೊಂಡ ಕೆಂಪೇಗೌಡ ಜಯಂತ್ಯುತ್ಸವ ಸಮಾರಂಭದ ಸಾರ್ಥಕತೆಯನ್ನು ಶ್ಲಾಘಿಸಿದರು. ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸಾ.ರಾ.ಗೋವಿಂದ್, ಪ್ರೇಮ ಕಾರ್ಯಪ್ಪ, ಕೊಂಡಯ್ಯ, ಸೋಮಶೇಖರ್ ಗೌಡ, ಕಂಠೀರವ ಸ್ಟೇಡಿಯಂ ಅಧ್ಯಕ್ಷ ರುದ್ರೇಶ್, ಬಾಲು, ಗೋಪಾಲ, ಡಾ.ದಿವ್ಯ, ಶ್ಯಾಮಸುಂದರ್, ಸ್ವಾಮೇಗೌಡ, ಪುಟ್ಟಸ್ವಾಮಿ,ಮೋಹನ್ ಇತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

