'ಟಿಪ್ಪು ವಿವಿ ಸ್ಥಾಪಿಸಿ, ಮನುವಾದಿಗಳನ್ನು ಧಿಕ್ಕರಿಸಿ'
ದೊಡ್ಡಬಳ್ಳಾಪುರ: ಕೇಂದ್ರದ ಯುಪಿಎ ಸರ್ಕಾರ ರಾಜ್ಯದ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸುವ ಉದ್ದೇಶ ಹೊಂದಿದೆ. ಆದರೆ ಕೆಲ ಪುರೋಹಿತಶಾಹಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಅಡ್ಡಗಾಲು ಹಾಕುತ್ತಿರುವುದು ಖಂಡನೀಯ. ಇಂತಹ ಮನುವಾದಿ ಶಕ್ತಿಗಳನ್ನು ಧಿಕ್ಕರಿಸಬೇಕಿದೆ ಎಂದು ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ಕರೆ ನೀಡಿದೆ.
ನಾಡಪ್ರೇಮಿ ಟಿಪ್ಪುಸುಲ್ತಾನ್ ಹೆಸರಿನಲ್ಲಿ ಸ್ಥಾಪನೆಯಾಗುತ್ತಿರುವ ವಿಶ್ವವಿದ್ಯಾಲಯಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಟಿಪ್ಪು ವಿವಿ ಸ್ಥಾಪನೆ ಆಗಲೇ ಬೇಕು ಎಂದು ಆಗ್ರಹಿಸಿ ಪಿವಿಸಿ (ಎಸ್) ನೇತೃತ್ವದಲ್ಲಿ ಶನಿವಾರ ಇಲ್ಲಿನ ಡಾ.ಅಂಬೇಡ್ಕರ್ ಪುತ್ಥಳಿ ಮುಂಭಾಗದಿಂದ ತಾಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಮತ್ತಿತರರು, ಜಾತ್ಯಾತೀತ ಸಂವಿಧಾನ ಹೊಂದಿರುವ ಭಾರತದಲ್ಲಿ ಎಲ್ಲ ಜಾತಿ, ಧರ್ಮಗಳ ಬಗ್ಗೆ ಸಮನ್ವಯ ಭಾವ ಇರಬೇಕಾಗುತ್ತದೆ. ಹೀಗಾಗಿ ಟಿಪ್ಪು ಹೆಸರಿನ ವಿವಿ ಅನಿವಾರ್ಯ. ಸಂವಿಧಾನದ ಅರಿವಿಲ್ಲದ ಮತೀಯ ಚಿಂತನೆಗಳನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಧರ್ಮಾಂಧರು ಸಮಾಜವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಹೊರಟಿದ್ದಾರೆ. ವಿಜ್ಞಾನ ತಂತ್ರಜ್ಞಾನದ ಆಶಯ ಹೊಂದಿರುವ ಮತ್ತು ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಬೇಕು. ವಿವಿ ಸ್ಥಾಪನೆಗೆ ಒತ್ತಾಯಿಸಿ ಮತ್ತು ಮನುವಾದಿ ಸಿದ್ಧಾಂತಗಳನ್ನು ಧಿಕ್ಕರಿಸಲು ಆಗ್ರಹಿಸಿ ಇಂದು ಪ್ರತಿಭಟನೆ ನಡೆಯುತ್ತಿದೆ ಎಂದು ವಿವರಿಸಿದರು.
ಅಪ್ಪಟ ನಾಡಪ್ರೇಮಿ: ಟಿಪ್ಪು ಅಪ್ಪಟ ನಾಡಪ್ರೇಮಿ. ನಾಡಿನ ಉಳಿವಿಗಾಗಿ ಆತ ಕೊಟ್ಟ ಕೊಡುಗೆ ಅಪಾರ. ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕ ಸಂವೇದನೆಗಳ ಮೂಲಕ ನಾಡನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಗುಲಾಮಗಿರಿಯಿಂದ ಹೊರಗಿಡುವ ಸಂಕಲ್ಪದೊಂದಿಗೆ ನಡೆಸಿದ ಹೋರಾಟ ಐತಿಹಾಸಿಕ ಎಂದು ಬಣ್ಣಿಸಿದರು.
ಪಿವಿಸಿ (ಎಸ್) ತಾ.ಅಧ್ಯಕ್ಷ ಕೆ.ಎ.ಮುನಿಕೃಷ್ಣ, ಉಪಾಧ್ಯಕ್ಷ ಹಣಬೆ ಮೂರ್ತಿ, ಕಾರ್ಮಿಕ ಘಟಕದ ಮುನಿರಾಜು, ಬೆಂಗಳೂರು ವಿಭಾಗೀಯ ಅಧ್ಯಕ್ಷ ಇಂಡ್ಲವಾಡಿ ಬಸವರಾಜು, ಉಪಾಧ್ಯಕ್ಷ ಚಿಕ್ಕನರಸಯ್ಯ, ಕಾರ್ಯದರ್ಶಿ ಕೆ.ಎಲ್. ಶಂಕರ್, ಶಾರದಮ್ಮ, ಗೌರಮ್ಮ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

